ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಹಲವು ದಿನಗಳ ಹಿಂದೆ ಮನವಿ ಮಾಡಿದ್ದರೂ ಹಲವು ಕಾರಣಗಳಿಂದಾಗಿ ನ್ಯಾಯಾಲಯ ಅನುಮತಿ ನಿರಾಕರಣೆ ಮಾಡಿತ್ತು. ಇದೀಗ ಮೂರು ದಿನಗಳ ಅವಧಿಗೆ ಅನುಮತಿಸಿ ಷರತ್ತಿನ ಮೇರೆಗೆ ಜಾಧವ್ ಅವರನ್ನು ಪೊಲೀಸರ ವಶಕ್ಕೆ ನೀಡಿದೆ.
ಜಾಧವ್ ಮತ್ತು ನಿರ್ದೇಶಕ ಡಾಲು ರವಿ ನಡುವಿನ ಮೊಬೈಲ್ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದು ಜಾಧವ್ ಅವರನ್ನು ಪೊಲೀಸರು ವಿಚಾರಣೆಗೆ ಪಡೆಯಲು ಕಾರಣವೆಂದು ಹೇಳಲಾಗುತ್ತಿದೆ. ಇದೀಗ ಅಧಿಕಾರಿ ಜಾಧವ್ ಮತ್ತು ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಅವರನ್ನು ಮುಖಾಮುಖಿ ಕೂರಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಕಳೆದ ನಾಲ್ಕು ದಿನಗಳ ಹಿಂದೆಯೇ ಒಕ್ಕೂಟದ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರೂ ಇದುವರೆಗೂ ವಿಚಾರಣೆ ಪೂರ್ಣಗೊಂಡಿರಲಿಲ್ಲ. ಇದೀಗ ಜಾಧವ್ ಅವರನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿರುವುದರಿಂದ ಶಿವಕುಮಾರ್ ವಿಚಾರಣೆಗೆ ಹೆಚ್ಚಿನ ಮಹತ್ವ ಬಂದಂತಾಗಿದೆ.
ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಬಂಧನಕ್ಕೊಳಗಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದೆಂಬ ಕಾರಣಕ್ಕೆ ಪ್ರಭಾವಿಗಳು ಶಿವಕುಮಾರ್ ಬಂಧನವನ್ನು ತಡೆಯುತ್ತಲೇ ಬಂದಿದ್ದರು. ಇದರ ನಡುವೆ ಯು.ಸಿ.ಶಿವಕುಮಾರ್ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದ್ದು, ಅದನ್ನೂ ನ್ಯಾಯಾಲಯ ಪುರಸ್ಕರಿಸದಿರುವುದರಿಂದ ಶಿವಕುಮಾರ್ ಕಾನೂನು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಹಾಲಿನ ಪುಡಿ ಕಲಬೆರಕೆ ಪ್ರಕರಣದ ಪ್ರಮುಖ ಆರೋಪ ಎದುರಿಸುತ್ತಿರುವ ಮನ್‌ಮುಲ್ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ ಅವರಿಗೆ ಪೊಲೀಸರು ಶನಿವಾರವೂ ಬಿಡುವಿಲ್ಲದೆ ವಿಚಾರಣೆಯ ಡ್ರಿಲ್ ನಡೆಸಿದ್ದಾರೆ.
ಠಾಣೆಗೆ ಪ್ರಭಾವಿ ವಕೀಲರ ಭೇಟಿ:ಶನಿವಾರ ಸಂಜೆ ವೇಳೆಗೆ ಜಿಲ್ಲೆಯ ಪ್ರಭಾವಿ ವಕೀಲರೊಬ್ಬರ ನೇತೃತ್ವದ ತಂಡ ಮದ್ದೂರು ಪೊಲೀಸ್ ಠಾಣೆಗೆ ಭೇಟಿ ನೀಡಿದೆ. ಇಂದು ಶಿವಪ್ಪ ಅವರ ಹುಟ್ಟುಹಬ್ಬದ ಕಾರಣ ವಿಚಾರಣೆಯನ್ನು ನಾಳೆಗೆ ಕಾಯ್ದಿರಿಸಿ, ಅವರನ್ನು ಮನೆಗೆ ಕಳುಹಿಸಿಕೊಡಬೇಕು ಎಂದು ವಕೀಲರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ವಿಚಾರಣೆಯ ತೀವ್ರತೆ ಕಾಯ್ದುಕೊಂಡಿರುವ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ.