ಐದೇ ವರ್ಷದಲ್ಲಿ ಯಾದಗಿರಿಯ 16116 ಗರ್ಭಗಳೇ ನಾಪತ್ತೆ!

Published : Jul 13, 2026, 05:58 AM IST
fetus

ಸಾರಾಂಶ

ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ, ಗರ್ಭಪಾತ ಹೆಚ್ಚಾಗಿ ನಡೆಯುತ್ತದೆ ಎಂಬ ದೂರುಗಳನ್ನು ಹೊತ್ತಿರುವ ಯಾದಗಿರಿ ಜಿಲ್ಲೆಯಲ್ಲಿ ದಿಗಿಲು ಹುಟ್ಟಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ 53,595 ಮಹಿಳೆಯರು ಗರ್ಭ ಧರಿಸಿರುವ ಕುರಿತು ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕೃತವಾಗಿ ನೋಂದಣಿ

 ಆನಂದ್‌ ಎಂ. ಸೌದಿ

 ಯಾದಗಿರಿ :  ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ, ಗರ್ಭಪಾತ ಹೆಚ್ಚಾಗಿ ನಡೆಯುತ್ತದೆ ಎಂಬ ದೂರುಗಳನ್ನು ಹೊತ್ತಿರುವ ಯಾದಗಿರಿ ಜಿಲ್ಲೆಯಲ್ಲಿ ದಿಗಿಲು ಹುಟ್ಟಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ 53,595 ಮಹಿಳೆಯರು ಗರ್ಭ ಧರಿಸಿರುವ ಕುರಿತು ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕೃತವಾಗಿ ನೋಂದಣಿಯಾಗಿದೆ. ಈ ಪೈಕಿ 35424 ಮಂದಿಗೆ ಹೆರಿಗೆಯೂ ಆಗಿದೆ. 2055 ಪ್ರಕರಣಗಳಲ್ಲಿ ಗರ್ಭಪಾತವಾಗಿದೆ. ಆದರೆ ಉಳಿದ 16,116 ಗರ್ಭಗಳ (ಶೇ.30) ಬಗ್ಗೆ ಮಾಹಿತಿಯೇ ಇಲ್ಲ!

ಆ ಗರ್ಭಗಳನ್ನು ಧರಿಸಿದ್ದ ಮಹಿಳೆಯರಿಗೆ ಹೆರಿಗೆಯಾಯಿತೆ? ಅವರಿಗೆ ಬೇರೆ ಏನಾದರೂ ಆಯಿತೆ? ಗರ್ಭಪಾತವಾಯಿತೆ? ಆ ಗರ್ಭಪಾತ ಸ್ವಾಭಾವಿಕವೋ? ಅಥವಾ ಬಲವಂತದ್ದೋ? ಯಾವುದಕ್ಕೂ ಉತ್ತರವೇ ಸಿಗುತ್ತಿಲ್ಲ. ಸರ್ಕಾರದ ತನಿಖಾ ವರದಿಯ ಪ್ರಕಾರ, ಈ ನಾಪತ್ತೆಯಾಗಿರುವ ಗರ್ಭಗಳಲ್ಲಿ ಬಹುತೇಕವು ಭ್ರೂಣ ಹತ್ಯೆ ಪಿಡುಗಿಗೆ ಬಲಿಯಾಗಿವೆ. ಈ ಅಮಾನವೀಯ ಕೆಲಸದಿಂದಾಗಿ ಯಾದಗಿರಿಯ ಲಿಂಗಾನುಪಾತ ಪ್ರಪಾತಕ್ಕೆ ಕುಸಿದಿದೆ!

ಯಾದಗಿರಿ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಗರ್ಭಗಳ ನಾಪತ್ತೆ ಹಾಗೂ ಗಂಡು ಸಂತಾನ ಹಂಬಲಿಸಿ ಅಕ್ರಮವಾಗಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ಕುರಿತು ‘ಕನ್ನಡಪ್ರಭ’ ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ವಿಶೇಷ ಸರಣಿ ವರದಿ ಪ್ರಕಟಿಸಿತ್ತು. ಈ ವರದಿಗಳು ಸಂಚಲನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅಂದಿನ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ವಿಶೇಷ ಸಭೆ ನಡೆಸಿದ್ದರು. ಆರೋಗ್ಯ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ, ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಅವರ ಸೂಚನೆ ಮೇರೆಗೆ ರಾಜ್ಯಮಟ್ಟದ ಬಹುಶಿಸ್ತೀಯ ಸಮಿತಿಯನ್ನು ರಚನೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿ 5 ದಿನ ಯಾದಗಿರಿಗೆ ಭೇಟಿ ನೀಡಿ ತನಿಖೆ ನಡೆಸಿದ್ದ ಸಮಿತಿಯು ಇದೀಗ ಸರ್ಕಾರಕ್ಕೆ ತನ್ನ ವರದಿ ನೀಡಿದ್ದು, ಈ ವರದಿಯಲ್ಲಿ 16116 ಗರ್ಭಗಳ ಬಗ್ಗೆ ಮಾಹಿತಿ ಇಲ್ಲ ಎಂಬ ಅಂಶ ಪತ್ತೆಯಾಗಿದೆ. ಬೆಂಗಳೂರಿನ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಕೆಯಾದ ರಾಜ್ಯಮಟ್ಟದ ಸಮಿತಿಯ 74 ಪುಟಗಳ ವರದಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆ, ಬಾಲಗರ್ಭಿಣಿಯರಲ್ಲಿನ ಗರ್ಭಪಾತಗಳು ಮತ್ತು ಶಿಶುಮರಣ ಪ್ರಮಾಣಗಳು ಹೆಚ್ಚುತ್ತಿವೆ. ನೋಂದಾಯಿತ ಗರ್ಭಧಾರಣೆಗಳಲ್ಲಿ ‘ಯಾವುದೇ ಫಲಿತಾಂಶ ದಾಖಲಾಗದ’ ಪ್ರಕರಣಗಳ ಪ್ರಮಾಣ ದೊಡ್ಡ ಮಟ್ಟದಲ್ಲಿದೆ’ ಎಂದು ವರದಿ ಹೇಳುತ್ತದೆ.

ನಾಪತ್ತೆ ಹೇಗೆ?

ಸಾಮಾನ್ಯವಾಗಿ, ಗರ್ಭ ಧರಿಸಿದ 10ರಿಂದ 12 ವಾರಗಳ ಬಳಿಕ ತಪಾಸಣೆಗೆ ಗರ್ಭಿಣಿಯರು ಆಸ್ಪತ್ರೆಗಳಿಗೆ ತೆರಳುತ್ತಾರೆ. 12 ವಾರ ತುಂಬಿದ ಬಳಿಕ ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಹಣ ಕೊಟ್ಟು ಕುಟುಂಬ ಸದಸ್ಯರು ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮಾಡಿಸುತ್ತಾರೆ. ಗಂಡು ಎಂದು ಸಾಬೀತಾದರೆ ಗರ್ಭ ಮುಂದುವರಿಯುತ್ತದೆ. ಹೆಣ್ಣು ಎಂದು ಗೊತ್ತಾಗುತ್ತಿದ್ದಂತೆ, ಆ ಗರ್ಭ ಧರಿಸಿದವರು ಸರ್ಕಾರದ ನಿಗಾದಿಂದಲೇ ಮಾಯವಾಗುತ್ತಾರೆ. ಅಂಥವರನ್ನು ಹುಡುಕಿ ಮನೆ ಮನೆಗೆ ಎಡತಾಕಿದಾಗ ಪ್ರಯಾಣ ಮಾಡುತ್ತಿರುವಾಗ ಸಮಸ್ಯೆಯಾಯಿತು, ಆರೋಗ್ಯ ಸಮಸ್ಯೆಯಿಂದ ಗರ್ಭ ಹೋಯಿತು ಎಂಬಿತ್ಯಾದಿ ನೆಪಗಳನ್ನು ಕುಟುಂಬದವರು ಹೇಳುತ್ತಾರೆ. ಆ ಕುರಿತಾದ ವೈದ್ಯಕೀಯ ದಾಖಲೆಗಳು ಇರುವುದಿಲ್ಲ. ಗರ್ಭ ಧರಿಸಿದಾಗ ನೀಡುವ ನೋಂದಣಿ ಪುಸ್ತಿಕೆಯನ್ನೇ ಸುಟ್ಟು ಹಾಕಲಾಗುತ್ತಿದೆ. ಗರ್ಭಪಾತ ಮಾತ್ರೆ ಬಳಕೆ ವ್ಯಾಪಕವಾಗಿದೆ. ಹೀಗಾಗಿ ಬಹುಪಾಲು ಗರ್ಭಗಳು ಭ್ರಣ ಹತ್ಯೆ ಪಿಡುಗಿಗೆ ಬಲಿಯಾಗಿರಬಹುದು ಎಂಬ ಅಂಶ ತನಿಖಾ ವರದಿಯಲ್ಲಿ ಇದೆ.

2021-22, 2022-23, 2023-24, 2024-25, 2025-26 (ಮೇ ವರೆಗೆ)ರ ಅಂದಾಜು ಮಾಹಿತಿಯಂತೆ, ಒಟ್ಟು 16,116 (ಶೇ.30.1) ಪ್ರಕರಣಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರತಿವರ್ಷ ಸರಾಸರಿಯಂತೆ, 3 ಸಾವಿರಕ್ಕೂ ಅಧಿಕ ಗರ್ಭಗಳ ಬಗ್ಗೆ ಕೊನೆಯ ಹಂತದ ‘ಔಟ್‌ ಕಮ್‌ ರಿಪೋರ್ಟ್‌’ ಇಲ್ಲ.

ಹೆಚ್ಚುತ್ತಿವೆ ಹೆಣ್ಣು ಭ್ರೂಣ ಹತ್ಯೆಗಳು!:

ಜಿಲ್ಲೆಯಲ್ಲಿ ಕೇವಲ ಒಂದೇ ವರ್ಷದಲ್ಲಿ ಗರ್ಭಪಾತಗಳ ಸಂಖ್ಯೆಯಲ್ಲಿ ಶೇ.88.6% ರಷ್ಟು ಏರಿಕೆ ಕಂಡು ಬಂದಿದೆ. 2023-24ರಲ್ಲಿ 673 ಇದ್ದ ಪ್ರಕರಣಗಳು 2024-25ರ ವೇಳೆಗೆ 1,269ಕ್ಕೆ ತಲುಪಿವೆ. ಒಟ್ಟು ಪ್ರಸವಪೂರ್ವ ಆರೈಕೆ ನೋಂದಣಿಗೆ ಹೋಲಿಸಿದರೆ, ಗರ್ಭಪಾತದ ಈ ದರ ಶೇ.2.76% ರಿಂದ ಶೇ.4.41% ಕ್ಕೆ ಜಿಗಿದಿದೆ. ಈ ವರ್ಷದ ಕೊನೆಗೆ ಈ ಸಂಖ್ಯೆ ಸುಮಾರು 1,000 ತಲುಪುವ ಸಾಧ್ಯತೆಯಿದೆ ಎಂದು ವರದಿ ಹೇಳಿದ್ದು, ಯಾದಗಿರಿ ಜಿಲ್ಲೆಯಲ್ಲಿ ಗರ್ಭಪಾತಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ಈ ಅಂಕಿ-ಅಂಶಗಳು ಪುಷ್ಟೀಕರಿಸುತ್ತಿವೆ.

ಎರಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಹೊಂದಿರುವವರು, ಮೂರನೇ ಅಥವಾ ನಾಲ್ಕನೇ ಗರ್ಭ ಧರಿಸಿದಾಗ, ಅದು ಹೆಣ್ಣು ಎಂದು ಲಿಂಗಪತ್ತೆ ಮೂಲಕ ಪತ್ತೆಯಾದರೆ, ಅಸುರಕ್ಷಿತ ಗರ್ಭಪಾತಕ್ಕೆ ಮುಂದಾಗುತ್ತಿದ್ದಾರೆ. ಗಂಡು ಮಗುವಿಗಾಗಿ ಒಲವು, ಇದಕ್ಕಾಗಿ ಕುಟುಂಬದ ಒತ್ತಡಗಳಿಂದಾಗಿ ಕಾನೂನುಬಾಹಿರವಾಗಿ, ಅಸುರಕ್ಷಿತ ಗರ್ಭಪಾತಕ್ಕೆ ಮುಂದಾಗುತ್ತಿದ್ದಾರೆ. ಸುರಪುರ ತಾಲೂಕು, ಪಕ್ಕದ ವಿಜಯಪುರ ಜಿಲ್ಲೆಯ ತಾಳಿಕೋಟಿ, ಮುದ್ದೇಬಿಹಾಳ ಮುಂತಾದೆಡೆ ಇಂತಹ ಗರ್ಭಪಾತಗಳು ನಡೆಯುತ್ತಿವೆ ಎಂಬ ಸಂಗತಿ ಸಮಿತಿಯ ತನಿಖೆಯಲ್ಲಿ ವ್ಯಕ್ತವಾಗಿದೆ.

ಗರ್ಭಪಾತ ಮಾತ್ರೆಗಳ ಬೇಕಾಬಿಟ್ಟಿ ಮಾರಾಟ

ಗರ್ಭಪಾತಕ್ಕೆ ಬಳಸುವ ಮಿಫೆಪ್ರಿಸ್ಟೋನ್ ಮತ್ತು ಮಿಸೊಪ್ರೊಸ್ಟೋಲ್ ಸಂಯೋಜನೆಯ ಔಷಧಗಳು (ಎಂಟಿಪಿ ಕಿಟ್‌ಗಳು) ವೈದ್ಯರ ಯಾವುದೇ ಲಿಖಿತ ಚೀಟಿ ಇಲ್ಲದೆಯೇ ಹಲವು ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿರುವುದು ಸಮಿತಿಯ ತನಿಖೆಯಲ್ಲಿ ದೃಢಪಟ್ಟಿದೆ. ಕೆಲವು ಪ್ರಕರಣಗಳಲ್ಲಂತೂ, ಯಾವುದೇ ದಾಖಲೆಗಳಿಲ್ಲದೆ ಕೇವಲ ಮೌಖಿಕ ವಿನಂತಿಯ ಮೇರೆಗೆ ಗ್ರಾಹಕರಿಗೆ ಈ ಮಾತ್ರೆಗಳನ್ನು ನೇರವಾಗಿ ವಿತರಿಸಲಾಗಿದೆ.

ಬಾಲ ಗರ್ಭಿಣಿಯರು, ಗರ್ಭಪಾತಗಳು ಹೆಚ್ಚಳ

ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 33.2% ರಷ್ಟು ಮಹಿಳೆಯರಿಗೆ 18 ವರ್ಷ ತುಂಬುವ ಮುಂಚೆಯೇ ವಿವಾಹವಾಗಿದೆ. 18 ವರ್ಷದೊಳಗಿನ ಗರ್ಭಧಾರಣೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗಿದೆ. 2021-22ರಲ್ಲಿ 91 ಇದ್ದ ಇಂತಹ ಪ್ರಕರಣಗಳ ಸಂಖ್ಯೆ, 2023-24ರ ವೇಳೆಗೆ 302ಕ್ಕೆ ಏರಿಕೆಯಾಗಿದೆ.

ಇನ್ನು, ಅವಿವಾಹಿತ ಹುಡುಗಿಯರ ಗರ್ಭಪಾತದ ವಿಷಯದಲ್ಲಿ ಪೋಷಕರು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಇಷ್ಟಪಟ್ಟಿಲ್ಲ. ಇವುಗಳನ್ನು ಅತ್ಯಂತ ರಹಸ್ಯವಾಗಿ ಮಾಡಲಾಗುತ್ತದೆ. ಹಳೆಯ ಗರ್ಭಪಾತಗಳ ಮಾಹಿತಿಯನ್ನು ಮರು-ಸಂಗ್ರಹಿಸಲು ಹೋದಾಗ, ಆ ಘಟನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕುಟುಂಬದವರೇ ಸಂಪೂರ್ಣವಾಗಿ ಸುಟ್ಟು ಹಾಕಿದ್ದರಿಂದ ಆ ದಾಖಲೆಗಳನ್ನು ಪಡೆಯಲು ಸಮಿತಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ರಾಜ್ಯಮಟ್ಟದ ಬಹುಶಿಸ್ತೀಯ ಸಮಿತಿ:

ಭಾರತ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಬೆಂಗಳೂರು ಇದರ ಹಿರಿಯ ಪ್ರಾದೇಶಿಕ ನಿರ್ದೇಶಕರಾದ ಡಾ. ಸ್ಮಿತಾ ರಾವತ್, ರಾಷ್ಟ್ರೀಯ ಮಹಿಳಾ ಆರೋಗ್ಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮುಂಬೈನ ಕ್ಲಿನಿಕಲ್ ರಿಸರ್ಚ್ ವಿಭಾಗದ ಮುಖ್ಯಸ್ಥರು ಹಾಗೂ ವಿಜ್ಞಾನಿ ಡಾ.ಅನುಶ್ರೀ ಪಾಟೀಲ್, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಯಿಮ್ಸ್‌) ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾ ಡಾ.ಕುಮಾರ್ ಅಂಗಡಿ, ಹಿರಿಯ ಪ್ರಸೂತಿ ತಜ್ಞ, ಕೊಪ್ಪಳ ಜಿಲ್ಲೆ ಕನಕಗಿರಿಯ ಡಾ. ಈಶ್ವರ್ ಸವದಿ, ಕಲಬುರಗಿ ಜಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಉಷಾ ದೊಡ್ಡಮನಿ ಹಾಗೂ ಬೆಂಗಳೂರಿನ ನೂರಾ ಹೆಲ್ತ್‌ನ ವೈದ್ಯಕೀಯ ಮುಖ್ಯಸ್ಥರಾದ ಡಾ. ನೀಲಿಮಾ ದೇವದಾಸ್ ಅವರ ತಂಡ ಈ ವರದಿ ಸಲ್ಲಿಸಿದೆ. ಯಾದಗಿರಿಯ ಕುಟುಂಬ ಕಲ್ಯಾಣ ಜಿಲ್ಲಾ ಅಧಿಕಾರಿ ಡಾ. ಜ್ಯೋತಿ ಕಟ್ಟೀಮನಿ ನೋಡಲ್‌ ಅಧಿಕಾರಿಯಾಗಿ ಪರಿಶೀಲನಾ-ಭೇಟಿ ವೇಳೆ ತಂಡದ ಜೊತೆಗಿದ್ದರು. ಸಮಿತಿ 2026ರ ಏಪ್ರಿಲ್ 6 ರಿಂದ 10ರವರೆಗೆ ಯಾದಗಿರಿ ಜಿಲ್ಲೆಗೆ ಐದು ದಿನಗಳ ಭೇಟಿ ಕೈಗೊಂಡಿತ್ತು.

53595 ಗರ್ಭ: 5 ವರ್ಷಗಳಲ್ಲಿ ಯಾದಗಿರಿಯಲ್ಲಿ ಗರ್ಭ ಧರಿಸಿದ ಮಹಿಳೆಯರ ಸಂಖ್ಯೆ

35424 ಹೆರಿಗೆ: ಸರ್ಕಾರದ ಬಳಿ ನೋಂದಣಿಯಾದವರ ಪೈಕಿ 35424 ಮಂದಿಗೆ ಹೆರಿಗೆ

2055 ಗರ್ಭಪಾತ: ಅಧಿಕೃತ ಅಂಕಿ-ಅಂಶಗಳ ಪ್ರಕಾರ ಐದು ವರ್ಷದಲ್ಲಾದ ಗರ್ಭಪಾತ

16116 ಗರ್ಭ: ಉಳಿದ ಗರ್ಭಗಳ ಬಗ್ಗೆ ಅಧಿಕಾರಿಗಳ ಬಳಿ ಯಾವುದೇ ಮಾಹಿತಿ ಇಲ್ಲ

ಏನಿದು ಕಣ್ಮರೆ ಆಟ?

- 10-12 ವಾರ ತುಂಬಿದಾಗ ಗರ್ಭಿಣಿಯರು ತಪಾಸಣೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಆಗ ಅವರ ವಿವರ ನೋಂದಣಿಯಾಗುತ್ತದೆ

- 12 ವಾರದ ನಂತರ ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗೆ ಗರ್ಭಿಣಿಯನ್ನು ಕರೆದೊಯ್ಯುವ ಕುಟುಂಬವರು ಭ್ರೂಣ ಲಿಂಗ ಪತ್ತೆ ಮಾಡಿಸುತ್ತಾರೆ

- ಗಂಡು ಅಂತ ಗೊತ್ತಾದರೆ ಆ ಗರ್ಭ ಮುಂದುವರಿಯುತ್ತದೆ. ಹೆಣ್ಣು ಅಂತ ಗೊತ್ತಾಗುತ್ತಿದ್ದಂತೆ ಗರ್ಭ ಸರ್ಕಾರಿ ನಿಗಾದಿಂದ ಮಾಯವಾಗುತ್ತದೆ

- ಮನೆಗೆ ಹೋಗಿ ವಿಚಾರಿಸಿದರೆ ಪ್ರಯಾಣದ ವೇಳೆ ಅಥವಾ ಅನಾರೋಗ್ಯದಿಂದ ಗರ್ಭ ಹೋಗಿದೆ ಎಂದು ನೆಪಗಳನ್ನು ಹೇಳುತ್ತಾರೆ

- ವೈದ್ಯಕೀಯ ದಾಖಲೆಗಳನ್ನೇ ಸುಟ್ಟು ಹಾಕಿರುತ್ತಾರೆ. ನಾಪತ್ತೆಯಾದ ಗರ್ಭಗಳಲ್ಲಿ ಬಹುತೇಕವು ಭ್ರೂಣ ಹತ್ಯೆಗೆ ಬಲಿಯಾಗಿವೆ: ವರದಿ

PREV
Stay informed with the latest news and developments from Yadgir district (ಯಾದಗಿರಿ ಸುದ್ದಿ) — including local politics, agriculture, civic issues, social events, environment, community affairs and regional reports on Kannada Prabha News.
Read more Articles on

Recommended Stories

ಜಾವೀದ್ ಹುಸೇನ್ ಹವಲ್ದಾರರಿಗೆ ರಾಜ್ಯ ಮಟ್ಟದ ''''ಸಾಹಿತ್ಯ ರತ್ನ'''' ಪ್ರಶಸ್ತಿ ಪ್ರದಾನ
ಗೆದ್ದಲಮರಿಯಿಂದ ವಿಜಯಪುರ ಬಸ್‌ ಆರಂಭ