ಮುಸ್ಲಿಮರ ಮುನಿಸು ಶಮನಕ್ಕೆ ಮುಖಂಡರ ಮನೆಗೆ ಉಸ್ತುವಾರಿ ಸಚಿವರ ಭೇಟಿ!

KannadaprabhaNewsNetwork |  
Published : Jun 01, 2025, 03:24 AM IST
ನಾಡದೋಣಿ ಮುಳುಗಿ ನೀರು ಪಾಲಾಗಿ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ | Kannada Prabha

ಸಾರಾಂಶ

ದ.ಕ. ಸೆಂಟ್ರಲ್‌ ಮುಸ್ಲಿಂ ಕಮಿಟಿ ಅಧ್ಯಕ್ಷ ಕೆ.ಎಸ್‌. ಮಸೂದ್‌ ಅವರ ನಿವಾಸಕ್ಕೆ ಬೆಳಗ್ಗೆ ತೆರಳಿ, ಲಘು ಉಪಹಾರ ಸೇವಿಸಿದರು. ರಾಜ್ಯ ಸರ್ಕಾರ ಕರಾವಳಿಯಲ್ಲಿ ಅಹಿತಕರ ಘಟನೆಯನ್ನು ಸರಿಯಾಗಿ ನಿಭಾಯಿಸದೇ ಇರುವ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಇರುವ ಅಪನಂಬಿಕೆ, ಅಸಮಾಧಾನ ಹಾಗೂ ಸಾಮೂಹಿಕ ರಾಜಿನಾಮೆ ಕುರಿತಂತೆ ಮನಸ್ತಾಪ ಸರಿಪಡಿಸುವ ದಿಶೆಯಲ್ಲಿ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಸ್ಥಾಪಿಸುವ ಜೊತೆಗೆ ಅತೃಪ್ತ ಮುಸ್ಲಿಂ ಸಮುದಾಯದ ಮರು ವಿಶ್ವಾಸ ಗಳಿಸಲು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಶನಿವಾರ ಮುಸ್ಲಿಂ ಮುಖಂಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಕೆ.ಎಸ್‌. ಮಸೂದ್‌ ಅವರ ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಅತೃಪ್ತಿ ಶಮನದ ಬಗ್ಗೆ ಮಾತುಕತೆಯೂ ನಡೆಯಿತು ಎಂದು ಹೇಳಲಾಗಿದೆ.

ದ.ಕ. ಸೆಂಟ್ರಲ್‌ ಮುಸ್ಲಿಂ ಕಮಿಟಿ ಅಧ್ಯಕ್ಷ ಕೆ.ಎಸ್‌. ಮಸೂದ್‌ ಅವರ ನಿವಾಸಕ್ಕೆ ಬೆಳಗ್ಗೆ ತೆರಳಿ, ಲಘು ಉಪಹಾರ ಸೇವಿಸಿದರು. ರಾಜ್ಯ ಸರ್ಕಾರ ಕರಾವಳಿಯಲ್ಲಿ ಅಹಿತಕರ ಘಟನೆಯನ್ನು ಸರಿಯಾಗಿ ನಿಭಾಯಿಸದೇ ಇರುವ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಇರುವ ಅಪನಂಬಿಕೆ, ಅಸಮಾಧಾನ ಹಾಗೂ ಸಾಮೂಹಿಕ ರಾಜಿನಾಮೆ ಕುರಿತಂತೆ ಮನಸ್ತಾಪ ಸರಿಪಡಿಸುವ ದಿಶೆಯಲ್ಲಿ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಸುಮಾರು ಒಂದು ಗಂಟೆಗಳ ಕಾಲ ಮುಸ್ಲಿಮರ ಹಿರಿಯ ಮುಖಂಡ ಕೆ.ಎಸ್‌.ಮಸೂದ್‌ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಪಕ್ಷಕ್ಕೆ ಸಾಮೂಹಿಕ ರಾಜಿನಾಮೆ ನೀಡಿದ ಮುಖಂಡರನ್ನು ಸಮಾಧಾನ ಪಡಿಸಬೇಕು. ಪಕ್ಷ ಹಾಗೂ ಸರ್ಕಾರದಿಂದ ಮುಸ್ಲಿಂ ಸಮುದಾಯಕ್ಕೆ ಎಂದಿಗೂ ಅನ್ಯಾಯ ಆಗುವುದಿಲ್ಲ, ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಸಚಿವರು ಈ ಸಂದರ್ಭ ಭರವಸೆ ನೀಡಿದರು ಎಂದು ಹೇಳಲಾಗಿದೆ. ದ್ವೇಷ ಭಾಷಣ ಮಾಡುವವರ ಹಾಗೂ ಅಹಿತಕರ ಘಟನೆಗೆ ಕಾರಣರಾದವರ ಬಗ್ಗೆ ಕಠಿಣ ಕ್ರಮ ಹಾಗೂ ಪೊಲೀಸರ ನಿಷ್ಪಕ್ಷಪಾತ ತನಿಖೆಯ ಭರವಸೆ ನೀಡಿದರು.

ಮಠದಿಂದ ಸಾಮರಸ್ಯ ಅರಿವು:

ಬಳಿಕ ರಾಮಕೃಷ್ಣ ಮಠಕ್ಕೂ ಭೇಟಿ ನೀಡಿ ಸೌಹಾರ್ದತೆ ರೂಪಿಸುವಲ್ಲಿ ಮಠದ ಸಹಕಾರವನ್ನು ಬಯಸಿದರು. ಜನರಲ್ಲಿ ಸಾಮರಸ್ಯದ ಅರಿವು ಮೂಡಿಸಬೇಕು. ಒಡೆದ ಮನಸುಗಳನ್ನು ಒಂದಾಗಿಸಿ ಮುನ್ನಡೆಯಬೇಕು. ಶಾಂತಿ ಸ್ಥಾಪನೆಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಯಾವುದೇ ಪ್ರಚೋದನೆ, ಉದ್ರೇಕಕಾರಿ ಭಾಷಣಗಳಿಗೆ ಅವಕಾಶ ನೀಡಬಾರದು. ಸಹಬಾಳ್ವೆ ನಡೆಸಿದರೆ ಸಮಾಜ, ಜಿಲ್ಲೆ ಬೆಳವಣಿಗೆ ಆಗುತ್ತದೆ ಎಂದರು.

-----------------ನೀರು ಪಾಲಾದ ಮೀನುಗಾರರು: ಕುಟುಂಬಕ್ಕೆ ಪರಿಹಾರ ಭರವಸೆ

ಮೀನುಗಾರಿಕೆಗೆ ತೆರಳಿ ನೀರು ಪಾಲಾದ ಬೆಂಗರೆಯ ಇಬ್ಬರು ಮೀನುಗಾರರಾದ ಯಶವಂತ ಮತ್ತು ಕಮಲಾಕ್ಷರ ಮನೆಗೆ ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಮಾಧಾನ ಹೇಳಿದರು. ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ‘ಮೀನುಗಾರರ ಸಂಕಷ್ಟ ಪರಿಹಾರ ನಿಧಿ’ಯಿಂದ ತಲಾ 8 ಲಕ್ಷ ರುಪಾಯಿ ಪರಿಹಾರ ನೀಡುವ ಭರವಸೆಯನ್ನು ಸಚಿವರು ನೀಡಿದರು. ಬೆಂಗರೆಯಲ್ಲಿ ಭಾರಿ ಮಳೆಯ ವೇಳೆ ಅಳಿವೆ ಬಾಗಿಲನಲ್ಲಿ ನಾಡದೋಣಿ ಮಗುಚಿ ಮೀನುಗಾರರು ನೀರು ಪಾಲಾಗಿ ಎರಡು ದಿನ ಕಳೆದರೂ ಇದುವರೆಗೆ ಪತ್ತೆಯಾಗಿಲ್ಲ.

ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮೀನುಗಾರಿಕಾ ಉಪನಿರ್ದೇಶಕ ದಿಲೀಪ್, ಮೀನುಗಾರ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ