ಮೂರನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ನೌಕರರ ಹೋರಾಟ

KannadaprabhaNewsNetwork | Published : Dec 10, 2023 1:30 AM

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ಹಾವೇರಿ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರವೂ ಮುಂದುವರಿದಿದ್ದು, ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ಪ್ರಮುಖರು ಮಾತನಾಡಿ, ಬಿಸಿಯೂಟ ತಯಾರಕರನ್ನು ಏಪ್ರಿಲ್ ೧೦ರ ಮೊದಲು ಕೆಲಸ ಮಾಡುತ್ತಿರುವ ಅಡುಗೆಯವರನ್ನೇ ಮುಂದುವರಿಸಬೇಕೆಂದು ಆದೇಶವಿದ್ದರೂ ಆಯುಕ್ತರು ಅಡುಗೆಯವರನ್ನು ಮಾರ್ಚ್‌ ೩೧ಕ್ಕೆ ಬಿಡುಗಡೆಗೊಳಿಸಿ ಜೂ. ೧ಕ್ಕೆ ಪುನಃ ನೇಮಕಾತಿ ಮಾಡಿಕೊಳ್ಳುವಂತೆ ಆದೇಶ ಮಾಡಿದ್ದು, ಅದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾರಕರು ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶನಿವಾರವೂ ಮುಂದುವರಿದಿದ್ದು, ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಈ ವೇಳೆ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ಪ್ರಮುಖರು ಮಾತನಾಡಿ, ಬಿಸಿಯೂಟ ತಯಾರಕರನ್ನು ಏಪ್ರಿಲ್ ೧೦ರ ಮೊದಲು ಕೆಲಸ ಮಾಡುತ್ತಿರುವ ಅಡುಗೆಯವರನ್ನೇ ಮುಂದುವರಿಸಬೇಕೆಂದು ಆದೇಶವಿದ್ದರೂ ಆಯುಕ್ತರು ಅಡುಗೆಯವರನ್ನು ಮಾರ್ಚ್‌ ೩೧ಕ್ಕೆ ಬಿಡುಗಡೆಗೊಳಿಸಿ ಜೂ. ೧ಕ್ಕೆ ಪುನಃ ನೇಮಕಾತಿ ಮಾಡಿಕೊಳ್ಳುವಂತೆ ಆದೇಶ ಮಾಡಿದ್ದು, ಅದನ್ನು ಕೂಡಲೇ ವಾಪಸ್ ಪಡೆದು ಹಿಂದಿನಂತೆ ಆದೇಶ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸಿದ್ದು, ಪ್ರಥಮ ಪೀಠಿಕೆಯಾಗಿ ರಾಜ್ಯ ಆಯುಕ್ತರು 2022 ಡಿ. ೮ರಂದು ಸುತ್ತೋಲೆ ಹೊರಡಿಸಿದ್ದು, ಆದೇಶದಲ್ಲಿ ಮುಖ್ಯೋಪಾಧ್ಯಾಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ಮಾಡಲು ಆದೇಶ ಮಾಡಿದ್ದು ಕೂಡಲೇ ಅದನ್ನು ಹಿಂಪಡೆದು ಹಿಂದಿನಂತೆ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡುಗೆಯವರ ಜಂಟಿ ಬ್ಯಾಂಕ್ ಖಾತೆಯನ್ನೇ ಮುಂದುವರಿಸುವಂತೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕು ಕಾಡಶೆಟ್ಟಿಹಳ್ಳಿ ಗ್ರಾಮದ ವಿ.ಆರ್. ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಲಾ ದೊಡ್ಡಮನಿ ಅವರು ಮರಣ ಹೊಂದಿದ್ದು, ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂಧ ಮತ್ತು ಇಲಾಖೆಯಿಂದ ₹೨೫ ಲಕ್ಷ ಮರಣ ಪರಿಹಾರ ಕೊಡಬೇಕು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅರ್ಹತೆ ಅನುಗುಣವಾಗಿ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಸಂಘಟನಾ ಕಾರ್ಯದರ್ಶಿ ವಿನಾಯಕ ಕುರುಬರ, ಜಿಲ್ಲಾ ಸಮಿತಿ ಅಧ್ಯಕ್ಷೆ ಜಿ.ಡಿ. ಪೂಜಾರ, ಲಲಿತಾ ಬುಶೆಟ್ಟಿ, ರೇಖಮ್ಮ ಬನ್ನೂರ, ಸರೋಜಮ್ಮ ಹಿರೇಮಠ, ಲತಾ ಹಿರೇಮಠ, ಭಾರತಿ ಕಬನೂರ, ಗದಿಗೆಮ್ಮ ಸೇರಿದಂತೆ ಬಿಸಿಯೂಟ ತಯಾರಕರು ಇದ್ದರು.

Share this article