ಸಂಡೂರು: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗುರುವಾರ ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕ ಸಂಘದಿಂದ ಗಣಿ ಕಾರ್ಮಿಕರ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಗಣಿ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಗುತ್ತಿಗೆದಾರರು ಬದಲಾದರೂ ಈಗಿರುವ ಗಣಿ ಕಾರ್ಮಿಕರು ಕೆಲಸದಲ್ಲಿ ಮುಂದುವರೆಯಬೇಕು. ಖಾಯಂ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಗಣಿ ಕಾರ್ಮಿಕರಿಗೆ ಎಲ್ಲ ಕಾನೂನು ಬದ್ಧ ಸೌಲಭ್ಯ ಖಾತ್ರಿ ಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಯಿತು. ಸಮ್ಮೇಳನದ ಅಂಗವಾಗಿ ಗಣಿ ಕಾರ್ಮಿಕರಿಂದ ಪಟ್ಟಣದ ಎಪಿಎಂಸಿಯಿಂದ ಅಂಬೇಡ್ಕರ್ ಭವನದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಸಂಯುಕ್ತ ಗಣಿ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ಗಣಿ ಕಾರ್ಮಿಕರು ತಮ್ಮ ದುಡಿಮೆಯಿಂದ ಸಂಪತ್ತನ್ನು ಸೃಷ್ಟಿಸುತ್ತಾರೆ. ಇದರಿಂದ ಸರ್ಕಾರಕ್ಕೆ, ಗಣಿ ಮಾಲೀಕರಿಗೆ ಕೋಟ್ಯಂತರ ಲಾಭವಿದೆ. ಆದರೆ, ಕಾರ್ಮಿಕರ ಪರಿಸ್ಥಿತಿ ಅತ್ಯಂತ ಘೋರವಾಗಿದೆ. ಎನ್‌ಎಂಡಿಸಿ ಕೇಂದ್ರ ಸ್ವಾಮ್ಯದ ಸಂಸ್ಥೆಯಾಗಿದ್ದರೂ ಗುತ್ತಿಗೆ-ಹೊರಗುತ್ತಿಗೆ ಹೆಸರಲ್ಲಿ ಕಾರ್ಮಿಕರ ಶೋಷಣೆ ನಡೆಸಲಾಗುತ್ತಿದೆ. ಗುತ್ತಿಗೆದಾರರ ಟೆಂಡರ್ ಮುಗಿದ ನಂತರ ಗುತ್ತಿಗೆ ಕಾರ್ಮಿಕರ ಸ್ಥಿತಿ ಅತಂತ್ರವಾಗುತ್ತದೆ. ಎನ್‌ಎಂಡಿಸಿ ಸಂಸ್ಥೆಗಾಗಿ ಭೂಮಿ ಕಳೆದುಕೊಂಡ, ಆರೋಗ್ಯ ಹದಗೆಡಿಸಿಕೊಂಡ ಕುಟುಂಬಗಳಿಗೆ ಖಾಯಂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದರು.ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕಿದೆ. ಆದರೆ ಅಧಿಕಾರದಲ್ಲಿರುವ ಯಾವುದೇ ಸರ್ಕಾರ ಕಾರ್ಮಿಕರ ಹಿತಾಸಕ್ತಿ ಬದಿಗಿಟ್ಟು, ಬಂಡವಾಳ ಶಾಹಿಗಳ ಹಿತಾಸಕ್ತಿ ಕಾಪಾಡುತ್ತಿದೆ. ಕಾರ್ಮಿಕರ ಹಕ್ಕನ್ನು ದಮನ ಮಾಡುವ ಲೇಬರ್ ಕೋಡ್ ಜಾರಿಗೊಳಿಸಲು ಕೇಂದ್ರ ಸರ್ಕಾರ ಹೊರಟಿದೆ. ಇಂತಹ ಪರಿಸ್ಥಿತಿಯಲ್ಲಿ ಗಣಿ ಕಾರ್ಮಿಕರು ಸಂಘಟಿತರಾಗಬೇಕು. ಹೋರಾಟವನ್ನು ರೂಪಿಸಬೇಕು ಎಂದರು.
ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಮಾತನಾಡಿ, ಕಾರ್ಮಿಕರ ಒಗ್ಗಟ್ಟನ್ನು ಮುರಿಯಲು ಮಾಲೀಕರಾಗಲಿ, ಸರ್ಕಾರವಾಗಲಿ ಅನೇಕ ತಂತ್ರಗಳನ್ನು ಹೂಡುತ್ತವೆ. ಜಾತಿ, ಧರ್ಮ, ಭಾಷೆ ಮುಂತಾದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ, ಕಾರ್ಮಿಕ ಹೋರಾಟವನ್ನು ದಾರಿ ತಪ್ಪಿಸಲು ಯತ್ನಿಸುತ್ತವೆ. ಈ ಎಲ್ಲ ಕೊಳಕು ವಿಚಾರಗಳನ್ನು ಸೋಲಿಸಿ, ತಮ್ಮ ಐಕ್ಯತೆಯನ್ನು ಬಲಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿದರು. ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯದರ್ಶಿ ಸೋಮಶೇಖರ್‌ಗೌಡ ಪ್ರಾಸ್ತಾವಿಕವಾಗಿ ಮತನಾಡಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಸಂಯುಕ್ತ ಗಣಿ ಕಾರ್ಮಿಕ ಸಂಘದ ಉಪಾಧ್ಯಕ್ಷ ಎ.ದೇವದಾಸ್ ವಹಿಸಿದ್ದರು.
ಮುಖಂಡರಾದ ಹುಲಿಗೇಶ್, ಬಾಬು, ಸಂತೋಷ್, ಅಂಬರೀಶ್, ಮಂಜುನಾಥ್, ಕೊಟ್ರೇಶ್ ಮುಂತಾದವರು ಉಪಸ್ಥಿತರಿದ್ದರು.ನೂತನ ಸಮಿತಿ ರಚನೆ:
ಸಮ್ಮೇಳನದ ಕೊನೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಕೆ.ಸೋಮಶೇಖರ್, ಕಾರ್ಯಾಧ್ಯಕ್ಷರಾಗಿ ಎ. ದೇವದಾಸ್, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪ್ರಮೋದ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.