ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಸಂಘ- ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಚಿವರು, ಬಳಿಕ ತಮ್ಮ ಗೃಹ ಕಚೇರಿ ಹಾಗೂ ನಗರದ ಹಳೆಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಅಹವಾಲುಗಳನ್ನು ಸ್ವೀಕರಿಸಿದರು.
ಪೌತಿ ಖಾತೆ, ಇ-ಸ್ವತ್ತು, ಪಹಣಿಯಲ್ಲಿ ತಪ್ಪಾಗಿ ಹೆಸರು ಸೇರ್ಪಡೆ, ನಿವೇಶನ, ರಸ್ತೆ ಹಾಗೂ ದೇವಸ್ಥಾನ ನಿರ್ಮಾಣ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೊತ್ತು ಜನರು ಸಚಿವರನ್ನು ಭೇಟಿ ಮಾಡಿದರು. ಪ್ರತಿ ಅಹವಾಲಗಳನ್ನು ಸಮಾಧಾನದಿಂದ ಆಲಿಸಿದ ಸಚಿವರು, ಸಮಸ್ಯೆಗಳ ಸ್ವರೂಪವನ್ನು ಅಧಿಕಾರಿಗಳ ಗಮನಕ್ಕೆ ತಂದು ತ್ವರಿತ ಪರಿಹಾರಕ್ಕೆ ಸೂಚಿಸಿದರು.ಕೆಲವು ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸ್ಥಳದಲ್ಲಿಯೇ ಸಂಪರ್ಕಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ನಿರ್ದೇಶನ ನೀಡಿದರು. ತಕ್ಷಣ ಪರಿಹರಿಸಲು ಸಾಧ್ಯವಾಗದ ಪ್ರಕರಣಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದಿಷ್ಟ ಗಡುವು ನೀಡಿ, ನಿಗದಿತ ಅವಧಿಯಲ್ಲಿ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದರು.
ಅಹವಾಲು, ಪರಿಹಾರದ ಹೊಣೆಗಾರಿಕೆ: ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಕಳುಹಿಸುವುದಕ್ಕಿಂತ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಚರ್ಚಿಸಿ ಪರಿಹಾರದ ದಿಕ್ಕಿನಲ್ಲಿ ಕ್ರಮ ಕೈಗೊಳ್ಳುವ ಮೂಲಕ ಸಚಿವ ಕೆ.ಎಸ್.ಬಸವಂತಪ್ಪ ಅವರು ವಿಭಿನ್ನ ರೀತಿಯ ಜನಸ್ಪಂದನಾ ಕಾರ್ಯಕ್ಕೆ ಒತ್ತು ನೀಡಿದರು. ಇದರಿಂದ ಸಚಿವರನ್ನು ಭೇಟಿ ಮಾಡಲು ಆಗಮಿಸಿದ್ದ ಸಾರ್ವಜನಿಕರಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ವಿಶ್ವಾಸ ಮೂಡಿತು. ವಿವಿಧ ಸಂಘಟನೆ ಮುಖಂಡರು, ಸಾರ್ವಜನಿಕರು ಇತರರು ಇದ್ದರು.