ಮಳೆ ಕೊರತೆ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಅಧಿಕಾರಿಗಳಿಗೆ ಸಚಿವರ ತಾಕೀತು

KannadaprabhaNewsNetwork |  
Published : Jul 14, 2026, 01:15 AM IST
13ಕೆಆರ್ ಎಂಎನ್ 3.ಜೆಪಿಜಿರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ರಾಮಲಿಂಗಾರೆಡ್ಡಿರವರ  ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣೆ ವಿಷಯಗಳ ಕುರಿತು ಸಭೆ ನಡೆಯಿತು. | Kannada Prabha

ಸಾರಾಂಶ

ಕೆಲವೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಲ್ಲ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಳಿತಾಧಿಕಾರಿಗಳು, ಕುಡಿಯುವ ನೀರಿಗೆ ಸಂಪೂರ್ಣ ಆದ್ಯತೆ ನೀಡಿ ಸಮಸ್ಯೆ ನಿಭಾಯಿಸಬೇಕು. ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಮೋದನೆ ಪಡೆದುಕೊಳ್ಳಬೇಕು. ಜಲ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಒಟ್ಟಾರೆ ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ಪ್ರಸಕ್ತ ಮುಂಗಾರಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು, ಜಾನುವಾರುಗಳ ಮೇವು ಪೂರೈಕೆ, ಅಲ್ಪಕಾಲಿನ ಬೆಳೆ ಬೆಳೆಯಲು, ರೈತರು ಬೆಳೆ ವಿಮೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲು ಸಂಬಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಜ್ಜಾಗಬೇಕೆಂದು ಜಲ ಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ವಿಷಯಗಳ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆಯಲ್ಲಿ ಶೇ. 13ರಷ್ಟು ಕೊರತೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಇನ್ನಷ್ಟು ಎದುರಾಗುವ ಸಾಧ್ಯತೆಗಳೂ ಇರಬಹುದು. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಾಧಿಸಬಹುದು, ಕುಡಿಯುವ ನೀರಿಗೆ ಹಾಹಾಕಾರವಾಗದಂತೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತಾ ಹಾಗೂ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯು ಹಾಲಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಮಳೆ ಕೊರತೆಯಿಂದ ಕೃಷಿಯಲ್ಲಿ ಹಿನ್ನೆಡೆಯಾಗಲಿದೆ. ಮೇವಿನ ಕೊರತೆ ಕಂಡುಬರಲಿದೆ. ಕೃಷಿಯಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಲ್ಲಿ ಅರಿವು ಮೂಡಿಸಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಪೂರೈಸಬೇಕು.

ಮೇವು ಬೆಳೆಗಳನ್ನು ಬೆಳೆಯಬೇಕು. ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ರೈತರಲ್ಲಿ ಅರವು ಮೂಡಿಸಬೇಕು. ಜಾನುವಾರುಗಳ ಕುಡಿಯುವ ನೀರು ಮೇವು ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಕೃಷಿ ಹಾಗೂ ಪಶು ಸಂಗೋಪನಾ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಮಳೆ ಅಭಾವದಿಂದ ವನ್ಯ ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ದಾಳಿ ಮಾಡುವ ಸಂಭವವಿರುತ್ತದೆ. ಮಾನವ-ಪ್ರಾ ಣಿ ಸಂಘರ್ಷದಿಂದ ಪ್ರಾಣ ಹಾನಿಯಾಗದಂತೆ ತಡೆಯಲು ಅರಣ್ಯ ಇಲಾಖೆ ಅಧಿದಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದರು.

ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಕಂಡುಬರದೇ ಕೃಷಿ ಕಾರ್ಮಿಕರು ವಲಸೆ ಹೋಗುವ ಸಂಭವವಿರುತ್ತದೆ. ಅದಕ್ಕಾಗಿ ವಿಜಿ ರಾಮ್ ಜಿ ಯೋಜನೆಯಡಿ ರೈತರಿಗೆ ಕೆಲಸ ನೀಡಬೇಕು. ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ. ಮಂಜುನಾಥ್ ಮಾತನಾಡಿ, ಪ್ರಸ್ತುತ ಜಿಲ್ಲೆಯ 38 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಖಾಸಗಿ ಬೋರ್‌ವೆಲ್ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಲಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪ್ರತಿ ವಾರ ಮೇಲ್ವಿಚಾರಣೆ ನಡೆಸಬೇಕು ಎಂದು ಹೇಳಿದರು.

ಕೆಲವೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಲ್ಲ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಆಡಳಿತಾಧಿಕಾರಿಗಳು, ಕುಡಿಯುವ ನೀರಿಗೆ ಸಂಪೂರ್ಣ ಆದ್ಯತೆ ನೀಡಿ ಸಮಸ್ಯೆ ನಿಭಾಯಿಸಬೇಕು. ಕ್ರಿಯಾ ಯೋಜನೆ ಸಿದ್ದಪಡಿಸಿ ಅನುಮೋದನೆ ಪಡೆದುಕೊಳ್ಳಬೇಕು. ಜಲ ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಒಟ್ಟಾರೆ ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಸಿಎಸ್‌ಆರ್ ಅನುದಾನದಡಿ 96 ಶುದ್ದ ನೀರಿನ ಘಟಕಗಳನ್ನು ನಿರ್ಮಿಸಲಾಗಿದ್ದು, ಸಮರ್ಪಕ ನಿರ್ವಹಣೆಗೆ ಸಿಎಸ್‌ಆರ್ ಅನುದಾನ ಬಳಸಿಕೊಳ್ಳುವಂತೆ ಮಂಜುನಾಥ್ ತಿಳಿಸಿದರು.

ಸಭೆಯಲ್ಲಿ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಧನರಾಜ್, ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರಾದ ಗುರುಮೂರ್ತಿ , ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಗೆಮಡು ಗಂಗಾಧರೇಶ್ವರ ಕ್ಷೇತ್ರದ ಅಭಿವೃದ್ಧಿಗೆ ವೇಗ
ಅರಸೀಕೆರೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ