ನಮ್ಮ ಹಿರಿಯರನ್ನು ಹೋಲಿಸಿಕೊಂಡರೆ ಇಂದಿನವರ ಆರೋಗ್ಯ ಚೆನ್ನಾಗಿಲ್ಲ. ಇದಕ್ಕೆ ವಿದೇಶಿ ತಳಿಗಳ ಹಾಲು ವಿಷಕಾರಿಯಾಗಿರುವುದೇ ಕಾರಣ ಎಂದು ಚನ್ನಪಟ್ಟಣದ ವಿರಕ್ತಮಠದ ಮುಖ್ಯಸ್ಥ ಶ್ರೀ ಶಿವರುದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಮನಗರ: ನಮ್ಮ ಹಿರಿಯರನ್ನು ಹೋಲಿಸಿಕೊಂಡರೆ ಇಂದಿನವರ ಆರೋಗ್ಯ ಚೆನ್ನಾಗಿಲ್ಲ. ಇದಕ್ಕೆ ವಿದೇಶಿ ತಳಿಗಳ ಹಾಲು ವಿಷಕಾರಿಯಾಗಿರುವುದೇ ಕಾರಣ ಎಂದು ಚನ್ನಪಟ್ಟಣದ ವಿರಕ್ತಮಠದ ಮುಖ್ಯಸ್ಥ ಶ್ರೀ ಶಿವರುದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ಭಾರತೀಯ ದೇಶಿ ಗೋತಳಿಗಳನ್ನು ಉಳಿಸಿ ಪೋಷಿಸುವುದು ಹಾಗೂ ಗವ್ಯೋತ್ಪನ್ನಗಳ ಶ್ರೇಷ್ಠತೆಯ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ರಾಮನಗರಕ್ಕೆ ಆಗಮಿಸಿದ್ದ ನಂದಿ ರಥಯಾತ್ರೆ ವೇಳೆ ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಹಾಲು ಅಮೃತಕ್ಕೆ ಸಮಾನ ಎನ್ನುತ್ತಾರೆ. ಆದರೆ ವಿದೇಶಿ ತಳಿಗಳ ಹಾಲು ವಿಷಕಾರಿಯಾಗಿದೆ. ದೇಶಿ ತಳಿಗಳಿಗೆ ಹೋಲಿಸಿದರೆ ವಿದೇಶಿ ತಳಿಗಳ ಹಾಲು ಶ್ರೇಷ್ಠವಾಗಿಲ್ಲ ಎಂಬ ವಿಚಾರ ಗೊತ್ತಾಗಿದೆ. ಇಂದು ಕರೆದ ಹಾಲು ನಮಗೆ ಅಂದರೆ ದೊರೆಯುತ್ತಿತ್ತು. ಹಾಲು ಗುಣಮಟ್ಟದಿಂದ ಕೂಡಿರುತ್ತಿತ್ತು. ಆದರೆ ಈಗೆಲ್ಲ ಸಂಸ್ಕರಿಸಿದ ಹಾಲು ಮಾರಾಟವಾಗುತ್ತಿದೆ. ದೇಶಿ ಗೋ ಸಾಕಾಣಿಕೆ ವೇಳೆ ಅವುಗಳಿಂದ ಹೊರಬರುತ್ತಿದ್ದ ಉಸಿರು ಹಾಗೂ ಶಾಖದಿಂದಲೆ ಮಾನವರ ದೇಹಾರೋಗ್ಯ ಉತ್ತಮ ಸ್ಥಿತಿಯಲ್ಲಿತ್ತು. ಆಯುರ್ವೇದ ಪಂಡಿತರು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಂದು ನಮ್ಮಲ್ಲಿ ಗೋವುಗಳ ಬಗ್ಗೆ ನಿರ್ಲಕ್ಷ ಮನೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಬೆನ್ನೆಲುಬು ರೈತ. ರೈತನ ಬೆನ್ನೆಲುಬು ಗೋವು. ಆದರೆ ಇಂದು ಕೃಷಿ ಚಟುವಟಿಕೆಗೆ ಯಂತ್ರಗಳ ಬಳಕೆಯಾಗುತ್ತಿದೆ, ದೇಶಿ ಗೋ ತಳಿಗಳು ನಾಶವಾಗುತ್ತಿದೆ. ಹಸುವಿನಿಂದ ಕರೆದ ಹಾಲು ಒಂದು ದಿನದ ಮಟ್ಟಿಗೆ ಚೆನ್ನಾಗಿರುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ಈಗ ಹಾಲು ಕರೆದ ನಂತರ ಅದು ಡೇರಿಗೆ ಹೋಗಿ ಪ್ಯಾಕೆಟ್ ಮೂಲಕ ನಮಗೆ ದೊರೆಯುವ ವೇಳೆಗೆ 6-7 ದಿನಗಳಾಗಿರುತ್ತವೆ. ಅಂದರೆ ಈ ಹಾಲಿನ ಶುದ್ಧತೆ ಎಷ್ಟಿರಬಹುದು ಎಂಬುದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ದೇಶಿ ಗೋ ತಳಿಗಳನ್ನು ರಕ್ಷಿಸುವ ಸಲುವಾಗಿ, ದೇಶಿ ಗೋವುಗಳ ಬಗ್ಗೆ ಅರಿವು ಮೂಡಿಸುವ ಅಭಿಯಾನ ನಡೆಯುತ್ತಿದೆ. ನಾವೆಂತಹ ದುಸ್ಥಿತಿಯಲ್ಲಿ ನಾವಿದ್ದೇವೆ ಎಂಬುದು ಅರಿವಾಗುತ್ತಿದೆ. ಗೋರಕ್ಷಣೆ ಯಾಕಾಗಿ ಮಾಡಬೇಕು ಎಂಬ ವಿಚಾರಕ್ಕೆ ಎಲ್ಲರು ಗಮನ ಹರಿಸಬೇಕಾಗಿದೆ. ಇದೆಲ್ಲ ಗೊತ್ತಿದ್ದರೆ ಈ ವೇದಿಕೆ ಅವಶ್ಯಕತೆ ಇರಲಿಲ್ಲ. ಇನ್ನೊಬ್ಬರನ್ನು ಆಶ್ರಯಿಸುವ ಕಾಲಕ್ಕೆ ಅವಕಾಶ ಬೇಡ ಎಂದು ಸ್ವಾಮೀಜಿ ಎಚ್ಚರಿಸಿದರು.
ನಂದಿ ರಥಯಾತ್ರೆ ರಾಮನಗರ ಸ್ವಾಗತ ಸಮಿತಿ ಅಧ್ಯಕ್ಷ ಮಹೇಶ್ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಸೇವಾ ಗತಿವಿಧಿ ಕರ್ನಾಟಕದ ಪ್ರಮುಖರಾದ ಪ್ರಾಣೇಶ್ ಕುಮಾರ್, ಗೌತಮ್ ಗೌಡ, ಪ್ರಸಾದ್ ಗೌಡ, ಆನಂದ ಸ್ವಾಮಿ, ಕೆ.ವಿ.ಉಮೇಶ್, ನಾಗೇಂದ್ರ ಗುಪ್ತ, ಸ್ವಾಮಿ, ಸುರೇಶ್, ಆರ್.ವಿ.ಸುರೇಶ, ಚಂದನ್ ಮೋಹರೆ, ಜಿ.ವಿ.ಪದ್ಮನಾಭ, ಬಿ.ನಾಗೇಶ್, ಪಿ.ಶಿವಾನಂದ, ಎಸ್.ಆರ್.ನಾಗರಾಜು, ರುದ್ರದೇವರು, ಟಿ.ಕೆ.ಶಾಂತಪ್ಪ, ಕುಮಾರ್, ಮಂಜು, ಚನ್ನಪ್ಪ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ರಥಯಾತ್ರೆ
ಬೆಂಗಳೂರಿನಿಂದ ಬಿಡದಿ ಮಾರ್ಗವಾಗಿ ರಾಮನಗರದ ಎಂ.ಜಿ.ರಸ್ತೆಯ ನೀರಿನ ಟ್ಯಾಂಕ್ ವೃತ್ತಕ್ಕೆ ರಥ ಆಗಮಿಸಿದಾಗ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ನಗರಸಭಾಧ್ಯಕ್ಷ ಕೆ.ಶೇಷಾದ್ರಿ (ಶಶಿ) ಸ್ವಾಗತ ಕೋರಿದರು. ಸುಮಂಗಲಿಯರಿಂದ ಪೂರ್ಣ ಕುಂಭ, ಮಂಗಳವಾದ್ಯ, ಜಾನಪದ ಕಲಾ ಮೇಳಗಳೊಂದಿಗೆ ನಗರದ ಎಂ.ಜಿ.ರಸ್ತೆ, ಮುಖ್ಯ ರಸ್ತೆಯ ಮೂಲಕ ಸಂಚರಿಸಿದ ರಥಯಾತ್ರೆ ಹಳೇ ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ಬಾಳೆಕಂದು, ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ ಸಿಂಗರಿಸಲಾಗಿತ್ತು. ಮಹಿಳೆಯರು ಪೂರ್ಣ ಕುಂಭ ಮೇಳ ಹೊತ್ತು ಪ್ರತಿ ಮನೆಗಳ ಬಳಿ ಹೂಚೆಲ್ಲಿ ಗೋಪೂಜೆ ನೆರವೇರಿಸಿದ್ದು ಕಂಡು ಬಂದಿತು. ವೇದಿಕೆಯಲ್ಲಿ ವಿಷ್ಣು ಸಹಸ್ರನಾಮ ಪಠಿಸಲಾಯಿತು.