ಆಧುನಿಕತೆಯಲ್ಲಿ ಮನಸ್ಸುಗಳು ಕಳೆದುಹೋಗುತ್ತಿವೆ: ಡಾ. ಸಿ.ಆರ್‌.ಚಂದ್ರಶೇಖರ್‌

KannadaprabhaNewsNetwork | Published : Mar 10, 2024 1:30 AM

ಸಾರಾಂಶ

ಇಂದಿನ ಯಂತ್ರ ಯುಗದ ನಡುವೆ ಮನುಷ್ಯರು ಮತ್ತು ಮನಸ್ಸುಗಳು ಕಳೆದು ಹೋಗುತ್ತಿವೆ. ಇಂದು ಬದುಕಿನ ದೊಡ್ಡ ಸವಾಲು ಎಂದರೆ ಆರೋಗ್ಯವಾಗಿದೆ. ಅಡುಗೆ ಮಾಡುವವರಿಂದ ಹಿಡಿದು, ಜೋಗುಳ ಹಾಡುವವರು, ಕುಡಿಸುವವರ ತನಕ ಯಂತ್ರಗಳೇ ಬಂದಿವೆ. ಜನಜೀವನವೇ ಬದಲಾಗುವ ಈ ಹೊತ್ತಿನಲ್ಲಿ ಮನಸ್ಸುಗಳಿಗೆ ಬೆಲೆಯೇ ಇಲ್ಲವಾಗಿದೆ ಎಂದು ಮನಃ ಶಾಸ್ತ್ರಜ್ಞ ಡಾ.ಸಿ.ಆರ್. ಚಂದ್ರಶೇಖರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಂದಿನ ಯಂತ್ರ ಯುಗದ ನಡುವೆ ಮನುಷ್ಯರು ಮತ್ತು ಮನಸ್ಸುಗಳು ಕಳೆದು ಹೋಗುತ್ತಿವೆ ಎಂದು ಮನಃಶಾಸ್ತ್ರಜ್ಞ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು.

ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಲೋಹಿಯಾ ಪ್ರತಿಷ್ಠಾನ, ಕ್ಷೇಮ ಟ್ರಸ್ಟ್, ಐಕ್ಯೂಎಸಿ ಸಹಯೋಗದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ "ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ " ಕುರಿತು ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಬದುಕಿನ ದೊಡ್ಡ ಸವಾಲು ಎಂದರೆ ಆರೋಗ್ಯವಾಗಿದೆ. ಸಕಲ ಭಾಗ್ಯಗಳಲ್ಲೂ ಆರೋಗ್ಯವೇ ದೊಡ್ಡ ಭಾಗ್ಯವಾಗಿದೆ. ಯಾಂತ್ರೀಕತೆಯ ನಡುವೆ ಮನುಷ್ಯರೇ ಬೇಡವಾದ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅಡುಗೆ ಮಾಡುವವರಿಂದ ಹಿಡಿದು, ಜೋಗುಳ ಹಾಡುವವರು, ಕುಡಿಸುವವರ ತನಕ ಯಂತ್ರಗಳೇ ಬಂದಿವೆ. ಜನ ಜೀವನವೇ ಬದಲಾಗುವ ಈ ಹೊತ್ತಿನಲ್ಲಿ ಮನಸ್ಸುಗಳಿಗೆ ಬೆಲೆಯೇ ಇಲ್ಲವಾಗಿದೆ ಎಂದು ವಿಷಾದಿಸಿದರು.

ಬಹುಮುಖ್ಯವಾಗಿ ಯುವಕರಲ್ಲಿ ಆರೋಗ್ಯ ಸಮಸ್ಯೆ ಕಾಡತೊಡಗಿದೆ. 25 ವರ್ಷದ ಕೆಳಗಿನ ಮಕ್ಕಳೇ ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಯಂಗ್ ಡಯಾಬಿಟಿಸ್, ಯಂಗ್ ಬಿಪಿ ಕಾಣಿಸಿಕೊಳ್ಳತೊಡಗಿದೆ. ಯುವಕರಲ್ಲಿ ಖಿನ್ನತೆ ಹೆಚ್ಚಾಗುತ್ತಿದೆ. ಯುವಕರು ಕೀಳರಿಮೆಯಿಂದ ಹೊರ ಬರಬೇಕಾಗಿದೆ. ಮಾನಸಿ ಆರೋಗ್ಯ ಎಂದರೆ ಭಯ, ಕೋಪ, ಮತ್ಸರ ಮುಂತಾದ ಕೆಟ್ಟ ಗುಣಗಳನ್ನು ದೂರವಿಡಿ. ಮೂಢನಂಬಿಕೆಗಳಿಂದ ಹೊರಬನ್ನಿ. ವೈಜ್ಞಾನಿಕವಾಗಿ ಆಲೋಚಿಸಿ, ಪ್ರೀತಿಯನ್ನು ತೋರಿಸಿ, ನಾವು ಪ್ರಕೃತಿಯ ಸೃಷ್ಟಿ. ಪ್ರಕೃತಿಯ ವಿರುದ್ಧವಾದ ದಿಕ್ಕಿನಲ್ಲಿ ಸಾಗುವುದು ಬೇಡ ಎಂದರು.

ಮುಖ್ಯವಾಗಿ ಶಿಕ್ಷಕರು, ಪೋಷಕರು ಮಕ್ಕಳನ್ನು, ವಿದ್ಯಾರ್ಥಿಗಳನ್ನು ಮತ್ತೊಬ್ಬರೊಂದಿಗೆ ಹೋಲಿಸುವುದು. ಅವರಲ್ಲಿ ಕೀಳರಿಮೆ ಮೂಡಿಸಿ ಅವರಲ್ಲಿ ಮಾನಸಿಕ ಒತ್ತಡಕ್ಕೆ ದೂಡಬಾರದು ಎಂದು ತಿಳಿಸಿದ ಅವರು ಥೈರಾಯ್ಡ್, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಖಿನ್ನತೆ ಮುಂತಾದ ಅನೇಕ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಅವರು ವಿವರಿಸಿದರು.

ಕವಯತ್ರಿ ಸವಿತಾ ನಾಗಭೂಷಣ್ ಮಾತನಾಡಿ, ಮಾನವೀಯತೆಯ ಸ್ಪರ್ಶ ಇಂದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಜಾತಿ, ಧರ್ಮ, ಬಡತನ, ಸಿರಿತನಗಳನ್ನು ಮೀರಿ ಬೆಳೆಯಬೇಕಾಗಿದೆ. ನಮ್ಮ ಆಸಕ್ತಿಗಳು ಸರಿಯಾದ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಡಾ. ಟಿ.ಅವಿನಾಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಅರಿವನ್ನು ವಿಸ್ತಾರಗೊಳಿಸುವ ಹಿನ್ನಲೆ ಈ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಪಂಡಿತ ಪರಂಪರೆಯ ಇಡೀ ರಾಷ್ಟ್ರವೇ ಮೆಚ್ಚಿದ ಡಾ. ಸಿ.ಆರ್. ಚಂದ್ರಶೇಖರ್ ಅವರು ನಮ್ಮ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಆರ್.ಶ್ರೀಧರ್ , ಐಕ್ಯೂಎಸಿ ಸಂಚಾಲಕಿ ಪ್ರೊ. ಕೆ.ಎಸ್.ಸರಳಾ, ಪ್ರಾಧ್ಯಾಪಕರಾದ ಕುಂದನ್ ಬಸವರಾಜ್, ಡಾ. ಗಿರಿಧರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಎ.ಶಿವಮೂರ್ತಿ ಮುಂತಾದವರಿದ್ದರು.

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸೌಮ್ಯ ಪ್ರಾರ್ಥಿಸಿದರು. ಸವಿತಾ ಸ್ವಾಗತಿಸಿದರು. ಮಾನಸ, ಅಕ್ಷತಾ ನಿರೂಪಿಸಿದರು.

- - - -9ಎಸ್‌ಎಂಜಿಕೆಪಿ01:

ಶಿವಮೊಗ್ಗದಲ್ಲಿ ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜ್, ಲೋಹಿಯಾ ಪ್ರತಿಷ್ಠಾನ, ಕ್ಷೇಮ ಟ್ರಸ್ಟ್, ಐಕ್ಯೂಎಸಿ ಸಹಯೋಗದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಕುರಿತು ವಿಶೇಷ ಉಪನ್ಯಾಸವನ್ನು ಮನಃ ಶಾಸ್ತ್ರಜ್ಞ ಡಾ.ಸಿ.ಆರ್. ಚಂದ್ರಶೇಖರ್‌ ಉದ್ಘಾಟಿಸಿದರು.

Share this article