ಕನ್ನಡಪ್ರಭ ವಾರ್ತೆ ತಿಪಟೂರು
ಪ್ರಪಂಚದಲ್ಲಿಯೇ ಹೆಚ್ಚು ಹಾಲು ಉತ್ಪಾದನೆ ಮಾಡುವಲ್ಲಿ ಭಾರತ ದೇಶ ಮೊದಲ ಸ್ಥಾನದಲ್ಲಿದ್ದು ಶೇ.25ರಷ್ಟು ಹಾಲು ಉತ್ಪಾದಿಸಿ ವಿವಿಧ ರಾಜ್ಯ, ದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ನಮ್ಮ ರಾಜ್ಯವೂ ಹೆಚ್ಚು ಹಾಲು ಉತ್ಪಾದನೆ ಮಾಡಿ ತನ್ನದೇ ಆದ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದರಿಂದ ರೈತರ ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಬದಲಾವಣೆಯಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಭಾನುವಾರ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ನಿರ್ಮಿಸಿರುವ ನಂದಿನಿ ಕ್ಷೀರ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ, ಗುಜರಾತ್, ರಾಜಸ್ಥಾನ,ಮಹಾರಾಷ್ಟ್ರ ಹೆಚ್ಚೆಚ್ಚು ಹಾಲು ಉತ್ಪಾದನೆ ಮಾಡಿ ರಾಷ್ಟ್ರದ ಕೀರ್ತಿ ಹೆಚ್ಚಿಸುತ್ತಿದ್ದೇವೆ. ನಮ್ಮ ನಂದಿನಿ ಬ್ರ್ಯಾಂಡ್ ಉತ್ಪನ್ನಗಳನ್ನು ದೇಶ ವಿದೇಶದಗಳಲ್ಲೂ ನೋಡಬಹುದು. 2ಲಕ್ಷ ಲೀಟರ್ ಹಾಲನ್ನೂ ನಾವು ಪ್ರತಿನಿತ್ಯ ಬಾಂಬೆಗೆ ತುಮೂಲ್‌ನಿಂದ ಕಳುಹಿಸುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡಿದೆ ಎಂದರು. ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ರೈತರ ಉತಾದನೆ ಹೆಚ್ಚಾದರೂ ಲಾಭಾಂಶ ಮಾತ್ರ ಕಡಿಮೆಯಾಗುತ್ತಿದೆ. ರೈತರು ಉತ್ಪಾದಿಸಿದ ಬೆಳೆಗೆ ನಿಗದಿತ ಬೆಲೆ ಸಿಗದೆ ರೈತ ನಷ್ಟ ಅನುಭವಿಸುವಂತಾಗಿದೆ. ತಾನು ಬೆಳೆದ ಬೆಳೆಗಳಿಗೆ ಬೇರೆಯವರು ಬೆಲೆ ನಿಗದಿ ಮಾಡುವುದು ನಿಲ್ಲಬೇಕು. ನೀರಿಗೆ ಇರುವ ಬೆಲೆ ಹಾಲಿಗೆ ಇಲ್ಲ ಹಾಲು ಉತ್ಪಾದಕರ ಶ್ರಮಕ್ಕೆ ತಕ್ಕಂತೆ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ಹಾಲಿನ ದರ ಹೆಚ್ಚಿಸುವ ಬಗ್ಗೆ ಸರ್ಕಾರ ಪರಶೀಲನೆ ಮಾಡುತ್ತಿದೆ ಎಂದರು. ಶಾಸಕ ಕೆ. ಷಡಕ್ಷರಿ ಮಾತನಾಡಿ, ನನ್ನ ಕ್ಷೇತ್ರ ಅಭಿವೃದ್ದಿಗೆ ಇಬ್ಬರ ಸಚಿವರ ಸಹಕಾರ ಸಾಕಷ್ಟಿದ್ದು, ನಾನು ಏನೂ ಕೇಳಿದರೂ ಇಲ್ಲ ಎಂದು ಹೇಳಿಲ್ಲ. ಬೇಸಿಗೆ ಕಾಲವಾಗಿರುವ ಕಾರಣ ಅಗ್ನಿ ಅವಘಡಗಳು ಹೆಚ್ಚುತ್ತಿದ್ದು ನಮಗೆ ತುರ್ತಾಗಿ ಜಲವಾಹನದ ಅವಶ್ಯಕತೆ ಇದೆ. ಇದರ ಜೊತೆಗೆ ತಿಪಟೂರಿನಲ್ಲಿ ಸಬ್ ಜೈಲ್, ಸರ್ಕಾರಿ ಮಲ್ಟಿ ಸೆಷ್ಪಾಲಿಟಿ ಆಸ್ಪತ್ರೆ ಬೇಕಿದ್ದು ಈ ಬಗ್ಗೆ ಅಗತ್ಯ ಕ್ರಮವಹಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು. ಹಾಲು ಒಕ್ಕೂಟ ಹಾಗೂ ಕರ್ನಾಟಕ ಹಾಲು ಮಂಡಲದ ನಿರ್ದೇಶಕ ಮಾದೀಹಳ್ಳಿ ಎಂ.ಕೆ. ಪ್ರಕಾಶ್ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ, ಕೇಂದ್ರ ಸಚಿವ ವಿ. ಸೋಮಣ್ಣ ನೂತನ ಕ್ಷೀರಭವನ ಉದ್ಘಾಟಿಸಿದರು. ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಎಚ್.ವಿ. ವೆಂಕಟೇಶ್, ನಿರ್ದೇಶಕರುಗಳಾದ ಮಹಲಿಂಗಯ್ಯ, ಕೃಷ್ಣಕುಮಾರ್, ನಾಗೇಶ್‌ಬಾಬು, ಎಸ್.ಆರ್. ಗೌಡ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಓ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಸಹಕಾರ ಸಂಘಗಳ ಜಂಟಿ ನಿರ್ದೇಶಕ ಡಾ.ಜಿ. ಉಮೇಶ್ ಸೇರಿದಂತೆ ಒಕ್ಕೂಟದ ನಿರ್ದೇಶಕರು, ವ್ಯವಸ್ಥಾಪಕರು, ವಿಸ್ತರಣಾಧಿಕಾರಿಗಳು, ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಿದ್ದರು.