ಕನ್ನಡಪ್ರಭ ವಾರ್ತೆ ಬೆಂಗಳೂರು
ಸಚಿವ ಬಸವರಾಜ ರಾಯರಡ್ಡಿ ಅವರು ಸತತ 2ನೇ ದಿನವೂ ಗದಗ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆಹಾನಿಯನ್ನು ಅವಲೋಕಿಸಿ, ರೈತರಿಂದಲೇ ನೇರವಾಗಿ ಮಾಹಿತಿ ಪಡೆದರು.
ಶನಿವಾರ ಬೆಳಗ್ಗೆ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಬರ ಪರಿಸ್ಥಿತಿ ಕುರಿತು ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಧ್ಯಾಹ್ನದ ನಂತರ ಜಿಲ್ಲೆಯ ರೋಣ ಮತ್ತು ಗಜೇಂದ್ರಗಡ ತಾಲೂಕು ವ್ಯಾಪ್ತಿಯಲ್ಲಿ ಬರ ಪರಿಶೀಲನೆ ನಡೆಸಿದರು. ಬಳಿಕ, ರೈತರೊಂದಿಗೆ ಸಂವಾದ ನಡೆಸಿ, ಪ್ರಸಕ್ತ ಬರ ಪರಿಸ್ಥಿತಿ, ಬೆಳೆ ಹಾನಿ, ಮಳೆಯ ಪ್ರಮಾಣ ಹಾಗೂ ಕೃಷಿ ಚಟುವಟಿಕೆಗಳ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆದುಕೊಂಡರು.ಸಚಿವ ಯತೀಂದ್ರ ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಹೊಸಕೋಟೆ, ಮಳಲಿ, ಕಂಚುಗಾರ ಕೊಪ್ಪಲು, ಸಿದ್ದಾಪುರ ಗ್ರಾಮಗಳಿಗೆ ಭೇಟಿ ನೀಡಿ, ಬರ ಪರಿಶೀಲನೆ ನಡೆಸಿದರು. ಒಣಗಿದ ಬೆಳೆ ಹಾಗೂ ನೀರಿಲ್ಲದೆ ಅರ್ಧ ಬಂದ ಬೆಳೆಗಳನ್ನು ಕಂಡು, ಇದಕ್ಕೆ ಸೂಕ್ತ ಪರಿಹಾರ ಸೂಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಚಿವ ಡಾ.ಅಜಯ್ ಧರ್ಮ ಸಿಂಗ್ ಅವರು ಸತತ 2ನೇ ದಿನವೂ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬರ ಪರಿಸ್ಥಿತಿಯ ಅವಲೋಕನ ನಡೆಸಿ, ರೈತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.