ಇದು ಮಹಾತ್ಮಾಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಕರ್ಮಕಾಂಡ
ಐದು ಗ್ರಾಮ ಪಂಚಾಯಿತಿಗಳಿಂದ ಒಂದೇ ಕೆರೆಯಲ್ಲಿ ಕಾಮಗಾರಿ
ಹತ್ತು ವರ್ಷಗಳಿಂದ ಕೆರೆ ಆಳವೂ ಆಗಿಲ್ಲ, ಅಗಲವೂ ಆಗಿಲ್ಲ
ಕನ್ನಡಪ್ರಭ ವಾರ್ತೆ ಕೊಪ್ಪಳ
ಅಧಿಕಾರಿಗಳ ಈ ಹುಚ್ಚಾಟದಿಂದ ಕೆರೆಯು ಆಳವೂ, ಆಗಿಲ್ಲ, ಅಗಲವೂ ಆಗಿಲ್ಲ. ಆದರೆ, ಕೋಟಿ ಕೋಟಿ ರುಪಾಯಿ ಮಾತ್ರ ಮಣ್ಣುಪಾಲಾಗಿದೆ.
ಕೆರೆಯ ಹೂಳು ತೆಗೆದು ಕೆರೆಯ ದಡಕ್ಕೆ ಹಾಕಿದರೆ ಕೆರೆಯೂ ಆಳವಾಗುತ್ತದೆ. ಕೆರೆಯಲ್ಲಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೆಚ್ಚುತ್ತದೆ. ಆದರೆ, ಈ ಕೆರೆಯಲ್ಲಿ ಕೆರೆಯಂಗಳದಲ್ಲಿಯೇ ಹೂಳು ತೆಗೆದು, ಕೆರೆಯ ಅಂಗಳದಲ್ಲಿಯೇ ಹಾಕಲಾಗುತ್ತದೆ. ಮಳೆಗಾಲದಲ್ಲಿ ನೀರು ಬಂದು ಮತ್ತೆ ಅದೇ ಕೆರೆಯಲ್ಲಿ ಹೂಳು ಸಮತಟ್ಟಾಗುತ್ತದೆ. ಹೀಗೆ ಸಮತಟ್ಟಾದ ಹೂಳನ್ನು ಮತ್ತೆ ಮತ್ತೆ ತೆಗೆದು, ಕೆರೆಯಂಗಳದಲ್ಲಿಯೇ ಹಾಕಲಾಗುತ್ತದೆ.
ಸಾವಿರ ಕಾರ್ಮಿಕರು:
ಪ್ರತಿ ನಿತ್ಯವೂ ಒಂದೊಂದು ಗ್ರಾಮ ಪಂಚಾಯಿತಿಯಿಂದ 200-250 ಕಾರ್ಮಿಕರು ಆಗಮಿಸುತ್ತಾರೆ. ದೂರದ ಊರಿಂದ ಇಲ್ಲಿಗೆ ಆಗಮಿಸಲು ಟ್ರ್ಯಾಕ್ಟರಿ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿಯೂ ಖಾತ್ರಿ ಯೋಜನೆಯಲ್ಲಿ ಖರ್ಚು ಹಾಕಲಾಗುತ್ತದೆ.
ಟೆಂಡರ್ ಕರೆಯುವಂತಿಲ್ಲ:
ಕೆರೆಯ ಹೂಳು ತೆಗೆದು, ಕೆರೆಯಂಗಳದಲ್ಲಿಯೇ ಹಾಕುವುದು ಯಾಕೆ ಎಂದು ಕೆರೆಯಂಗಳದಲ್ಲಿದ್ದ ಗ್ರಾಪಂ ಅಧಿಕಾರಿಗಳನ್ನು ಕೇಳಿದರೆ, ಕೆರೆಯ ಹೂಳೆತ್ತಿದ್ದನ್ನು ಟ್ರ್ಯಾಕ್ಟರ್ ಮೂಲಕ ಹೊರಹಾಕಬೇಕು. ಆದರೆ, ಅದಕ್ಕೆ ಟೆಂಡರ್ ಕರೆಯಬೇಕು. ಈಗ ಅದಕ್ಕೆ ಅವಕಾಶ ಇಲ್ಲದಿರುವುದರಿಂದ ಕೆರೆಯಂಗಳದಲ್ಲಿಯೇ ಹೂಳು ಹಾಕಲಾಗುತ್ತದೆ ಎನ್ನಲಾಗುತ್ತದೆ.ಮತ್ತೊಂದು ಕೆರೆಯಾಗುತ್ತಿತ್ತು:
ಹಾಗೆ ನೋಡಿದರೇ ಬಿ. ಹೊಸಳ್ಳಿ ಕೆರೆಯಲ್ಲಿ ಖಾತ್ರಿ ಯೋಜನೆ ಪ್ರಾರಂಭವಾದ 2008ರಿಂದಲೇ ಹೂಳು ತೆಗೆಯಲಾಗುತ್ತದೆ. ಆಗ ಅತೀ ಕಡಿಮೆ ವೆಚ್ಚ ಮಾಡುವುದಕ್ಕೆ ಅವಕಾಶ ಇರುತ್ತಿತ್ತು. ಈಗ ಪ್ರತಿ ವರ್ಷವೂ ಕೋಟಿ ಕೋಟಿ ವೆಚ್ಚ ಮಾಡಲಾಗುತ್ತದೆ. ಹೊಸ ಕೆರೆಯೊಂದನ್ನು ನಿರ್ಮಾಣ ಮಾಡಿದ್ದರೂ ಇದಕ್ಕಿಂತಲೂ ದೊಡ್ಡ ಕೆರೆ ನಿರ್ಮಾಣವಾಗುತ್ತಿತ್ತು ಎಂದು ಕೆರೆಯ ಸುತ್ತಮುತ್ತಲ ಗ್ರಾಮಸ್ಥರು ವ್ಯಂಗ್ಯವಾಡುತ್ತಾರೆ.ಕೆರೆಯ ಹೂಳನ್ನು ಪ್ರತಿ ವರ್ಷ ತೆಗೆಯಲೇಬೇಕು. ಅದನ್ನೇ ಮಾಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಸಮಸ್ಯೆಯಾಗಿದ್ದರೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಪಡೆದು, ದೂರು ನೀಡಿ. ತಪ್ಪಾಗಿದ್ದರೆ ಕ್ರಮಕೈಗೊಳ್ಳಲಾಗುತ್ತದೆ. ಈಗಂತೂ ಅಲ್ಲಿ ಚೆನ್ನಾಗಿಯೇ ಕೆಲಸ ನಡೆದಿದೆ ಎಂದು
ಜಿಪಂ ಸಿಇಒ ರಾಹುಲ್ ರತ್ನ ಪಾಂಡೆಯ ತಿಳಿಸಿದ್ದಾರೆ.