ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಡೈರಿಗೆ ಗ್ರಾಮದ 25ಕ್ಕೂ ಹೆಚ್ಚು ರೈತರಿಂದ ಪ್ರತಿನಿತ್ಯ 300 ಲೀಟರ್ ಗೂ ಅಧಿಕ ಹಾಲು ಸಂಗ್ರಹವಾಗುತ್ತದೆ. ಕೆಲ ರೈತರ ಹಾಲಿಗೆ ಫ್ಯಾಟ್ ಬಾರದ ಕಾರಣ ಡೈರಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಫ್ಯಾಟ್ ಇಲ್ಲವೆಂದು ವಾಪಸ್ಸು ಕಳುಹಿಸಿದ್ದು, ಇದರಿಂದ ಆಕ್ರೋಶಗೊಂಡ ಕೆಲ ರೈತರು ಡೈರಿ ಮುಂಭಾಗ ಹಾಲನ್ನು ಸುರಿದು ಡೈರಿ ಅಧ್ಯಕ್ಷರು, ಕಾರ್ಯದರ್ಶಿ, ಬಮೂಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಹರೀಶ್ ಪ್ರತಿಕ್ರಿಯಿಸಿ, ನಮ್ಮ ತಂದೆಯ ಕಾಲದಿಂದಲೂ ಡೈರಿಗೆ ಹಾಲು ಪೂರೈಸುತ್ತಿದ್ದೇವೆ, ಬೇಸಿಗೆ ಕಾಲ ಇರುವುದರಿಂದ ಹಾಲಿನ ಫ್ಯಾಟ್ ಬರುತ್ತಿಲ್ಲ. ಪ್ರತಿನಿತ್ಯ 40 ಲೀಟರ್ ಗೂ ಹೆಚ್ಚು ಹಾಲನ್ನು ಡೈರಿಗೆ ಹಾಕುತ್ತಿದ್ದೇನೆ. ಈ ಹಿಂದೆ ಅನುಸರಣೆ ಮಾಡದ ನಿಯಮವನ್ನು ಇದೀಗ ಅನುಸರಣೆ ಮಾಡುತ್ತಿರುವುದು ಎಷ್ಟು ಸರಿ? ರೈತರ ಸಮಸ್ಯೆಗಳಿಗೆ ಅಧ್ಯಕ್ಷರು, ಕಾರ್ಯದರ್ಶಿ ಸ್ಪಂದಿಸದೆ ನಮ್ಮ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಯುವ ರೈತ ನಿಖಿಲ್ ಕುಮಾರ್ ಮಾತನಾಡಿ, ಆಡಳಿತ ಮಂಡಳಿಯವರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ರೈತರನ್ನು ಯಾವುದೇ ಸಭೆಗಳಿಗೆ ಆಹ್ವಾನ ನೀಡುತ್ತಿಲ್ಲ, ವಾರ್ಷಿಕ ಸಭೆಯಲ್ಲಿ ಸಂಘದ ಆಯವ್ಯಯದ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡುತ್ತಿಲ್ಲ. ಹೆಚ್ಚಾಗಿ ಅನಕ್ಷರಸ್ಥರೇ ನಿರ್ದೇಶಕರು ಆಗಿರುವುದರಿಂದ ನಮಗೆ ಹಾಲಿನ ಫ್ಯಾಟ್ ಬರುತ್ತಿಲ್ಲ ಎಂದು ಮಾಹಿತಿ ನೀಡದೆ ಏಕಾಏಕಿ ಹಾಲು ಪೂರೈಸಬಾರದೆಂದು ಹಾಲನ್ನು ವಾಪಸ್ಸು ಕಳುಹಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದ ಡೈರಿ ಅಧ್ಯಕ್ಷ ಚಂದ್ರಯ್ಯ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆದು ಡೈರಿ ಅಧ್ಯಕ್ಷರು ಹಾಗೂ ರೈತರ ನಡುವೆ ನೂಕಾಟ- ತಳ್ಳಾಟ ನಡೆದು ಗಲಾಟೆ ವಿಕೋಪಕ್ಕೆ ಹೋದಾಗ ಗ್ರಾಮದ ಹಿರಿಯರು ಮಧ್ಯ ಪ್ರವೇಶಿಸಿ ಜಗಳ ತಿಳಿಗೊಳಿಸಿದರು.
ರೈತರು ಪ್ರತಿಭಟನಾ ಸ್ಥಳಕ್ಕೆ ಡೈರಿ ಕಾರ್ಯದರ್ಶಿ ನಟರಾಜು ಬರಬೇಕೆಂದು ಆಗ್ರಹಿಸಿದರು. ಡೈರಿ ಅಧ್ಯಕ್ಷರು ಕರೆಸುತ್ತೇನೆಂದು ಸ್ಥಳದಲ್ಲೇ ಇದ್ದ ರೈತರಿಗೆ ತಿಳಿಸಿದರು. ಆದರೆ ಡೈರಿ ಕಾರ್ಯದರ್ಶಿ ಗ್ರಾಮದಲ್ಲೇ ಇದ್ದರೂ ಘಟನಾ ಸ್ಥಳಕ್ಕೆ ಬಾರದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ರೈತರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಘಟನೆಯ ಬಗ್ಗೆ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಡೈರಿ ಅಧ್ಯಕ್ಷ ಚಂದ್ರಯ್ಯ ಅವರ ಪುತ್ರ ವಿಡಿಯೋ ಮಾಡದಂತೆ ಮೊಬೈಲ್ ಕಿತ್ತುಕೊಳ್ಳಲು ಮುಂದಾದರೆ, ಡೈರಿ ಕಾರ್ಯದರ್ಶಿ ನಟರಾಜು ಅವರ ಪತ್ನಿ ಸುದ್ದಿ ಮಾಡದಂತೆ, ಸ್ಥಳದಂತೆ ಹೋಗುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು.