ಸಿಂಗಟಾಲೂರು ಬ್ಯಾರೇಜ್‌ ನೀರಿನ ಸಂಗ್ರಹ ಮಟ್ಟ ಏರಿಕೆ

KannadaprabhaNewsNetwork |  
Published : Jul 11, 2025, 01:47 AM IST
ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನ ನೋಟ. | Kannada Prabha

ಸಾರಾಂಶ

ಹೂವಿನಹಡಗಲಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನ ನೀರಿನ ಸಂಗ್ರಹಣಾ ಮಟ್ಟವನ್ನು 507.50 ಮೀಟರ್‌ನಿಂದ 508 ಮೀಟರ್‌ಗೆ ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದ ಬ್ಯಾರೇಜ್‌ನಲ್ಲಿ 2.50 ಟಿಎಂಸಿ ನೀರು ಸಂಗ್ರಹವಾಗಲಿದೆ.

ಹೂವಿನಹಡಗಲಿ: ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನ ನೀರಿನ ಸಂಗ್ರಹಣಾ ಮಟ್ಟವನ್ನು 507.50 ಮೀಟರ್‌ನಿಂದ 508 ಮೀಟರ್‌ಗೆ ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದ ಬ್ಯಾರೇಜ್‌ನಲ್ಲಿ 2.50 ಟಿಎಂಸಿ ನೀರು ಸಂಗ್ರಹವಾಗಲಿದೆ.

ಈ ಕುರಿತು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆ ನೀಡಿದ್ದು, ಬ್ಯಾರೇಜಿನ ಪೂರ್ಣ ಸಂಗ್ರಹಣಾ ಮಟ್ಟ 509 ಮೀಟರ್ ಇದ್ದು, ಒಟ್ಟು 3.12 ಟಿಎಂಸಿ ನೀರನ್ನು ಸಂಗ್ರಹಿಸಬಹುದಾಗಿದೆ. ಪ್ರಸ್ತುತ ಬ್ಯಾರೇಜಿನಲ್ಲಿ 507.50 ಮೀಟರ್‌ ವರೆಗೆ (2.267 ಟಿಎಂಸಿ) ನೀರು ಸಂಗ್ರಹಿಸಲಾಗುತ್ತಿದೆ.

ಈ ಕುರಿತು 2025 ಜೂನ್‌ 23ರಂದು ಗದಗ ಡಿಸಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಬ್ಯಾರೇಜಿನಲ್ಲಿ ಸಂಗ್ರವಾಹುವ ಹಿನ್ನೀರಿನಿಂದ, ಗದಗ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಅವಲಂಬಿತವಾಗಿರುವ ಮುಂಡರಗಿ ಪಟ್ಟಣ, ಮುಂಡರಗಿ-ಗದಗ ಮಾರ್ಗದಲ್ಲಿ ಬರುವ 16 ಗ್ರಾಮಗಳು ಹಾಗೂ ಗದಗ-ಬೆಟಗೇರಿ ಅವಳಿ ನಗರ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕೆ ಸರಬರಾಜು ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಗದಗ ಮತ್ತು ವಿಜಯನಗರ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗುತ್ತದೆ. ಆದ್ದರಿಂದ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ನಿರ್ಮಾಣ ಮಾಡಿರುವ ಬ್ಯಾರೇಜಿನ ನೀರು ಸಂಗ್ರಹಣಾ ಮಟ್ಟವನ್ನು 507.50 ಮೀಟರ್‌ನಿಂದ 508 ಮೀಟರ್ ವರೆಗೆ ಹೆಚ್ಚಿಸಿದಾಗ, ಬ್ಯಾರೇಜಿನಲ್ಲಿ ಒಟ್ಟು 2.50 ಟಿಎಂಸಿ ನೀರು ಸಂಗ್ರಹವಾಗುತ್ತದೆ.

ಬ್ಯಾರೇಜಿನ ಪೂರ್ಣ ಸಂಗ್ರಹಣಾ ಸಾಮರ್ಥ್ಯದ ಒಟ್ಟು 3.121 ಟಿಎಂಸಿ ಹಿನ್ನೀರು ಸಂಗ್ರಹದಿಂದ ಹಮ್ಮಿಗಿ, ಬಿದರಹಳ್ಳಿ ಮತ್ತು ಗುಮ್ಮಗೋಳ ಗ್ರಾಮಗಳ ಮುಳುಗಡೆಯಾದ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗಿದೆ. ಬ್ಯಾರೇಜಿನ ಹಿನ್ನೀರು ಮಟ್ಟವನ್ನು 508 ಮೀಟರ್‌ಗೆ ಹಂತ ಹಂತವಾಗಿ ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

508 ಮೀಟರ್‌ ವರೆಗೆ ನೀರಿನ ಸಂಗ್ರಹಿಸುವ ನಿಟ್ಟಿನಲ್ಲಿ ಜು. 16ರಿಂದ ಬ್ಯಾರೇಜಿನ ಗೇಟುಗಳನ್ನು ಇಳಿಸಲು ಸಿದ್ಧತೆ ನಡೆದಿದೆ. ಆದರಿಂದ ಹಿನ್ನೀರಿನಲ್ಲಿ ರೈತರು ಕೃಷಿ ಮಾಡಬಾರದು, ಈಗಾಗಲೇ ನದಿಯಲ್ಲಿ ಅಳವಡಿಸಿರುವ ಕೃಷಿ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು. ಮುಳುಗಡೆ ಪ್ರದೇಶಗಳಿಂದ ಜನ-ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳುವಂತೆ, ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

PREV