ಹಾಲಿನ ಪುಡಿ ಕಲಬೆರಕೆ ಪ್ರಕರಣ: 100 ಕೋಟಿ ರು. ಅವ್ಯವಹಾರ ಆಗಿಲ್ಲ

KannadaprabhaNewsNetwork |  
Published : Oct 04, 2026, 01:45 AM IST
3ಕೆಎಂಎನ್ ಡಿ15   | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಹಾಲಿನ ಪುಡಿ ಕಲಬೆರಕೆ ಪ್ರಕರಣ ಅಂದಾಜು 3 ಕೋಟಿ ರು. ಮಾತ್ರ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿರುವಂತೆ 100 ಕೋಟಿ ರು. ಅವ್ಯವಹಾರ ಆರೋಪ ಸತ್ಯಕ್ಕೆ ದೂರವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಹಾಲಿನ ಪುಡಿ ಕಲಬೆರಕೆ ಪ್ರಕರಣ ಅಂದಾಜು 3 ಕೋಟಿ ರು. ಮಾತ್ರ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿರುವಂತೆ 100 ಕೋಟಿ ರು. ಅವ್ಯವಹಾರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮನ್ಮುಲ್ ಅಧ್ಯಕ್ಷ ಹರೀಶ್ ಬಾಬು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟವು ಇರಿಸಿದ್ದ ಹಾಲಿನ ಪುಡಿ ದಾಸ್ತಾನಿಗಿಂತ 110 ಮೆಟ್ರಿಕ್ ಟನ್ ಹಾಲಿನ ಪುಡಿ ಕಡಿಮೆ ಬಂದ ಹಿನ್ನೆಲೆಯಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಂಡು ಈ ಸಂಬಂಧ ಕಳೆದ ಜೂ.24ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದರು.

ಗೋದಾಮಿನಲ್ಲಿ ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಒಕ್ಕೂಟದಿಂದ ವಕೀಲರನ್ನು ನೇಮಿಸಿ ಆರೋಪಿಗಳಿಗೆ ಜಾಮೀನು ಸಿಗದಂತೆ ಕ್ರಮ ವಹಿಸಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಹಾಲಿನ ಪುಡಿ ಕಲಬೆರಕೆಯಾಗಿ ಮಾರುಕಟ್ಟೆಗೆ ಸರಬರಾಜು ಆಗಿರುವ ಬಗ್ಗೆ ತಪ್ಪು ಮಾಹಿತಿ ಪ್ರಚಾರ ಮಾಡಲಾಗಿದೆ. ಒಕ್ಕೂಟದಿಂದ ಯಾವುದೇ ಉತ್ಪನ್ನಗಳು ಕಲಬೆರಕೆ ಮಾಡಿಲ್ಲ. ಮಾರುಕಟ್ಟೆಗೆ ಹೋಗುವ ಮುನ್ನ ನಿಯಮಾನುಸಾರ ಉನ್ನತ ಮಟ್ಟದ ಪರೀಕ್ಷೆ ನಂತರವೇ ಸರಬರಾಜು ಮಾಡಲಾಗಿದೆ ಎಂದರು.

ಹಾಲಿನ ಪುಡಿ ಕಲಬೆರಕೆ ಪ್ರಕರಣ ಹೊರ ಗುತ್ತಿಗೆ ಗೋದಾಮಿನಲ್ಲಿ ನಡೆದಿದೆ. ಒಕ್ಕೂಟದಲ್ಲಿ ನಡೆದಿಲ್ಲ. ಕಲಬೆರಕೆ ಅಂಶವನ್ನು ಒಕ್ಕೂಟದ ಗುಣಮಟ್ಟ ವಿಭಾಗದಿಂದ ಪತ್ತೆ ಹಚ್ಚಿ, ಪ್ರತ್ಯೇಕವಾಗಿ ಸೀಜ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಕಲಬೆರಕೆ ಹಾಲಿನ ಪುಡಿ ವಿತರಿಸಲಾಗಿದೆ ಎಂಬ ತಪ್ಪು ಮಾಹಿತಿ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಕೆರೆಭರಿತ ಹಾಲಿನ ಪುಡಿಯನ್ನು ಒಕ್ಕೂಟದಲ್ಲಿ ಉತ್ಪಾದಿಸಿ ದಾಸ್ತಾನು ಮಾಡಲಾಗುತ್ತದೆ. ಯಾವುದೇ ಖಾಸಗಿ ಗೋದಾಮುಗಳಲ್ಲಿ ದಾಸ್ತಾನು ಮಾಡಿಲ್ಲ ಎಂದರು.

ಒಕ್ಕೂಟದ ಆವರಣದಲ್ಲೇ 2 ಸಾವಿರ ಮೆಟ್ರಿಕ್ ಟನ್ ಹಾಲಿನ ಪುಡಿ ದಾಸ್ತಾನು ಮಾಡಲು ಗೋದಾಮು ಇದೆ. ಉಳಿದ ಹಾಲಿನ ಪುಡಿ ದಾಸ್ತಾನು ಮಾಡಲು ಕೆಎಂಎಫ್ ಮಾರ್ಗಸೂಚಿಯಂತೆ ಗೆಜ್ಜಲಗೆರೆ ಕೈಗಾರಿಕ ಪ್ರದೇಶದಲ್ಲಿ ಗೋದಾಮು ಬಾಡಿಗೆ ಪಡೆದು ಇಡಲಾಗಿದೆ. ಹಾಲಿನ ಪುಡಿ ಸಂಪೂರ್ಣ ಜವಾಬ್ದಾರಿ ಗೋದಾಮಿನ ಮಾಲೀಕರದ್ದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಎಂಎಫ್ ನಿರ್ದೇಶಕ ಅಪ್ಪಾಜಿಗೌಡ, ನಿರ್ದೇಶಕರಾದ ಬಿ.ಬೋರೇಗೌಡ, ಎಂ.ಬಿ.ಹರೀಶ್, ಡಾಲು ರವಿ, ಎಂ.ಎಸ್.ರಘುನಂದನ್, ಡಿ.ಕೃಷ್ಣೇಗೌಡ, ಎಸ್.ಪಿ.ಸ್ವಾಮಿ, ನಾಮ ನಿರ್ದೇಶನ ಸದಸ್ಯ ಎ.ಎಸ್.ರಾಜೀವ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಎಕರೆಗೆ ₹25000 ಪರಿಹಾರ ನೀಡಲಿ
ಯುವ ಸಮೂಹಕ್ಕೆ ಉತ್ತಮ ಸಂದೇಶಗಳು ಅಗತ್ಯ