ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿಗಾಗಿ ರೈಲು ತಡೆಗೆ ಹೋರಾಟಗಾರರ ಯತ್ನ

KannadaprabhaNewsNetwork |  
Published : Jan 25, 2025, 01:01 AM IST
ಫೋಟೋ- ರೈಲ್‌ ರೋಕೋ 1 ಮತ್ತು ರೈಲ್‌ ರೋಕೋ 2ಕಲಬುರಗಿಯಲ್ಲಿ ರೈಲು ನಿಲ್ದಾಮದ ಮುಂದೆ ಸೇರಿರುವ ಹೋರಾಟಗಾರರು, ಕಾಲೇಜು ವಿದ್ಯಾರ್ಥಿಗಳು | Kannada Prabha

ಸಾರಾಂಶ

ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯನ್ನು ಆರಂಭಿಸಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೇತೃತ್ವದಲ್ಲಿ ವಿವಿಧ ಹೋರಾಟಗಾರರು, ಕನ್ನಡಪರ ಸಂಘಟನೆಗಳು, ರೈಲ್ವೆ ಮೂಲ ಸವಲತ್ತಿಗಾಗಿ ಸದಾಕಾಲ ಆಗ್ರಹಿಸುವ ಆಸಕ್ತರೆಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಸೇರಿ ಶುಕ್ರವಾರ ಕಲಬುರಗಿಯಲ್ಲಿ ರೈಲ್‌ ರೋಕೋ ಹೋರಾಟ ಮಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು.

ರೈಲು ನಿಲ್ದಾಣಕ್ಕೆ ನುಗ್ಗಲು ಮುಂದಾದ ಹೋರಾಟಗಾರರಿಗೆ ಪೊಲೀಸ್‌ ತಡೆ । ಸ್ಟೇಷನ್‌ ಮಾಸ್ಟರ್‌ಗೆ ಮನವಿ ಪತ್ರ ಸಲ್ಲಿಸಿದ ಹೋರಾಟಗಾರರು

ಕನ್ನಡಪ್ರಭ ವಾರ್ತೆ ಕಲಬುರಗಿ

ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ನನೆಗುದಿಗೆ ಬಿದ್ದಿರುವ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯನ್ನು ಆರಂಭಿಸಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೇತೃತ್ವದಲ್ಲಿ ವಿವಿಧ ಹೋರಾಟಗಾರರು, ಕನ್ನಡಪರ ಸಂಘಟನೆಗಳು, ರೈಲ್ವೆ ಮೂಲ ಸವಲತ್ತಿಗಾಗಿ ಸದಾಕಾಲ ಆಗ್ರಹಿಸುವ ಆಸಕ್ತರೆಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಸೇರಿ ಶುಕ್ರವಾರ ಕಲಬುರಗಿಯಲ್ಲಿ ರೈಲ್‌ ರೋಕೋ ಹೋರಾಟ ಮಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಕಾಲ್ನಡಿಗೆಯ ಮೂಲಕ ರೈಲು ನಿಲ್ದಾಣಕ್ಕೆ ತೆರಳಿ, ಪುಣೆ ಮತ್ತು ಸಿಕಂದರಾಬಾದ್ ಜಂಕ್ಷನ್ ನಡುವೆ ಚಲಿಸುವ ಶತಾಬ್ದಿ ಎಕ್ಸಪ್ರೆಸ್‌ ರೈಲು ತಡೆಯಲು ಹೋರಾಟಗಾರರು ನಿಲ್ದಾಣಕ್ಕೆ ನುಗ್ಗಲು ಮುಂದಾಗುತ್ತಿದ್ದಂತೆಯೇ ಬ್ಯಾರಿಕೇಡ್‌ ಹಾಕಿ ಪೊಲೀಸರು ರೈಲ್ವೆ ನಿಲ್ದಾಣದ ಮುಂದೆಯೇ ಎಲ್ಲರನ್ನು ತಡೆದರು. ಈ ಸಂದರ್ಭದಲ್ಲಿ ರೈಲು ತಡೆಗೆ ಮುಂದಾದ ಹಲವರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರು ನಿಲ್ದಾಣದ ಮುಂದೆ ಸೇರುವ ಮೂಲಕ ಹೋರಾಟಗಾರನನ್ನು ಅಲ್ಲೇ ತಡೆದರು. ರೈಲು ನಿಲುಗಡೆಗೆ ಅವಕಾಶ ನೀಡೋದಿಲ್ಲವೆಂದರು. ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳ ಈ ನಿಲುವನ್ನು ಕಟುವಾಗಿ ಖಂಡಿಸಿದ ಹೋರಾಟಗಾರರು ಧಿಕ್ಕಾರದ ಘೋಷಣೆ ಕೂಗಿದರು.

ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಹೋರಾಟ ಸಮೀತಿಯ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಪಾಳಾದ ಗುರುಮೂರ್ತಿ ಶ‍ಿಚಾರ್ಯರು, ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್‌, ಕಾರ್ಯದರ್ಶಿ ಮಂಜುನಾಥ್‌ ಜೇವರ್ಗಿ, ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಪ್ರಸಾಂತ ಮಾನ್ಕರ್‌, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ, ಯಾದಗಿರಿ ಕೆಕೆಸಿಸಿಐ ಅಧ್ಯಕ್ಷ ಮಲ್ಲಿಕಾರ್ಜುನ್ ಅಕ್ಕಿ, ಮಂಜುನಾಥ್ ಜೇವರ್ಗಿ, ಡಾ. ಶ್ರೀನಿವಾಸ ಸಿರನೂರಕರ್, ಶರಣು ಪಪ್ಪಾ, ಸುನೀಲ್ ಕುಲಕರ್ಣಿ, ಆಹಾರ ಧಾನ್ಯ ಮತ್ತು ಬೀಜಗಳ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ್ ಲಂಗರ್, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿ ಅಧ್ಯಕ್ಷ ಮಹಾದೇವಪ್ಪ ಗೌಡ ಪಾಟೀಲ್‌ ನರಿಬೋಳ್‌, ದಾಲ್‍ಮಿಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಕೋಬಾಳ್, ಉಪಾಧ್ಯಕ್ಷ ಶರಣಬಸಪ್ಪ, ಎಣ್ಣೆ ಮಿಲ್ಲರ್ಸ್ ಅಸೋಯೇಷನ್ ಅಧ್ಯಕ್ಷ ಬಸವರಾಜ್, ಕಪಡಾ ಬಜಾರ್ ಅಸೋಸಿಯೇಷನ್ ಅಧ್ಯಕ್ಷ ಆನಂದ್ ದಂಡೋತಿ, ಕಾರ್ಯದರ್ಶಿ ಪ್ರೇಮ್ ಬಜಾಜ್, ಕಾಸಿಯಾ ಸದಸ್ಯ ಚನ್ನಬಸಯ್ಯ ಸ್ವಾಮಿ ನಂದಿಕೂರ್, ಅಕ್ಕಿ ವ್ಯಾಪಾರ ಸಂಘದ ಅಧ್ಯಕ್ಷ ರವೀಂದ್ರ ಮಾಧಂಶೆಟ್ಟಿ, ನಿವೃತ್ತ ಎಂಜಿನಿಯರ್ ವೆಂಕಟೇಶ್ ಮುದಗಲ್, ಹೋಟೆಲ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹ ಮೆಂಡನ್ ಹೋರಾಟದಲ್ಲಿದ್ದರು.

1984ರಲ್ಲಿ ನ್ಯಾ. ಎಚ್.ಸಿ. ಸರೀನ್ ಸಮಿತಿಯ ವರದಿ ಪ್ರಕಾರ ನಗರದಲ್ಲಿ ರೈಲ್ವೆ ವಿಭಾಗ ಸ್ಥಾಪನೆಗೆ ಶಿಫಾರಸ್ಸು ಮಾಡಲಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ರೈಲ್ವೆ ವಿಭಾಗ ಸ್ಥಾಪನೆಯಾದರೆ 5 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿವೆ. ಕೇಂದ್ರ ಸರ್ಕಾರ ಮುಂದಿನ ಬಜೆಟ್‍ನಲ್ಲಿ ಕಲಬುರ್ಗಿಗೆ ರೈಲ್ವೆ ವಿಭಾಗ ಘೋಷಣೆ ಮಾಡಬೇಕು.

ಶಶಿಕಾಂತ ಪಾಟೀಲ್‌, ಅಧ್ಯಕ್ಷ, ಕೆಕೆಸಿಸಿಐ, ಕಲಬುರಗಿ

ಈ ಬಾರಿಯ ಹೋರಾಟ ಮಾಡು ಇಲ್ಲವೆ ಮಡಿ ಹೋರಾಟವಾಗಲಿದೆ. ಕಲ್ಯಾಣದ ಎಲ್ಲಾ ಜಿಲ್ಲೆಗಳ ಕೇಂದ್ರ ಸರ್ಕಾರದ ಕಚೇರಿಗಳನ್ನು ಮುತ್ತಿಗೆ ಹಾಕುತ್ತೇವೆ. ಹಂತಹಂತವಾಗಿ ಜೈಲ್‌ ಭರೋ ನಡೆಸುತ್ತೇವೆ. ರೈಲು ಪಡೆಯಲು ಜೈಲು ಸೇರಲು ಸಿದ್ಧ.

ಅರುಣ ಪಾಟೀಲ್‌ ಕೊಡಲಹಂಗರಗಾ, ಅಧ್ಯಕ್ಷ, ಜಿಲ್ಲಾ ವೀರಶೈವ ಸಮಾಜ, ಕಲಬುರಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ