ರಸ್ತೆಬದಿ ನೆಡುತೋಪು ನಿರ್ವಹಣೆ ನೆಪದಲ್ಲಿ ಲಕ್ಷಾಂತರ ಖರ್ಚು

KannadaprabhaNewsNetwork |  
Published : Sep 13, 2025, 02:05 AM IST
ಪೋಟೊ-೧೨ ಎಸ್.ಎಚ್.ಟಿ. ೨ಕೆ- ಶಾಸಕ ಡಾ. ಚಂದ್ರು ಲಮಾಣಿ ವಿವಿಧ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ರಸ್ತೆಬದಿ ನೆಡುತೋಪು ನಿರ್ವಹಣೆ ನೆಪದಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಹಣ ವಿನಾಕಾರಣ ವಿನಿಯೋಗ ಮಾಡುತ್ತಿದ್ದು, ಎಲ್ಲಿಯೂ ರಸ್ತೆ ಬದಿ ಗಿಡಗಳು ಕಾಣುತ್ತಿಲ್ಲ ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ಪ್ರಭಾರಿ ಹಾಗೂ ಎಸಿಎಫ್ ಮೇಘನಾ ಅವರ ವಿರುದ್ಧ ಶಾಸಕ ಡಾ. ಚಂದ್ರು ಕೆ. ಲಮಾಣಿ ಹರಿಹಾಯ್ದರು.

ಶಿರಹಟ್ಟಿ: ರಸ್ತೆಬದಿ ನೆಡುತೋಪು ನಿರ್ವಹಣೆ ನೆಪದಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಹಣ ವಿನಾಕಾರಣ ವಿನಿಯೋಗ ಮಾಡುತ್ತಿದ್ದು, ಎಲ್ಲಿಯೂ ರಸ್ತೆ ಬದಿ ಗಿಡಗಳು ಕಾಣುತ್ತಿಲ್ಲ ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ಪ್ರಭಾರಿ ಹಾಗೂ ಎಸಿಎಫ್ ಮೇಘನಾ ಅವರ ವಿರುದ್ಧ ಶಾಸಕ ಡಾ. ಚಂದ್ರು ಕೆ. ಲಮಾಣಿ ಹರಿಹಾಯ್ದರು.ಶುಕ್ರವಾರ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಚರ್ಚೆ ನಡೆಸಿ ಮಾತನಾಡಿದರು. ತಾಲೂಕಿನ ಕಡಕೋಳ, ಜಲ್ಲಿಗೇರಿ, ಬೆಳ್ಳಟ್ಟಿ, ಬನ್ನಿಕೊಪ್ಪ, ಮಜ್ಜೂರ ಹೀಗೆ ಅನೇಕ ಕಡೆ ವಲಯ ಅರಣ್ಯ ಇಲಾಖೆಯವರು ರಸ್ತೆ ಬದಿ ನೆಡುತೋಪು ನಿರ್ವಹಣೆ ನೆಪದಲ್ಲಿ ನಿರ್ವಹಣಾ ವೆಚ್ಚವೆಂದು ಲಕ್ಷಾಂತರ ರು. ಖರ್ಚು ಹಾಕುತ್ತಿದ್ದು, ಶಿರಹಟ್ಟಿ ಮತಕ್ಷೇತ್ರದಾದ್ಯಂತ ನಾನು ಸಂಚರಿಸುತ್ತಿದ್ದರೂ ರಸ್ತೆ ಬದಿ ಎಲ್ಲಿಯೂ ಗಿಡಗಳು ಕಾಣುತ್ತಿಲ್ಲ ಎಂದು ದೂರಿದರು.

ಸರಿಯಾಗಿ ಉತ್ತರಿಸದ ಅಧಿಕಾರಿ ಹಾಗೂ ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನಿರ್ವಹಣ ವೆಚ್ಚವೆಂದು ಲಕ್ಷಾಂತರ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ದಾಟಿಯಲ್ಲಿ ತಿವಿದರು. ಆದರೆ ಇಲಾಖೆಯವರು ಏನೇನೋ ಸಬೂಬ ಹೇಳಿದ ನಂತರ ಚರ್ಚೆ ಮೊಟಕುಗೊಂಡಿತು.

ಕಾಡು ಹಂದಿ, ಜಿಂಕೆಗಳು ರೈತರ ಬೆಳೆಗಳನ್ನು ಪ್ರತಿ ವರ್ಷವೂ ಹಾಳು ಮಾಡುತ್ತಿವೆ. ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಿ ಹಾಗೂ ರೈತರಿಂದ ಎಷ್ಟು ಅರ್ಜಿಗಳು ಬಂದಿವೆ ಎಂದು ಪ್ರಶ್ನಿಸಿದರು. ಒಟ್ಟು ರೈತರಿಂದ ಪರಿಹಾರಕ್ಕಾಗಿ ೧೨೩ ಅರ್ಜಿಗಳು ಬಂದಿವೆ. ಕೇವಲ ೪ ಜನ ರೈತರಿಗೆ ಮಾತ್ರ ಪರಿಹಾರ ನೀಡಲಾಗಿದೆ.ಅನುದಾನ ಬಂದ ನಂತರ ಉಳಿದ ರೈತರಿಗೆ ನೀಡಲಾಗುವುದು ಎಂದು ಹೇಳಿದರು. ವಿದೇಶಿ ಪಕ್ಷಿಗಳು ಹಾಗೂ ಮಂಗಗಳು ಕೂಡ ರೈತರ ಬೆಳೆಯನ್ನು ನಾಶಪಡಿಸುತ್ತಿದ್ದು, ಇದಕ್ಕೆ ಏಕೆ ಪರಿಹಾರ ನೀಡುತ್ತಿಲ್ಲ ಎಂದು ಮರು ಪ್ರಶ್ನೆ ಮಾಡಿದರು. ಸರ್ಕಾರದ ಮಾರ್ಗಸೂಚಿ ಹಾಗೆ ಇದೆ ಎನ್ನುತ್ತಿದ್ದಂತೆ ಈ ಬಾರಿ ಪರಿಹಾರದ ನಿಯಮಾನುಸಾರ ಇದನ್ನು ಸೇರಿಸಲು ಸಭೆಯಲ್ಲಿ ಸೂಚನೆ ನೀಡಿದರು.ಬಿತ್ತನೆ ಕ್ಷೇತ್ರ ಕಮ್ಮಿ ಬೆಳೆ ವಿಮೆ ತುಂಬಿದ ರೈತರ ಸಂಖ್ಯೆ ದುಪ್ಪಟ್ಟು ತೋಟಗಾರಿಕೆ ಇಲಾಖೆ ವತಿಯಿಂದ ಪೂರ್ವ ಮುಂಗಾರು ಬೆಳೆ ಹಾನಿ ಸಮೀಕ್ಷೆ ಮಾಹಿತಿ ಕೇಳುತ್ತಿದ್ದಂತೆ ಶಾಸಕರೇ ಬೆಚ್ಚಿಬಿದ್ದರು. ಮೆಣಸಿನಕಾಯಿ ಒಟ್ಟು ೯೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ೫೭ ಹೆಕ್ಟೇರ್ ಹಾನಿಯಾಗಿದೆ. ಈರುಳ್ಳಿ ೧೨೪ ಹೆಕ್ಟೇರ್ ಬಿತ್ತನೆಯಾಗಿದೆ. ೨೦ ಹೆಕ್ಟೇರ್ ಹಾನಿಯಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಶಾಂತ ಕುಲಕರ್ಣಿ ಮಾಹಿತಿ ನೀಡಿದರು.ಇದರಲ್ಲಿ ಬೆಳೆವಿಮೆ ತುಂಬಿದ ರೈತರ ಸಂಖ್ಯೆ ಎಷ್ಟು ಎಂದು ಕೇಳಿದರೆ ೨೦೩೮ ರೈತರು ಬೆಳೆವಿಮೆ ಕಂತು ತುಂಬಿರುವುದಾಗಿ ಹೇಳುತ್ತಿದ್ದಂತೆ ಅಧಿಕಾರಿ ಉತ್ತರಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಬೆಚ್ಚಿಬಿದ್ದರು. ಮೆಣಸಿನ ಕಾಯಿ ಹಾಗೂ ಈರುಳ್ಳಿ ಸೇರಿ ಬಿತ್ತನೆ ಕ್ಷೇತ್ರವೇ ೨೦೦ ಹೆಕ್ಟೇರ್ ಆಗುತ್ತಿದ್ದು, ನೀವೇನು ಉತ್ತರ ನೀಡುತ್ತಿದ್ದೀರಿ ಎಂದು ಹರಿಹಾಯ್ದರು. ಬೆಳೆವಿಮೆಯಲ್ಲಿ ನಿಜವಾದ ರೈತರಿಗೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಇದರಲ್ಲಿ ಗೋಲ್‌ಮಾಲ್ ನಡೆಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.ಕಾರ್ಮಿಕ ಇಲಾಖೆ ಅಡಿಯಲ್ಲಿ ೧೬.೦೮೫ ಜನ ಕಾರ್ಮಿಕರ ಕಾರ್ಡ್‌ ಹೊಂದಿರುವುದಾಗಿ ಅಧಿಕಾರಿ ಮಾಹಿತಿ ನೀಡಿದರು. ಸೌಲಭ್ಯ ಪಡೆದವರು ಎಷ್ಟು ಜನ ಎಂದರೆ ಅಧಿಕಾರಿಯಿಂದ ಸರಿಯಾಗಿ ಉತ್ತರ ಸಿಗಲಿಲ್ಲ. ಹೆರಿಗೆ ಸೌಲಭ್ಯಕ್ಕೆ ರು. ೫೦ ಸಾವಿರ, ಅಂತ್ಯಸಂಸ್ಕಾರ ವೆಚ್ಚ ರು. ೭೫ ಸಾವಿರ, ಮದುವೆ ಸಹಾಯಧನ ರು. ೬೦ ಸಾವಿರ, ವೈದ್ಯಕೀಯ ಸಹಾಯಧನ ಹಾಗೂ ೬೦ ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ರು. ೩ ಸಾವಿರ ಸಹಾಯಧನ ನೀಡಬೇಕಿದ್ದು, ಈ ಸೌಲಭ್ಯ ಯಾರಿಗೂ ಸಿಕ್ಕಿಲ್ಲ ಎಂದರೆ ನೀವು ಮಾಡುವ ಕೆಲಸವಾದರೂ ಏನು ಎಂದು ಕಾರ್ಮಿಕ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಈ ಬಾರಿ ವಾಡಿಕೆಗಿಂತಲೂ ಹೆಚ್ಚಿಗೆ ಮಳೆ ಸುರಿದಿದ್ದು, ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಹಾನಿಯಾಗಿದೆ. ಸರ್ಕಾರ ರೈತರಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಅಧಿವೇಶನದಲ್ಲೂ ಗಮನ ಸೆಳೆದಿದ್ದು, ಕೃಷಿ ಇಲಾಖೆ ಅಧಿಕಾರಿಗಳು ನಿಖರವಾದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು. ವಿವಿಧ ಇಲಾಖೆಗಳ ಮೇಲೆ ಚರ್ಚೆ ನಡೆಯಿತು. ತಹಸೀಲ್ದಾರ್ ಕೆ. ರಾಘವೇಂದ್ರರಾವ್, ಸಿಪಿಐ ನಾಗರಾಜ ಮಾಡಳ್ಳಿ, ತಾಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ, ತಾಪಂ ಇಓ ರಾಮಣ್ಣ ದೊಡ್ಡಮನಿ, ವೀತಯ್ಯ ಮಠಪತಿ, ತ್ರೈಮಾಸಿಕ ಕೆಡಿಪಿ ಸಭೆಯ ಅಧಿಕಾರೇತರ ಸದಸ್ಯರಾದ ಮಹೇಂದ್ರ ಮುಂಡವಾಡ, ಫಕ್ಕೀರೇಶ ನಡುವಿನಕೇರಿ, ಪವನಕುಮಾರ ಈಳಗೇರ, ರೇಣುಕಾ ಕಬಾಡರ, ರಾಘವೇಂದ್ರ ದೊಡ್ಡಮನಿ ಇತರರು ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ