ದಾವಣಗೆರೆ ಜಿಲ್ಲೆಗೆ 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಅವಕಾಶ । ಡಿ.1ರಿಂದ ನೋಂದಣಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ರಾಗಿ ಖರೀದಿಗೆ ಕೇಂದ್ರ ಸರ್ಕಾರವು ಬೆಲೆ ನಿಗದಿಪಡಿಸಿದ್ದು, ಡಿ.1ರಿಂದ ರೈತರಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ರಾಗಿ ಬೆಂಬಲ ಬೆಲೆ ಕುರಿತ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ರಾಗಿ ಬೆಳೆಗಾರ ರೈತರು ಡಿ.1ರಿಂದ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.ಕನಿಷ್ಟ ಬೆಂಬಲ ಬೆಲೆಯಡಿ ರೈತರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನು ಖರೀದಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಗಿಗೆ 3,846 ರು. ಬೆಂಬಲ ಬೆಲೆ ನಿಗದಿಪಡಿಸಿದೆ. ಜಿಲ್ಲೆಯಲ್ಲಿ 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅನುಮತಿ ನೀಡಿದ್ದು, ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶ ಇದೆ ಎಂದು ಹೇಳಿದರು.
ಜ.1ರಿಂದ ಮಾ.31ರವರೆಗೆ ಜಿಲ್ಲೆಯಲ್ಲಿ ರಾಗಿ ಖರೀದಿ ಕಾರ್ಯ ಕೈಗೊಳ್ಳಲಾಗುವುದು. ರೈತರು ಸರ್ಕಾರದ ಸೌಲಭ್ಯ ಹಾಗ ಇನ್‌ಪುಟ್ ಸಬ್ಸಿಡಿ ಪಡೆಯಲು ತಮ್ಮ ಜಮೀನುಗಳ ಸಂಪೂರ್ಣ ಮಾಹಿತಿಯನ್ನು ಎಫ್‌ಐಡಿಯಲ್ಲಿ ಸೇರ್ಪಡೆ ಮಾಡಿಸಬೇಕು. ರೈತರು ಎಫ್ಐಡಿ ನೋಂದಾಯಿಸುವಾಗ ಯಾವುದೇ ಸುಳ್ಳು ಮಾಹಿತಿಗೆ ಅವಕಾಶ ನೀಡಬಾರದು ಎಂದು ಸೂಚ್ಯವಾಗಿ ಎಚ್ಚರಿಸಿದರು.
ಜಗಳೂರು ಖರೀದಿ ಕೇಂದ್ರದಲ್ಲಿ ಪ್ರತಿ ಸಲವೂ ಸಮಸ್ಯೆಯಾಗುತ್ತಿದ್ದು, ಅಲ್ಲಿನ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ರೈತರು ತಾವು ಬೆಳೆದ ಧಾನ್ಯಗಳನ್ನು ತಾವೇ ನೇರವಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬೇಕು. ಅನ್ಯ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಬಾರದು. ಎಲ್ಲಾ ಖರೀದಿ ಕೇಂದ್ರಗಳಲ್ಲೂ ತಾತ್ಕಾಲಿಕವಾಗಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಸೂಚಿಸಿದರು.