ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ದಾಳಿ: 4 ಕಬ್ಬಿಣದ ತೆಪ್ಪ, ಮರಳು ವಶ

KannadaprabhaNewsNetwork |  
Published : Oct 12, 2025, 01:01 AM IST
ಚಿತ್ರ11ಜಿಟಿಎಲ್ಗುತ್ತಲ ಸಮೀಪದ ಮೇವುಂಡಿ ಗ್ರಾಮದ ಬಳಿಯ ತುಂಗಭದ್ರ ನದಿಯ ದಡದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಯ ಮೇಲೆ ಗಣಿ ಮತ್ತು ಭೂ ವಿಜ್ಙಾನ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಕಬ್ಬಿಣದ ತೆಪ್ಪ, ಮರಳನ್ನು ವಶ ಪಡಿಸಿಕೊಂಡಿದ್ದಾರೆ. | Kannada Prabha

ಸಾರಾಂಶ

ಸಮೀಪದ ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳ ತುಂಗಭದ್ರ ನದಿಯ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಮೇಲೆ ಗಣಿ ಮತ್ತು ವಿಜ್ಞಾನ ಹಾಗೂ ಪೊಲೀಸ್ ಅಧಿಕಾರಿಗಳು ಶನಿವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿ 4 ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.

ಗುತ್ತಲ: ಸಮೀಪದ ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳ ತುಂಗಭದ್ರ ನದಿಯ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಮೇಲೆ ಗಣಿ ಮತ್ತು ವಿಜ್ಞಾನ ಹಾಗೂ ಪೊಲೀಸ್ ಅಧಿಕಾರಿಗಳು ಶನಿವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿ 4 ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳು ಜೀಪಿನ ಮುಖಾಂತರ ನದಿ ದಡದ ಕಡೆಗೆ ಹೋಗುತ್ತಿದ್ದಂತೆ ನದಿಯಲ್ಲಿ ಅಕ್ರಮ ಮರಳು ತೆಗೆಯುವ ಕಾರ್ಮಿಕರು ಓಡಿ ಹೋಗಿದ್ದಾರೆ. ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ 4 ಕಬ್ಬಿಣದ ತೆಪ್ಪಗಳನ್ನು ಟ್ರ್ಯಾಕ್ಟರ್ ಸಹಾಯದಿಂದ ನದಿಯಿಂದ ಹೊರ ತೆಗೆಯಲಾಗಿದೆ. ಅಂದಾಜು 2 ಲಕ್ಷ 40 ಸಾವಿರ ಮೊತ್ತದ ತೆಪ್ಪಗಳು ಹಾಗೂ ಅಂದಾಜು 93 ಸಾವಿರ ಮೊತ್ತದ 110 ಮೆಟ್ರಿಕ್ ಟನ್‌ನಷ್ಟು ಮರಳು ವಶಪಡಿಸಿಕೊಂಡಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನವೀನ ಪಿ.ಎಸ್. ಅವರ ನೇತೃತ್ವದಲ್ಲಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಮೇವುಂಡಿ, ತೇರದಹಳ್ಳಿ ಗ್ರಾಮಗಳಲ್ಲಿ ಹಗಲು-ರಾತ್ರಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಖಚಿತ ಮಾಹಿತಿ ಆಧಾರದ ಮೇಲೆ ದಿಢೀರ್ ದಾಳಿ ಮಾಡಲಾಗಿದ್ದು, ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಪುಟ್ಟಪ್ಪ ಕಾರಿ ಎಂಬುವರ ಮೇಲೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲದೇ ಅಕ್ರಮ ಮರಳು ದಂಧೆಗೆ ರಸ್ತೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ಭೂ ವಿಜ್ಞಾನಿ ಶಬ್ಬಿರಅಹ್ಮದ ದಿಡಗೂರ “ಕನ್ನಡಪ್ರಭ ಪತ್ರಿಕೆ” ಗೆ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ಬಸವರಾಜ ಬಿರಾದಾರ, ಖನಿಜ ರಕ್ಷಣಾ ಪಡೆಯ ಶಿವಪ್ಪ ಸಣ್ಣಬಸಪ್ಪನವರ, ಪೊಲೀಸ್ ಪೇದೆಗಳಾದ ಕರಿಯಪ್ಪ ಬೆಂಚಳ್ಳಿ, ಸುರೇಂದ್ರ ಸವದಿ, ಗುಡ್ಡಪ್ಪ ಬಳ್ಳಾರಿ ಇದ್ದರು.

ಅಕ್ರಮ ಮರಳು ದಂಧೆಯಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ಹಾನಿಯಾಗುತ್ತಿದ್ದು, ಈ ಬಗ್ಗೆ ನದಿ ಪಾತ್ರದ ಜನರಿಗೆ ಮರಳು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದೇವೆ. ಅಲ್ಲದೇ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿ ಅವರಿಗೆ ಊಟ, ವಸತಿ ಅವಕಾಶ ಕಲ್ಪಿಸಿರುವುದು ಕಾನೂನು ಬಾಹಿರವಾಗಿದ್ದು, ಕೆಲ ಜೋಪಡಿಗಳಲ್ಲಿ ಕಾರ್ಮಿಕರು ಕಂಡು ಬಂದಿದ್ದು, ಅವರ ಗ್ಯಾಸ್, ಓಲೆ, ಪಾತ್ರೆಗಳನ್ನು ವಶಪಡಿಸಿಕೊಂಡು ತಕ್ಷಣವೇ ತಮ್ಮ ರಾಜ್ಯಗಳಿಗೆ ಹೋಗುವಂತೆ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ದಿನದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹಾವೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ನವೀನ ಪಿ.ಎಸ್.ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಏಕತಾ ಮಹಲ್‌’ ಬಗ್ಗೆ ಯದುವೀರ್‌, ಪ್ರಮೋದಾದೇವಿ ವೈರುಧ್ಯದ ನಡೆ
ವಿಷ್ಣು ಆಚಾರಿ ಸೇರಿ ಹಲವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ