ಹಾಲು ಒಕ್ಕೂಟ: ಕಾಂಗ್ರೆಸ್ ಬೆಂಬಲಿತರಿಗೆ ಭರ್ಜರಿ ಜಯ

KannadaprabhaNewsNetwork |  
Published : Jul 11, 2025, 01:47 AM IST
10ಕೆಪಿಎಲ್26 ಕೊಪ್ಪಳ ತಾಲೂಕಿನ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದವರು ವಿಜಯೋತ್ಸವದ ಸಂಭ್ರಮದಲ್ಲಿ. | Kannada Prabha

ಸಾರಾಂಶ

ಕೊಪ್ಪಳ ತಾಲೂಕು ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರನ್ನು ಅಖಾಡಕ್ಕೆ ಇಳಿಸಲು ಭಾರಿ ಹೈಡ್ರಾಮಾವೇ ನಡೆಯಿತು. ತಮಗೆ ಅವಕಾಶ ಬೇಕೇಬೇಕು ಎಂದು ಹಠಕ್ಕೆ ಬಿದ್ದ ವೆಂಕನಗೌಡ ಹಿರೇಗೌಡ್ರ ಅವರು ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಹಿಟ್ನಾಳ ಕುಟುಂಬದ ವಿರುದ್ಧ ಸೆಡ್ಡು ಹೊಡೆದು ಸ್ಪರ್ಧೆಗೆ ಧುಮ್ಕಿಕ್ಕಿದ್ದರು.

ಕೊಪ್ಪಳ:

ಬಳ್ಳಾರಿ ಹಾಲು ಒಕ್ಕೂಟದಿಂದ ಕೊಪ್ಪಳ ಜಿಲ್ಲೆಯ ನಾಲ್ಕು ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಾಲ್ವರು ಜಯ ಸಾಧಿಸಿದ್ದಾರೆ. ಅದರಲ್ಲೂ ಶಾಸಕ ರಾಘವೇಂದ್ರ ಹಿಟ್ನಾಳ ಹಠಕ್ಕೆ ಬಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ನಾಲ್ಕು ಸ್ಥಾನಗಳಿಗೆ 8 ಜನರು ಅಖಾಡದಲ್ಲಿದ್ದರು. ಈ ಪೈಕಿ ತಾಲೂಕಿನ ಕೃಷ್ಣಾರಡ್ಡಿ ಗಲಬಿ 106, ಯಲಬುರ್ಗಾದ ಕಮಲವ್ವ 92, ಕುಷ್ಟಗಿಯ ಮಂಜುನಾಥ 94 ಹಾಗೂ ಗಂಗಾವತಿಯ ಎನ್. ಸತ್ಯನಾರಾಯಣ 93 ಮತ ಪಡೆದಿದ್ದಾರೆ. ಇವರ ಪ್ರತಿಸ್ಪರ್ಧಿ ಕೊಪ್ಪಳದ ವೆಂಕನಗೌಡ ಹಿರೇಗೌಡ್ರ, ಕುಷ್ಟಗಿಯ ಜಯತೀರ್ಥ ದೇಸಾಯಿ, ಶಿವಪ್ಪ ವಾದಿ ಹಾಗೂ ಕವಿತಾ ಗುಳಗಣ್ಣವರ ಪರಾಭವಗೊಂಡಿದ್ದಾರೆ.

ಗೆದ್ದು ಬೀಗಿದ ಹಿಟ್ನಾಳ ಕುಟುಂಬ:

ಕೊಪ್ಪಳ ತಾಲೂಕು ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರನ್ನು ಅಖಾಡಕ್ಕೆ ಇಳಿಸಲು ಭಾರಿ ಹೈಡ್ರಾಮಾವೇ ನಡೆಯಿತು. ತಮಗೆ ಅವಕಾಶ ಬೇಕೇಬೇಕು ಎಂದು ಹಠಕ್ಕೆ ಬಿದ್ದ ವೆಂಕನಗೌಡ ಹಿರೇಗೌಡ್ರ ಅವರು ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಹಿಟ್ನಾಳ ಕುಟುಂಬದ ವಿರುದ್ಧ ಸೆಡ್ಡು ಹೊಡೆದು ಸ್ಪರ್ಧೆಗೆ ಧುಮ್ಕಿಕ್ಕಿದ್ದರು. ಗೆಲುವಿಗಾಗಿ ಶತಾಯಗತಾಯ ಶ್ರಮಿಸಿದರೂ ಪರಾಭವಗೊಂಡಿದ್ದಾರೆ. ತಮಗೆ ಸೆಡ್ಡು ಹೊಡೆದು ಸ್ಪರ್ಧೆ ಮಾಡಿದ್ದರಿಂದ ಹಿಟ್ನಾಳ ಕುಟುಂಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ಅವರನ್ನು ಅಖಾಡಕ್ಕೆ ಇಳಿಸಿತು. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಹಿಟ್ನಾಳ ಕುಟುಂಬ ಈ ಗೆಲುವಿನ ಮೂಲಕ ಬಳ್ಳಾರಿ ಹಾಲು ಒಕ್ಕೂಟದಲ್ಲಿಯೂ ತಮ್ಮ ಪ್ರಭಾವ ಹೆಚ್ಚಿಸಿಕೊಂಡಿದೆ.

ಜಿಲ್ಲಾದ್ಯಂತ ಕಾಂಗ್ರೆಸ್ ಬೆಂಬಲಿತರ ಪ್ಯಾನಲ್ ಜಯ ಸಾಧಿಸಿದ್ದು ಬಳ್ಳಾರಿ ಹಾಲು ಒಕ್ಕೂಟದಲ್ಲಿ ಮತ್ತೆ ಕಾಂಗ್ರೆಸ್ ಬೆಂಬಲಿತರದ್ದೆ ಪ್ರಭಾವ ಮುಂದುವರಿಯಲಿದೆ.ನನ್ನ ಗೆಲುವು ಹಾಲು ಒಕ್ಕೂಟದ ಎಲ್ಲ ನಿರ್ದೇಶಕರ ಗೆಲುವು. ಹಾಗೆ ನನ್ನ ಗೆಲುವಿಗೆ ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ. ವಿಶೇಷವಾಗಿ ಗಂಗಾವತಿಯ ಎಂ. ಸತ್ಯನಾರಾಯಣ ಅವರು ತ್ಯಾಗ ಮಾಡಿದ್ದಾರೆ. ಇದಕ್ಕಿಂತ ಮಿಗಿಲಾಗಿ ಪಕ್ಷದ ನಾಯಕರು ಹಾಗೂ ಹಿಟ್ನಾಳ ಕುಟುಂಬದ ಬೆಂಬಲದಿಂದ ಜಯ ಸಾಧಿಸಿದ್ದೇನೆ.ಕೃಷ್ಣಾರಡ್ಡಿ ಗಲಬಿ ನಿರ್ದೇಶಕರು ಬಳ್ಳಾರಿ ಹಾಲು ಒಕ್ಕೂಟ

PREV