ವಂದೇ ಭಾರತ್‌ ಎಕ್ಸಪ್ರೆಸ್‌ ಯಾದಗಿರಿಯಲ್ಲಿ ನಿಲ್ಲೋಲ್ಲ!

KannadaprabhaNewsNetwork | Published : Mar 10, 2024 1:30 AM

ಸಾರಾಂಶ

ರೈಲ್ವೆ ಇಲಾಖೆಗೆ ಆದಾಯಕ್ಕಷ್ಟೇ ಯಾದಗಿರಿ ಬೇಕೇ?, ತಿರುಪತಿ ನಂತರ 2ನೇ ಹೆಚ್ಚು ಆದಾಯ ನೀಡುವ ಯಾದಗಿರಿ ನಿಲ್ದಾಣ, ವಂದೇ ಭಾರತ್‌ ರೈಲು ನಿಲುಗಡೆಗೆ ಆಗ್ರಹಿಸಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಇದೇ ಮಾ.12ರಿಂದ ಆರಂಭವಾಗಲಿರುವ, ಬಹು ನಿರೀಕ್ಷೆಯ ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್‌ ಎಕ್ಸಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫೆರೆನ್ಸ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.

ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ಸಂಭ್ರಮಿಸುವ ಮುನ್ನವೇ, ಕಲಬುರಗಿ-ಬೆಂಗಳೂರು ಮಧ್ಯೆ ಸಂಚರಿಸುವ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು (22231/22232) ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂಬ ಇಲಾಖೆ ಮಾಹಿತಿ ಇಲ್ಲಿನವರ ಕನಸು ನುಚ್ಚ ನೂರಾಗಿಸಿದೆ.

ವಾರದಲ್ಲಿ ಆರು ದಿನ, ನಸುಕಿನ 5.15ಕ್ಕೆ ಕಲಬುರಗಿಯಿಂದ ಹೊರಡುವ ರೈಲು, ವಾಡಿ, ರಾಯಚೂರು, ಮಂತ್ರಾಲಯಂ ರೋಡ್‌, ಗುಂತಕಲ್‌, ಅನಂತಪುರ, ಧರ್ಮಾವರಂ ಮಾರ್ಗವಾಗಿ ಮಧ್ಯಾಹ್ನ 12.47ಕ್ಕೆ ಯಲಹಂಕ ತಲುಪತ್ತದೆ. ಕೇವಲ 7 ಗಂಟೆಗಳ ಅವಧಿಯಲ್ಲಿ ರಾಜಧಾನಿ ಬೆಂಗಳೂರಿಗೆ ಇದು ಕಡಿಮೆ ಸಯಯದ ಅವಧಿಯಲ್ಲಿ ಸಂಚರಿಸುತ್ತದೆ.

ಆದರೆ, ಯಾದಗಿರಿ ರೈಲು ನಿಲ್ದಾಣದಲ್ಲಿ ಇದು ನಿಲ್ಲದಿರುವುದು ಇಲ್ಲಿನ ನಾಗರಿಕರ ಬೇಸರಕ್ಕೆ ಕಾರಣವಾಗಿದೆ. ಜಿಲ್ಲೆಯಾಗಿ 14 ವರ್ಷಗಳುರಿಳಿದರೂ ಇನ್ನೂ 8 ರಿಂದ10 ಪ್ರಮುಖ ರೈಲುಗಳು ಇಲ್ಲಿನ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಇದ್ದವುಗಳಲ್ಲೇ ಅತೀ ಹೆಚ್ಚಿನ ಆದಾಯ ನೀಡುವ ಯಾದಗಿರಿ ನಿಲ್ದಾಣಕ್ಕೆ ಪ್ರಮುಖ ರೈಲುಗಳು ನಿಲ್ಲದಿರುವುದು ನಿರಾಸೆ ಮೂಡಿಸಿದೆ.

ಯಾದಗಿರಿ ರೈಲ್ವೆ ನಿಲ್ದಾಣ ಗುಂತಕಲ್‌ ವಿಭಾಗದಲ್ಲಿ ತಿರುಪತಿ ನಂತರ ರೈಲ್ವೆ ಇಲಾಖೆಗೆ ಅತಿ ಹೆಚ್ಚಿನ ದಿನಂಪ್ರತಿ ಆದಾಯ ನೀಡುವ 2ನೇ ಸ್ಥಾನದಲ್ಲಿದೆ. ದಿನವೊಂದಕ್ಕೆ 60 ಲಕ್ಷ ರು.ಗಳ ಕೌಂಟರ್‌ ಇದೆ. ಇಲಾಖೆಗೆ ಈ ನಿಲ್ದಾಣ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ. ಆದರೆ, ರೈಲ್ವೆ ಸೌಲಭ್ಯಗಳ ಪಡೆಯುವಲ್ಲಿ ಮಾತ್ರ ಯಾದಗಿರಿಗರು ವಂಚಿತರಾಗಿದ್ದು ಸತ್ಯ ಎನ್ನುವ ಹಿರಿಯ ನ್ಯಾಯವಾದಿ ಹಾಗೂ ರೈಲ್ವೆ ಹೋರಾಟ ಸಮಿತಿ ಪ್ರಸನ್ನ ದೇಶಮುಖ, ಈ ಹಿಂದಿನಿಂದಲೂ ಹೋರಾಟ ಮಾಡಿಯೇ ರೈಲು ಸೌಲಭ್ಯ ಪಡೆಯುವ ದುಸ್ಥಿತಿ ನಮ್ಮದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಡಿಮೆ ಅವಧಿಯಲ್ಲಿ ತಲುಪುವ ಬೆಂಗಳೂರು-ನವದೆಹಲಿ ರಾಜಧಾನಿ ಎಕ್ಸಪ್ರೆಸ್‌, ಯಶವಂತಪುರ-ಅಹ್ಮದಾಬಾದ್‌, ಯಶವಂತಪುರ-ಗೋರಖಪುರ, ಯಶವಂತಪುರದಿಂದ ಉತ್ತರ ಭಾರತದ ಕಡೆಗೆ ಬಹುತೇಕ ಪ್ರಮುಖ ರೈಲುಗಳು ಇಲ್ಲಿ ನಿಲ್ಲುವುದಿಲ್ಲ. ಕರ್ನಾಟಕ ಎಕ್ಸಪ್ರೆಸ್‌ (ಕೆಕೆ) ಹಾಗೂ ವಾರಣಾಸಿ ಕೊಟ್ಟಿದ್ದೇವೆಂದು ಬೆನ್ನು ಚಪ್ಪಿರಿಸಿಕೊಳ್ಳುವ ಜನಪ್ರತಿನಿಧಿಗಳು, ಸುವಿಧಾ-ಡೊರಾಂಟೋ ರೈಲುಗಳ ಬಗ್ಗೆ ಆಸಕ್ತಿ ತೋರಬೇಕಿದೆ.

ಕಳೆದ 10 ವರ್ಷಗಳಿಂದ ಅನುದಾನ ಕೊರತೆಯಿಂದಾಗಿ ಇಲ್ಲಿನ ಕಡೇಚೂರು ರೈಲ್ವೆ ಕೋಚ್‌ ಫ್ಯಾಕ್ಟರಿ ಪ್ರಾಗೈತಿಹಾಸಿಕ ಪಳಯುಳಿಕೆಯಂತಾಗಿದ್ದರೆ, ರಾಜ್ಯದಲ್ಲೇ ಅತ್ಯಂತ ಹಳೆಯದಾಗಿದ್ದ ಯಾದಗಿರಿ-ಆಲಮಟ್ಟಿ ರೈಲು ಮಾರ್ಗಕ್ಕೆ ಈಗಾಗಲೇ ಎಳ್ಳು ನೀರು ಬಿಟ್ಟಾಗಿದೆ. ರೈಲು ಸೌಲಭ್ಯ ಪಡೆಯಬೇಕೆಂದರೆ ಹೋರಾಟಗಳೇ ಅನಿವಾರ್ಯ ಅನ್ನೋ ವಾತಾವರಣ ಸೃಷ್ಟಿಯಾಗಿದೆ. ಈ ಹಿಂದೆಯೂ ಕೂಡ ಉದ್ಯಾನ್‌ ಹಾಗೂ ಗರೀಬ್‌ ರಥ್‌ ರೈಲುಗಳ ನಿಲುಗಡೆಗೆ ಹೋರಾಟಗಳೇ ದಾರಿದೀಪವಾಗಿದ್ದವು.

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯುಳಿದಿವೆ ಎನ್ನುವಾಗಲೇ, ರೈಲು ಬಿಟ್ಟ ಸಾಧನೆ ಬಗ್ಗೆ ಘಂಟಾಘೋಷ ಪ್ರಚಾರಕ್ಕಿಳಿದಿರುವ ಸಂಸದರುಗಳು ಯಾದಗಿರಿ ಬಗ್ಗೆ ಚಕಾರವೆತ್ತದಿರುವುದು ವಿಪರ್ಯಾಸ. ಕಲಬುರಗಿ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಯಾದಗಿರಿ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳು ಬರುತ್ತದೆ.

ವೋಟು ಬೇಕಾದಾಗ ಯಾದಗಿರಿಗರ ಬಳಿ ಬರುವ ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿಯೆತ್ತಬೇಕು ಎಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭೀಮುನಾಯಕ್, ಯಾದಗಿರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ಎಕ್ಸಪ್ರೆಸ್‌ ನಿಲುಗಡೆ ವಿಚಾರವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

ದೇಶದ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆಂದು, ಅಮೃತ ಭಾರತ ಸ್ಟೇಷನ್ ಯೋಜನೆಯಡಿ ₹7.7 ಕೋಟಿ ವೆಚ್ಚದಲ್ಲಿ ಉನ್ನತೀಕರಣಕ್ಕೆ ಯಾದಗಿರಿ ರೈಲು ನಿಲ್ದಾಣ ಆಯ್ಕೆಯಾಗಿದೆ. ಇಷ್ಟೊಂದು ಮಹತ್ವದ ನಿಲ್ದಾಣಕ್ಕೆ ರೈಲುಗಳ ಸೌಲಭ್ಯವೇ ಇಲ್ಲವೆಂದರೆ ಹೇಗೆ ಅನ್ನೋದು ಜನರ ಪ್ರಶ್ನೆ.

ಕಾಚೀಗುಡಾ-ಬೆಂಗಳೂರು ವಂದೇ ಭಾರತ್ ಸಹ ಇಲ್ಲಿ ನಿಲುಗಡೆಯಿಲ್ಲ ಎನ್ನಲಾಗುತ್ತಿದೆ. ಕರ್ನಾಟಕಕ್ಕೆ ರೈಲು ಸೌಲಭ್ಯ ಕೊಟ್ಟಿದ್ದೇವೆ ಅಂತ್ಹೇಳುತ್ತಾರೆಯೇ ಹೊರತು, ಆಂಧ್ರ-ತೆಲಂಗಾಣದಲ್ಲೇ ಹೆಚ್ಚು ನಿಲ್ಲುತ್ತವೆ.

ಪ್ರಸನ್ನ ದೇಶಮುಖ, ಹಿರಿಯ ನ್ಯಾಯವಾದಿಗಳು ಹಾಗೂ ರೈಲ್ವೆ ಸಮಿತಿ ಹೋರಾಟಗಾರರು, ಯಾದಗಿರಿ.

ಯಾದಗಿರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ಎಕ್ಸಪ್ರೆಸ್‌ ನಿಲುಗಡೆ ವಿಚಾರವಾಗಿ ಅಂದು ರೈಲು ನಿಲ್ದಾಣ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು. ಸಂಸದರುಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸಬೇಕು. ರೈಲ್ವೆ ಇಲಾಖೆಯಿಂದ ನಮ್ಮ ಯಾದಗಿರಿಗೆ ದೊಡ್ಡ ಅನ್ಯಾಯವಾಗುತ್ತಿದೆ.

ಭೀಮು ನಾಯಕ್‌, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು, ಯಾದಗಿರಿ.

Share this article