ಖನಿಜ ಶೋಧನೆಯು ದೇಶದ ಆರ್ಥಿಕ ಭದ್ರತೆಯ ಬೆನ್ನೆಲುಬು: ಡಾ.ಬಲಬೀರ್ ಸಿಂಗ್

KannadaprabhaNewsNetwork |  
Published : Apr 16, 2026, 02:00 AM IST
ಸಂಡೂರು ತಾಲ್ಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಕೇಂದ್ರದ ಹಳೆಯ ವಿದ್ಯಾರ್ಥಿಗಳು ಆರಂಭಿಸಿರುವ ಶೈಕ್ಷಣಿಕ ನೆರವು ಅಭಿಯಾನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಸ್ನಾತಕೋತ್ತರ ಕೇಂದ್ರದಂತಹ ಶೈಕ್ಷಣಿಕ ಕೇಂದ್ರಗಳು ಈ ನಿಟ್ಟಿನಲ್ಲಿ ರಾಷ್ಟ್ರಕ್ಕೆ ಉತ್ತಮ ತಜ್ಞರನ್ನು ನೀಡುತ್ತಿರುವುದು ಶ್ಲಾಘನೀಯ

ಸಂಡೂರು: ಖನಿಜ ಶೋಧನೆಯು ದೇಶದ ಆರ್ಥಿಕ ಭದ್ರತೆಯ ಬೆನ್ನೆಲುಬು. ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಂತಹ ಶೈಕ್ಷಣಿಕ ಕೇಂದ್ರಗಳು ಈ ನಿಟ್ಟಿನಲ್ಲಿ ರಾಷ್ಟ್ರಕ್ಕೆ ಉತ್ತಮ ತಜ್ಞರನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ರಾಷ್ಟ್ರೀಯ ಪರಮಾಣು ಖನಿಜ ನಿರ್ದೇಶನಾಲಯದ ಮಾಜಿ ಪ್ರಾದೇಶಿಕ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಡಾ. ಬಲಬೀರ್ ಸಿಂಗ್ ಅಭಿಪ್ರಾಯಪಟ್ಟರು.

ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಶೈಕ್ಷಣಿಕ ನೆರವು ಅಭಿಯಾನ (ಜ್ಞಾನ ಯಜ್ಞ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ರಾಷ್ಟ್ರದ ಸಾಮರ್ಥ್ಯ ಹೆಚ್ಚಿಸುವ ಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಅನುಭವದ ಪಾಠ:

ಟಾಟಾ ಸ್ಟೀಲ್ ಸಂಸ್ಥೆಯ ನಿವೃತ್ತ ಮುಖ್ಯ ಭೂವಿಜ್ಞಾನಿ ಹಾಗೂ ೧೯೮೦ರ ದಶಕದಲ್ಲಿ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡಿದ್ದ ಹಳೆಯ ವಿದ್ಯಾರ್ಥಿ ನೆಡುನೂರಿ ವೆಂಕಟ ಸಾಯಿರಾಮ್ ವಿದ್ಯಾರ್ಥಿಗಳಿಗೆ ಬೋಧಿಸಿ, ನಾಲ್ಕು ದಶಕಗಳ ನಂತರ ನಾನು ಕಲಿತ ಕಾಲೇಜಿಗೆ ಮರಳಿ ಬಂದು ಬೋಧನೆಯಲ್ಲಿ ತೊಡಗಿರುವುದು ಬದುಕಿನ ಸಾರ್ಥಕ ಕ್ಷಣ. ನಾಲ್ಕು ದಶಕಗಳ ನನ್ನ ವೃತ್ತಿ ಜೀವನಕ್ಕೆ ಬುನಾದಿ ಹಾಕಿದ್ದು ಇದೇ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರ. ಇಲ್ಲಿನ ಶಿಸ್ತು ಮತ್ತು ಕಲಿಕೆ ನನ್ನ ವೃತ್ತಿ ಜೀವನವನ್ನು ರೂಪಿಸಿದೆ ಎಂದು ಭಾವುಕರಾಗಿ ನುಡಿದರು.

ಸೇತುವೆಯಾದ ಹಳೆ ವಿದ್ಯಾರ್ಥಿಗಳ ಸಂಘ: ಕಾರ್ಯಕ್ರಮದ ಸಂಯೋಜಕರಾದ ಡಾ.ಎಸ್.ಎಂ. ಶಿಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಅನುಭವವನ್ನು ನೇರವಾಗಿ ತರಗತಿಗಳಿಗೆ ತಲುಪಿಸುವ ಮೂಲಕ ನಂದಿಹಳ್ಳಿಯನ್ನು ಜಾಗತಿಕ ಮಟ್ಟದ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸುವುದು ನಂದಿಹಳ್ಳಿ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ದೇಶವಾಗಿದೆ. ತಜ್ಞರಾದ ಡಾ.ಬಲಬೀರ್ ಸಿಂಗ್ ಬಿಷ್ಠ್ ಹಾಗೂ ನೆಡುನೂರಿ ವೆಂಕಟ ಸಾಯಿರಾಮ್ ಅವರು ಕೆಲದಿನ ಕೇಂದ್ರದಲ್ಲಿನ ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಸ್ನಾತಕೋತ್ತರ ಕೇಂದ್ರದ ಖನಿಜ ಸಂಸ್ಕರಣಾ ವಿಭಾಗದ ವಿಭಾಗೀಯ ಮುಖ್ಯಸ್ಥರಾದ ಡಾ. ಶರತ್‌ಕುಮಾರ್ ಸ್ವಾಗತಿಸಿದರು. ಭೂವಿಜ್ಞಾನ ವಿಭಾಗದ ಡಾ. ಬಸವರಾಜ ಹಟ್ಟಿ ವಂದಿಸಿದರು. ನಂದಿಹಳ್ಳಿ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಶಶಿಧರ ಮಂದಾಲ್, ಹಳೆಯ ವಿದ್ಯಾರ್ಥಿಗಳಾದ ಗಂಗಾಧರ ದರೋಜಿಮಠ, ಪಂಪಾಪತಿ, ರಂಜಾನ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಂಬಾಚಾರಕ್ಕೆ ಮತ್ತೊಂದು ಹೆಸರೇ ವಚನಾನಂದ ಸ್ವಾಮೀಜಿ: ಮಹೇಶ ಹಾವೇರಿ
ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ