ಕನ್ನಡಪ್ರಭ ವಾರ್ತೆ ಮಂಡ್ಯ
ಹೀಗೆ ಒಂದಲ್ಲ, ಎರಡಲ್ಲ... ಮಿಮ್ಸ್ ಆಸ್ಪತ್ರೆಯಲ್ಲಿರುವ ನೂರಾರು ಅವಾಂತರಗಳು ಉಪ ಲೋಕಾಯುಕ್ತರ ಭೇಟಿ ಸಮಯದಲ್ಲಿ ಅನಾವರಣಗೊಂಡವು.
ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಮಂಗಳವಾರ ಮಧ್ಯಾಹ್ನ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಪ್ರತಿಯೊಂದು ವಿಭಾಗದಲ್ಲೂ ಒಂದಲ್ಲಾ ಒಂದು ಅವ್ಯವಸ್ಥೆ ಕಣ್ಣಿಗೆ ರಾಚುತ್ತಲೇ ಇತ್ತು. ಇದರಿಂದ ತೀವ್ರ ಅಸಮಾಧಾನಗೊಂಡ ಉಪಲೋಕಾಯುಕ್ತರು ವೈದ್ಯಾಧಿಕಾರಿಗಳು, ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡರು.ಅವಧಿ ಮುಗಿದ ಔಷಧ ವಿತರಣೆ:
ಅವಧಿ ಮೀರಿದ ಔಷಧಗಳನ್ನು ಇಟ್ಟುಕೊಂಡಿರುವುದೇ ತಪ್ಪು. ಅದಲ್ಲದೇ, ಅದೇ ಔಷಧಗಳನ್ನು ರೋಗಿಗಳಿಗೆ ವಿತರಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ. ರೋಗಿಗಳ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದು ಇದರಿಂದಲೇ ಗೊತ್ತಾಗುತ್ತೆ. ಈ ವಿಷಯವಾಗಿ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.
ಮಿಮ್ಸ್ ಪ್ರಯೋಗಾಲಯಕ್ಕೆ ಭೇಟಿ ನೀಡಿದ ವೇಳೆ ಅವೈಜ್ಞಾನಿಕ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಇರಿಸಿದ್ದಿದು ಕಂಡುಬಂದಿತು. ರಕ್ತದಿಂದ ಕೂಡಿದ ಹತ್ತಿಗಳು, ಸಿರಿಂಜ್‌ಗಳನ್ನು ಡಸ್ಟ್‌ಬಿನ್‌ಗಳಿಗೆ ಹಾಕಿ ತೆರೆದಿಡಲಾಗಿತ್ತು. ಸ್ಕ್ರೀನ್‌ಗಳು ಇರಲಿಲ್ಲ. ವೈದ್ಯರು, ಸಿಬ್ಬಂದಿಯಾದ ನಿಮಗೇ ಪ್ರಯೋಗಾಲಯದೊಳಗೆ ಯಾವ ಯಾವ ವಸ್ತುಗಳು ಎಲ್ಲೆಲ್ಲಿರಬೇಕು, ಹೇಗಿರಬೇಕೆಂಬ ಜ್ಞಾನವಿಲ್ಲದಿದ್ದರೆ ಹೇಗ್ರೀ ಎಂದು ಕೋಪದಿಂದಲೇ ಪ್ರಶ್ನಿಸಿದರು.
ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿದಾಗ ಇನ್ನಷ್ಟು ಅವ್ಯವಸ್ಥೆಗಳು ಎದುರಾದವು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಕಿದ್ದ ಹಾಸಿಗೆಗಳು ಕಿತ್ತುಹೊಗಿದ್ದವು. ಚಗರೆ ಹೊರಬಂದಿತ್ತು. ಅದರ ಮೇಲೆಯೇ ರೋಗಿಗಳನ್ನು ಮಲಗಿಸಲಾಗಿತ್ತು. ಶೌಚಾಲಯಗಳು ದುರ್ನಾತ ಬೀರುತ್ತಿದ್ದವು. ಅಶುಚಿತ್ವ ತಾಂಡವವಾಡುತ್ತಿತ್ತು. ಎತ್ತ ತಿರುಗಿದರೂ ಸ್ವಚ್ಛತೆ ಕಾಣುತ್ತಿರಲಿಲ್ಲ. ಆಸ್ಪತ್ರೆಯ ಮೇಲ್ಭಾಗದಲ್ಲಿ ರೋಗಿಗಳು, ಆರೈಕೆಗೆ ಬಂದವರು ಕುಳಿತುಕೊಳ್ಳುವುದಕ್ಕೆ ಬೆಂಚುಗಳ ವ್ಯವಸ್ಥೆ ಇರಲಿಲ್ಲ. ಇಡೀ ಆಸ್ಪತ್ರೆಯ ಯಾವುದೇ ಭಾಗದಲ್ಲೂ ಕುಡಿಯುವ ನೀರಿಗೆ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಉಪಲೋಕಯುಕ್ತರು ಇದೇನು ಆಸ್ಪತ್ರೆಯೋ ಯಮಲೋಕವೋ ಎಂದು ಕಿಡಿಕಾರಿದರು.
ಅಲ್ಲಿಂದ ಹೋಟೆಲ್‌ನತ್ತ ಉಪ ಲೋಕಾಯುಕ್ತರು ತೆರಳಿದರು. ಅಲ್ಲಿಟ್ಟಿರುವ ಬನ್‌ಗಳನ್ನು ವೀಕ್ಷಿಸಿದಾಗ ಅವಧಿ ಮೀರಿರುವ ಬನ್‌ಗಳನ್ನು ಅಲ್ಲಿಟ್ಟಿರುವುದು ಗಮನಕ್ಕೆ ಬಂದಿತು. 12 ರು.ನ ಬನ್‌ನ್ನು 20 ರು.ಗೆ ಮಾರಾಟ ಮಾಡುತ್ತಿರುವುದನ್ನು ಕಂಡು ಕೋಪಗೊಂಡರು. ದುಡ್ಡು ಕೊಟ್ಟು ಇಂತಹ ಬನ್‌ಗಳನ್ನು ತಿಂದು ರೋಗಿಗಳು ಹೇಗೆ ಉಳಿದುಕೊಂಡಿದ್ದಾರೋ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಉಪ ಲೋಕಾಯುಕ್ತರು ಆಸ್ಪತ್ರೆಗೆ ಭೇಟಿ ನೀಡಿದ ಎರಡೂವರೆ ಗಂಟೆ ಬಿಟ್ಟು ಬಂದ ಸಿಎಒ ಜಾನ್ಸನ್ ಅವರನ್ನು ತರಾಟೆಗೆ ತೆಗೆದುಕೊಂಡರು. ನೀವೇನ್ರೀ, ಆಸ್ಪತ್ರೆಯೊಳಗೆ ಎಂದಾದರೂ ಬಂದು ನೋಡಿದಿರೇನ್ರೀ. ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ವೇನ್ರೀ. ವಾಹನಗಳ ಪಾರ್ಕಿಂಗ್‌ಗೆ ಎಷ್ಟು ಹಣ ಪಡೆಯುತ್ತಿದ್ದಾರೇಂತ ಗೊತ್ತೇನ್ರೀ. ಹೆಜ್ಜೆ ಹೆಜ್ಜೆಗೂ ಸುಲಿಗೆ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದೀರಾ. ನಿಮ್ಮನ್ನ ನೋಡಿದರೆ ಅವರು ಹೆದರಿಕೊಳ್ಳಬೇಕು. ನೀವೇ ಅವರಿಗೆ ಹೆದರಿಕೊಳ್ಳುತ್ತಿದ್ದೀರಲ್ರೀ. ಅವರು ಬಿಸಾಕೋ ಎಂಜಲು ತಿಂದಿರುತ್ತೀರಲ್ಲ. ಅದಕ್ಕಾ.. ಎಂದು ಖಾರವಾಗಿ ನುಡಿದರು.
ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಮುಖವಾಗಿ ಔಷಧಗಳ ಕೊರತೆ ಕಂಡುಬಂದಿತು. ರೋಗಿಗಳಿಗೆ ಹೊರಗಡೆಗೆ ಔಷಧಗಳನ್ನು ಬರೆದುಕೊಡುತ್ತಿರುವುದನ್ನು ಕಂಡ ಉಪ ಲೋಕಾಯುಕ್ತರು, ನೀವೇ ರೋಗಿಗಳಿಗೆ ಔಷಧಗಳನ್ನು ತರಿಸಿಕೊಡಬೇಕು. ಅಂತಹುದರಲ್ಲಿ ನೀವೇ ಹೊರಗೆ ಬರೆದುಕೊಟ್ಟರೆ ಹೇಗ್ರೀ. ಏನ್ರೀ ಇದು ಸರ್ಕಾರಿ ಆಸ್ಪತ್ರೆನೇನ್ರಿ ಇದು. ಸರಿಯಾದ ಜಾಗದಲ್ಲಿ ವೈದ್ಯರಿಲ್ಲ. ಎಲ್ಲಿ ಹೋಗಿದ್ದಾರ್ರೀ ವೈದ್ಯರು. ಹೊರಗೆ ಖಾಸಗಿ ನರ್ಸಿಂಗ್ ಹೊಂಗಳಲ್ಲಿ ಕೆಲಸ ಮಾಡೋಕೇನ್ರಿ ಆಸ್ಪತ್ರೆ ಕಟ್ಟಿಸಿರೋದು ಎಂದು ಹೌಹಾರಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ನಗರಸಭೆ ಆಯುಕ್ತೆ ಪಂಪಾಶ್ರೀ ಇತರರಿದ್ದರು.ಪ್ರತಿ ವರ್ಷ ಆಸ್ಪತ್ರೆಗೆ ಕೋಟ್ಯಂತರ ರು. ಹಣವನ್ನು ಸರ್ಕಾರ ನೀಡುತ್ತಿದೆ. ಅದರೂ ಮೂಲಸೌಲಭ್ಯಗಳು ಆಸ್ಪತ್ರೆಯಲ್ಲಿ ಇಲ್ಲ. ಇಡೀ ಆಸ್ಪತ್ರೆ ಗಬ್ಬೆದ್ದು ನಾರುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕೂರುವುದಕ್ಕೆ ಕುರ್ಚಿ ಇಲ್ಲ, ಶುಚಿಯಾದ ಆಹಾರ ಕೊಡುತ್ತಿಲ್ಲ, ಕಡು ಬಡವರು ಆಸ್ಪತ್ರೆಗೆ ಬರುವುದಕ್ಕೆ ಭಯಪಡುವಂತಿದೆ.- ಬಿ.ವೀರಪ್ಪ, ಉಪ ಲೋಕಾಯುಕ್ತರು