ಮಳೆ ಹಾನಿ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಬೇಕು । ಕೆಸ್ವಾನ್‌ನಲ್ಲಿ ವೀಡಿಯೋ ಕಾನ್ಫರೆನ್ಸ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಕೆಸ್ವಾನ್‌ನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸಲಹೆ ನೀಡಿದರು.ಮಳೆಯಿಂದ ಆಗಿರುವ ಹಾನಿ ಕುರಿತು ಕೆಳಮಟ್ಟದ ಅಧಿಕಾರಿಗಳು, ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದ ಅವರು, ಮನೆಗಳ ಹಾನಿ, ರಸ್ತೆಗಳ ಹಾನಿ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರ್ಕಾರದ ನಿಯಮಗಳ ಪ್ರಕಾರ ನೊಂದ ಜನರಿಗೆ ಸಕಾಲದಲ್ಲಿ ಪರಿಹಾರ ನೀಡಬೇಕೆಂದು ಹೇಳಿದರು.ಜನ ಜಾನುವಾರು ಮತ್ತಿತರ ಸಮಸ್ಯೆಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಜಿಲ್ಲೆ ಜನರ ಸುರಕ್ಷತೆಗೆ ಒತ್ತು ನೀಡುವಂತೆ ತಿಳಿಸಿದ ಸಚಿವರು, ಪ್ರವಾಹದ ನಂತರದ ಪರಿಣಾಮ ಸುಕ್ತವಾಗಿ ನಿರ್ವಹಿಸಲು ಪೂರ್ವಭಾವಿ ಕ್ರಮ ಕೈಗೊಳ್ಳಬೇಕಲ್ಲದೆ ಪರಿಹಾರ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ಮಾಡಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಜುಲೈ ಮಾಹೆಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಜಿಲ್ಲೆಗೆ ಪ್ರವಾಸಿಗರು ಆಗಮಿಸದಂತೆ ಹಾಗೂ ಯಾವುದೇ ಚಾರಣ ಕೈಗೊಳ್ಳದಂತೆ ಮಾಹಿತಿ ನೀಡಲಾಗಿದೆ. ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯನಗಿರಿಗೆ ಹೋಗುವ ರಸ್ತೆ ಹಾನಿಯಾಗಿದ್ದು, ಅಲ್ಲಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ಮಳೆ ಕಡಿಮೆ ಯಾಗುವವರೆಗೂ ಜು. 22 ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಳೆಯಿಂದ ಗುಡ್ಡ ಕುಸಿತ, ಮರಗಳು ಬೀಳುತ್ತಿದ್ದು, ಗುಡ್ಡ ಕುಸಿತ, ಮರಗಳು ಬಿದ್ದ ಕಡೆ ತಕ್ಷಣ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡ ಲಾಗುತ್ತಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಈಗಾಗಲೇ ಬಾರಿ ಮಳೆಯಾಗುತ್ತಿದ್ದು, ಡೆಂಘೀ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಯಾವುದೇ ರೀತಿ ಸಾಂಕ್ರಾಮಿಕ ರೋಗ ಹರಡದಂತೆ ಜನರಿಗೆ ಮುಂಜಾಗ್ರತೆ ವಹಿಸಲು ಅರಿವು ಮೂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾಹಿತಿ ನೀಡಿ, ಹಾಸನ ಜಿಲ್ಲೆ ಸಂಪಾಜೆ ರಸ್ತೆಯ ಗುಡ್ಡ ಕುಸಿತದಿಂದಾಗಿ ಆ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಭಾರೀ ತೂಕದ ವಾಹನಗಳು ಚಾರ್ಮಾಡಿ ರಸ್ತೆಯ ಮೂಲಕ ಸಂಚರಿಸುತ್ತಿದೆ. ಭಾರೀ ವಾಹನಗಳ ಸಂಚಾರದಿಂದ ಅಡಚಣೆಯುಂಟಾಗುತ್ತಿದೆ. ಹಾಗಾಗಿ ಭಾರೀ ವಾಹನಗಳ ಸಂಚಾರ ನಿಷೇಧಿಸುವಂತೆ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಗತ್ಯ ವಸ್ತುಗಳ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ತಿಳಿಸಿದರು.ಭಾರೀ ಮಳೆ ಸಂದರ್ಭದಲ್ಲಿ ಶಾಲಾ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸಲು ಕ್ರಮವಹಿಸುವಂತೆ ತಿಳಿಸಿದ ಸಚಿವರು, ದುರಸ್ತಿಯಲ್ಲಿರುವ ಹಾಗೂ ಮಳೆಯಿಂದ ಹಾನಿಯಾದ ರಸ್ತೆಗಳಿಗೆ ಸಾರ್ವಜನಿಕರು ಹೋಗದಂತೆ ನಾಮಫಲಕ ಆಳವಡಿಸು ವಂತೆ ಸೂಚಿಸಿದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಉಪಸ್ಥಿತರಿದ್ದರು.19 ಕೆಸಿಕೆಎಂ 1ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ನಡೆಸಿದ ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಕೀರ್ತನಾ ಹಾಗೂ ಎಡಿಸಿ ನಾರಾಯಣರೆಡ್ಡಿ ಕನಕರೆಡ್ಡಿ ಇದ್ದರು.