ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ 8 ತಿಂಗಳಿನಿಂದ ಹಾಲಿಗೆ ಪ್ರೋತ್ಸಾಹ ಧನ ನೀಡದೆ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಆರ್. ಆನಂದಪ್ಪ ನೇತೃತ್ವದಲ್ಲಿ ಹಸು ಮತ್ತು ಹಾಲಿನ ಕ್ಯಾನ್‌ನೊಂದಿಗೆ ಪಕ್ಷದ ಕಚೇರಿ ಯಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು.ಆಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಆನಂದಪ್ಪ ಮಾತನಾಡಿ, ಹೈನುಗಾರಿಕೆ ಪ್ರೋತ್ಸಾಧನಕ್ಕೆಂದು ಬಿಜೆಪಿ ನೇತೃತ್ವದ ಯಡಿಯೂರಪ್ಪ ಸರ್ಕಾರ 5 ರು. ಪ್ರೋತ್ಸಾಹಧನ ನೀಡುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ರು. ಜೊತೆಗೆ 2 ರು. ಸೇರಿಸಿ 7 ರು. ನೀಡುತ್ತೇವೆ ಎಂದು ಹೇಳಿತ್ತು. ಆದರೆ, ಕಳೆದ 8 ತಿಂಗಳಿಂದ 715 ಕೋಟಿ ರು. ಹಣ ಬಾಕಿ ಉಳಿಸಿಕೊಂಡಿದೆ. ರೈತರಿಗೆ ಅನ್ಯಾಯ ಮಾಡುತ್ತಿದೆ. ಜನರಿಗಷ್ಟೇ ಅಲ್ಲ, ಜಾನುವಾರುಗಳಿಗೂ ಅನ್ಯಾಯ ಮಾಡುತ್ತಿದೆ. ಜಾನುವಾರುಗಳ ಮೇವಿನ ಬೆಲೆಯನ್ನೂ ಹೆಚ್ಚಿಸಿದೆ ಎಂದು ದೂರಿದರು. ಹಿಂದಿನ ಬಿಜೆಪಿ ಸರ್ಕಾರ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿತ್ತು. ರೈತ ಕಿಸಾನ್ ಸಮ್ಮಾನ್, ವಿದ್ಯಾನಿಧಿ ಯಂತಹ ಅನೇಕ ಉಪಯುಕ್ತ ಯೋಜನೆಗಳನ್ನು ಬಿಜೆಪಿ ನೀಡಿತ್ತು ಅದೆಲ್ಲವನ್ನೂ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.
ಇಂದು ಸಾಂಕೇತಿಕವಾಗಿ ಹೋರಾಟ ಮಾಡುತ್ತಿದ್ದೇವೆ. ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೋದಲ್ಲೆಲ್ಲಾ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಈ ದೇಶದ ಬೆನ್ನೆಲುಬಾದ ರೈತನಿಗೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತನ್ನು ಮರೆತಿದ್ದಾರೆ ಎಂದರು. ಹಾಲಿಗೆ 7 ರು. ಪ್ರೋತ್ಸಾಹಧನ ನೀಡುತ್ತೇವೆಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ವರ್ಗಾವಣೆ ದಂಧೆ, ಕಮಿಷನ್ ದಂಧೆಯಲ್ಲಿ ತೊಡಗಿದೆ ಎಂದ ಅವರು, ತಕ್ಷಣ ರೈತರಿಗೆ ಕೊಟ್ಟ ಮಾತಿನಿಂತೆ 7 ರು. ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಗ್ಯಾರಂಟಿಗಳ ಹೆಸರಲ್ಲಿ ರಾಜ್ಯದ ಬೊಕ್ಕಸವನ್ನು ನುಂಗಿ ನೀರು ಕುಡಿದಿದ್ದಾರೆ. ಬಡವರು, ದೀನ ದಲಿತರು, ರೈತರ ಸರ್ಕಾರ ಎಂದು ಹೇಳುತ್ತಾರೆ. ರೈತರಿಗೆ ನೀಡಿದ ಒಂದು ಭರವಸೆಯನ್ನೂ ಈಡೇರಿಸಲು ಸಾಧ್ಯವಾಗಿಲ್ಲ. ಜನರು ಕಾಂಗ್ರೆಸ್ ಸರ್ಕಾರದ ವಿರುದ್ಧ ರೊಚ್ಚಿಗೇಳುವ ದಿನ ದೂರವಿಲ್ಲ. ಕಾಂಗ್ರೆಸ್‌ಗೆ ಮತ ಹಾಕಿ ತಪ್ಪು ಮಾಡಿದೆವು ಎಂದು ಜನ ಮಾತನಾಡುತ್ತಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಟಿ.ರಾಜಶೇಖರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರಾದ ಬಿ.ರಾಜಪ್ಪ, ಮಂಜುನಾಥ್, ನಾರಾಯಣಗೌಡ, ಹಂಪಯ್ಯ, ಪುಷ್ಪರಾಜ್ ಹಾಗೂ ಕಾರ್ಯಕರ್ತರು ಇದ್ದರು.6 ಕೆಸಿಕೆಎಂ 5ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ಕೆ.ಆರ್. ಆನಂದಪ್ಪ, ದೇವರಾಜ್ ಶೆಟ್ಟಿ, ಟಿ. ರಾಜಶೇಖರ್, ಹಂಪಯ್ಯ ಹಾಗೂ ಕಾರ್ಯಕರ್ತರು ಇದ್ದರು.