ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರುಉತ್ತರ ಭಾರತದಿಂದ ದೊಡ್ಡಮಟ್ಟದಲ್ಲಿ ಬೆಂಗಳೂರು, ಸುತ್ತಮುತ್ತಲ ಜಿಲ್ಲೆಗಳಿಗೆ ವಲಸೆ ಬರುತ್ತಿರುವವರಲ್ಲಿ ಅಸಂಘಟಿತ ಕಾರ್ಮಿಕರೇ ಹೆಚ್ಚು. ಈ ಅನ್ಯರಾಜ್ಯದ ಕಾರ್ಮಿಕರ ಎದುರು ಅಲ್ಪಸಂಖ್ಯಾತರಂತಾಗಿರುವ ಸ್ಥಳೀಯ ಕಾರ್ಮಿಕರು ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ. ಬೆಂಗಳೂರು ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ವಲಸಿಗ ಕಾರ್ಮಿಕರ ಸಂಖ್ಯೆ 20 ಲಕ್ಷಕ್ಕಿಂತ ಅಧಿಕವಾಗಿದ್ದರೂ ಇವರಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ ಶೇ.5ಕ್ಕಿಂತಲೂ ಕಡಿಮೆ.
ಸಿಲಿಕಾನ್ ಸಿಟಿಯಲ್ಲಿ ಅಸಂಘಟಿತ ಕಟ್ಟಡ, ಗಿಗ್ ಕಾರ್ಮಿಕರಿಂದ ಹಿಡಿದು ಐಟಿ ಉದ್ಯೋಗಿಗಳವರೆಗಿನ ಎಲ್ಲಾ ಹಂತದಲ್ಲಿ ಉತ್ತರ ಭಾರತೀಯರು ತುಂಬುತ್ತಿದ್ದಾರೆ. ಮಾತ್ರವಲ್ಲದೆ, ದೊಡ್ಡಬಳ್ಳಾಪುರ, ರಾಮನಗರ, ತುಮಕೂರು ಸೇರಿ ಸುತ್ತಲ ಜಿಲ್ಲೆಗಳಲ್ಲಿ ಕನ್ನಡಿಗರ ಉದ್ಯೋಗ ಕಸಿಯುತ್ತಿದ್ದಾರೆ ಎಂಬ ಭಾವನೆ ದಟ್ಟವಾಗುತ್ತಿದೆ. ಜತೆಗೆ ಈ ಸಂಬಂಧ ಹೋರಾಟವೂ ರೂಪುಗೊಳ್ಳುತ್ತಿದೆ.ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಗುಜರಾತ್ ಸೇರಿ ಈಶಾನ್ಯ ಭಾಗದ ಸಿಕ್ಕಿಂ, ಅಸ್ಸಾಂ, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ರಾಜ್ಯಗಳ ಕಾರ್ಮಿಕರ ವಲಸೆ ಬೆಂಗಳೂರಿಗೆ ಸರಾಗವಾಗಿದೆ. ಆದರೆ, ಹೀಗೆ ವಲಸೆ ಬರುತ್ತಿರುವವರು ಎಷ್ಟು ಪ್ರಮಾಣದಲ್ಲಿದ್ದಾರೆ? ಇಲ್ಲಿ ಕಾಯಂ ಆಗಿ ನೆಲೆಸಲು ಬರುತ್ತಿರುವವರು ಎಷ್ಟು, ಆರು-ಎಂಟು ತಿಂಗಳು ನಿರಂತರ ಕೆಲಸ ಮಾಡುತ್ತ ಬಂದು ಹೋಗುವವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ಎಲ್ಲೂ ದಾಖಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಮಿಕ ಸಂಘಟನೆಗಳು ವಲಸಿಗ ಕಾರ್ಮಿಕರ ನೋಂದಣಿಗೆ ಪಟ್ಟು ಹಿಡಿದಿವೆ.
ಬರೀ 34 ಸಾವಿರ ನೋಂದಣಿ:ಹೀಗೆ ವಲಸೆ ಬರುವವರು ಅಂತಾರಾಜ್ಯ ವಲಸೆ ಕಾರ್ಮಿಕರ ನಿಯಮದಡಿ ಕಡ್ಡಾಯವಾಗಿ ನೋಂದಣಿ ಆಗಬೇಕು. ಅಸಂಘಟಿತ ವಲಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ, ಪ್ಲಂಬರ್, ಹೆಲ್ಪರ್, ಸ್ವಚ್ಛತೆ ಕೆಲಸಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಲಕ್ಷ ದಾಟುತ್ತದೆ. ಆದರೆ, ಕಾರ್ಮಿಕ ಇಲಾಖೆ ವ್ಯಾಪ್ತಿಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ಕೇವಲ 34,605 ಕಾರ್ಮಿಕರು ಮಾತ್ರ ದಾಖಲಾಗಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.
ನೋಂದಣಿ ಯಾಕಿಲ್ಲ?:ಇಂಟರ್‌ಸ್ಟೇಟ್ ಮೈಗ್ರೆಂಟ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಸುಮನ್ ಮಾತನಾಡಿ, ನಮ್ಮ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಉತ್ತರ ಭಾರತದ 20-25 ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಅದರಲ್ಲಿ ಶೇ.70ರಷ್ಟು ಮಂದಿ ಬೆಂಗಳೂರು ಸುತ್ತಮುತ್ತ ಇದ್ದಾರೆ. ವಲಸೆ ಕಾರ್ಮಿಕರನ್ನು ನೋಂದಣಿ ಮಾಡಿಸಿದರೆ ಅವರಿಗೆ ಸೂಕ್ತ ಮೂಲ ಸೌಲಭ್ಯ ಒದಗಿಸಬೇಕು. ನೋಂದಣಿ ಮಾಡಿಸದೆ ಇರಲು ಇದೂ ಕೂಡ ಕಾರಣ ಎಂದರು. -ಬಾಕ್ಸ್-
ನೋಂದಣಿಯಾದ ಕಾರ್ಮಿಕರು ( ಕೆಬಿಒಸಿಡಬ್ಲ್ಯೂಡಬ್ಲ್ಯೂಬಿ ಆಧಾರ)ಪಶ್ಚಿಮ ಬಂಗಾಳ - 8603
ಬಿಹಾರ್ - 7859ಜಾರ್ಖಂಡ್ - 5197
ಒಡಿಶಾ - 3059ಉ.ಪ್ರದೇಶ 3215
ಅಸ್ಸಾಂ -873ಮಹಾರಾಷ್ಟ್ರ - 500 -ಬಾಕ್ಸ್-
ಉತ್ತರ ಭಾರತದಿಂದ ಬಂದುಹೋಗುವ ಕಾರ್ಮಿಕರ ಸಂಖ್ಯೆ, ನಿಖರ ಮಾಹಿತಿ ಸಂಗ್ರಹಿಸಿ ಎಂದು ಹಲವು ಬಾರಿ ಕಾರ್ಮಿಕ, ಪೊಲೀಸ್ ಇಲಾಖೆ ಜತೆಗೆ ಸಭೆಯಲ್ಲಿ ಆಗ್ರಹಿಸಿದ್ದೇವೆ. ವಲಸಿಗರಿಂದ ಕನ್ನಡದವರಿಗೆ ಕೆಲಸ ಸಿಗುತ್ತಿಲ್ಲ. ಅನ್ಯಯವಾಗುತ್ತಿದೆ ಎಂಬ ಭಾವನೆ ದಟ್ಟವಾಗುತ್ತಿದೆ.-ಅಶ್ವತ್ಥ ಟಿ.ಮರಿಗೌಡ್ರ, ಅಧ್ಯಕ್ಷರುನೆರವು ಬಿಲ್ಡಿಂಗ್ ಆ್ಯಂಡ್ ಅನ್‌ಆರ್ಗನೈಸ್ಡ್ ಲೇಬರ್ ಯೂನಿಯನ್
ನೋಂದಣಿ ಪ್ರಕಾರ ನೋಡಿದರೆ ಉತ್ತರ ಭಾರತದ ವಲಸಿಗರ ಸಂಖ್ಯೆ ಶೇ.70-80ರಷ್ಟಿದೆ. ಪಕ್ಕದ ತಮಿಳುನಾಡಿನ 1,797, ಆಂಧ್ರಪ್ರದೇಶದ 1,525 ಕಾರ್ಮಿಕರು ನೋಂದಣಿ ಆಗಿದ್ದಾರೆ. ಅಕ್ಕಪಕ್ಕದ ರಾಜ್ಯಗಳಿಂದ ಬಂದ ಕಾರ್ಮಿಕರ ಸಂಖ್ಯೆ 5 ಸಾವಿರ ಇದ್ದರೆ, ಅವರ ಸಂಖ್ಯೆ 25 ಸಾವಿರ ದಾಟುತ್ತಿದೆ. ಪ್ರತಿ ವರ್ಷ ಹೀಗೆ ವಲಸೆ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಅಧಿಕಾರಿಗಳು ಹೇಳಿದರು.ಇಲಾಖೆಯಿಂದಲೇ ನಾವು ಕೆಲಸದ ಸ್ಥಳಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಇದೆ. ಆದರೆ, ರಾಜ್ಯದ ಕಾರ್ಮಿಕರು ನೋಂದಣಿ ಮಾಡಿಕೊಳ್ಳಲು ಮುಂದೆ ಬರುತ್ತಾರೆಯೇ ಹೊರತು ಹೊರರಾಜ್ಯದವರು ದಾಖಲಾತಿಗೆ ಹಿಂದೇಟು ಹಾಕುತ್ತಾರೆ ಎಂದು ತಿಳಿಸಿದರು.