ನಾಲ್ಕು ಸಾವಿರ ಸಸಿ ನೆಡಲು ಅರಣ್ಯ ಇಲಾಖೆ ಯೋಜನೆ

KannadaprabhaNewsNetwork |  
Published : May 28, 2025, 12:36 AM IST
(26ಎನ್.ಆರ್.ಡಿ4 ಪಟ್ಟಣದ ಫಾರ್ಮಹೌಸದಲ್ಲಿ ಅರಣ್ಯ ಇಲಾಖೆ ಬೆಳೆಸಿದ ವಿವಿಧ ಜಾತಿ ಸಸಿಗಳು.)        | Kannada Prabha

ಸಾರಾಂಶ

ನರಗುಂದ ತಾಲೂಕಿನಲ್ಲಿ ಈ ವರ್ಷ ನಾಲ್ಕು ಸಾವಿರ ಸಸಿಗಳನ್ನು ನೆಡಲು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನಲ್ಲಿ ಈ ವರ್ಷ ನಾಲ್ಕು ಸಾವಿರ ಸಸಿಗಳನ್ನು ನೆಡಲು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ತಾಲೂಕಿನಲ್ಲಿ ಅರಣ್ಯ ಪ್ರದೇಶವಿಲ್ಲ. ಪ್ರತಿ ವರ್ಷ ಸಸಿಗಳನ್ನು ನೆಡಲು ಜಾಗೆ ಹುಡುಕುವ ಸ್ಥಿತಿ ಇದೆ. ಅರಣ್ಯ ಇಲಾಖೆ ಪದೇ ಪದೇ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ಪ್ರದೇಶಕ್ಕೆ ಹೋಗುವ ರಸ್ತೆ ಅಕ್ಕ ಪಕ್ಕ, ಮಲಪ್ರಭಾ ಕಾಲುವೆ ದಂಡೆ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ, ಉದ್ಯಾನ ವನಗಳಲ್ಲಿ ಸಸಿಗಳನ್ನು ನೆಡಬೇಕಾಗಿದೆ.

ಪಟ್ಟಣದ ಕೆಂಪಕೇರಿಯ ಪಕ್ಕದಲ್ಲಿ ಅರಣ್ಯ ಇಲಾಖೆಯ ಫಾರ್ಮಹೌಸ್‌ನಲ್ಲಿ ಅರಣ್ಯ ಅಧಿಕಾರಿಗಳು ಬಸವನ ಪಾರ್ಕ್, ಅರಳಿ, ಬೇವು, ಮಾಗನಿ, ಶಿವನಿ, ಹೊಳಮತ್ತಿ, ಶಿರ್ಶಲ, ಗುರಗ, ಚಳ್ಳಿ, ನೀರಲ, ಆಲ, ಬನ್ನಿ ಸೇರಿದಂತೆ ಮುಂತಾದ ಜಾತಿಯ ಸಸಿಗಳನ್ನು ಬೆಳೆಸಿದ್ದಾರೆ. ಈ ಸಸಿಗಳನ್ನು ವಿವಿಧ ಪ್ರದೇಶದಲ್ಲಿ ನೆಡಲಾಗುವುದು.

ಬೇಸಿಗೆಯ ಸಮಯದಲ್ಲಿ ಅರಣ್ಯ ಇಲಾಖೆಯವರು ಜೂನ್‌ ತಿಂಗಳಲ್ಲಿ ಸಸಿಗಳನ್ನು ನೆಡಬೇಕೆಂದು ಜೆಸಿಬಿ ಮೂಲಕ ಗುಂಡಿಗಳನ್ನು ತೆಗೆಸಿದ್ದಾರೆ. ಆದರೆ ರಸ್ತೆ ಪಕ್ಕ ಸಸಿಗಳನ್ನು ನೆಡಲು ತೆಗೆಸಿದ ಗುಂಡಿಗಳ ಸುತ್ತಲೂ ಜಾಲಿ ಕಂಟಿ ಬೆಳೆದಿವೆ. ಈ ಜಾಲಿ ಕಂಟಿಗಳ ಮಧ್ಯ ಸಸಿಗಳನ್ನು ಹೇಗೆ ನೆಡುತ್ತಾರೆ, ಸಸಿಗಳು ಬೆಳೆಯಲು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

3 ವರ್ಷ ಸಸಿಗಳ ರಕ್ಷಣೆ:ಸಾಮಾಜಿಕ ಅರಣ್ಯ ಇಲಾಖೆಯಿಂದ ಈ ವರ್ಷ ಜೂನ್ ತಿಂಗಳಲ್ಲಿ ಸಸಿ ನೆಟ್ಟು, ಮುಂದಿನ 3 ವರ್ಷ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಕಾವಲುಗಾರರ ಮೂಲಕ ಈ ಸಸಿಗಳನ್ನು ರಕ್ಷಣೆ ಮಾಡಲಿದೆ. ಸಸಿಗಳ ಸುತ್ತಲಿರುವ ಜಾಲಿ ಕಂಟಿ ಸ್ವಚ್ಛಗೊಳಿಸಿ, ಬೇಸಿಗೆಯ ಸಮಯದಲ್ಲಿ ಸಸಿಗಳಿಗೆ ಇಲಾಖೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದೆಂದು ಅಧಿಕಾರಿಗಳು ತಿಳಿಸಿದರು.

ಈ ವರ್ಷ ಇಲಾಖೆಯ ವತಿಯಿಂದ ಸಸಿಗಳನ್ನು ನೆಡಲು ನಾಲ್ಕು ಸಾವಿರ ಗುಂಡಿಗಳನ್ನು ತೋಡಲಾಗಿದೆ. ನರಗುಂದದಿಂದ ಹದಲಿ ಕ್ರಾಸ್‌ ವರೆಗೆ 2700 ಗುಂಡಿ, ಪಟ್ಟಣದ ನೀರಾವರಿ ನಿಗಮದ ಪ್ರವಾಸ ಮಂದಿರದ ಆವರಣದಲ್ಲಿ 900 ಗುಂಡಿ, ಕೃಷಿ ಇಲಾಖೆ ಆವರಣದಲ್ಲಿ 900 ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ.

ಜೂನ್‌ ತಿಂಗಳಲ್ಲಿ 4 ಸಾವಿರ ಸಸಿಗಳನ್ನು ನೆಡಸಲಾಗುವುದು, ಅವುಗಳನ್ನು ಬೆಳೆಸಲು ನಮ್ಮ ಇಲಾಖೆಯ ಸಿಬ್ಬಂದಿ ಮತ್ತು ಕಾವಲುಗಾರರು ಇರುತ್ತಾರೆ. ಮುಂದಿನ ದಿನಗಳಲ್ಲಿ ಸಸಿಗಳನ್ನು ನಡೆಸಲು ಹೆಚ್ಚಿನ ಜಾಗ ಸಿಕ್ಕರೆ ನೆಡುತ್ತೇವೆ ಎಂದು ತಾಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಡಿ.ಬಿ. ಪಠಾಣ ಹೇಳಿದರು.ಪ್ರತಿ ವರ್ಷ ಸರ್ಕಾರ ಅರಣ್ಯ ಇಲಾಖೆಯ ಮೂಲಕ ಸಾವಿರಾರು ಸಸಿಗಳನ್ನು ರಸ್ತೆ ಪಕ್ಕ ಮತ್ತು ವಿವಿಧ ಕಚೇರಿ ಆವರಣದಲ್ಲಿ ನೆಡುತ್ತಿದೆ. ಇದರ ರಕ್ಷಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ತೆಗೆದುಕೊಂಡರೆ ಮಾತ್ರ ಸಸಿಗಳು ದೊಡ್ಡ ಮರವಾಗಿ ನಮ್ಮ ಪರಿಸರ ಉಳಿಸಲು ಅನುಕೂಲವಾಗುತ್ತದೆ ಎಂದು ಪರಿಸರ ಪ್ರೇಮಿ ಜಗದೀಶ ಗೊಂಡಬಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ