ಕೊಪ್ಪಳ: ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು. ಸಚಿವ ಶಿವರಾಜ ತಂಗಡಗಿ ದರ್ಪದಿಂದ ಜನರು ರೋಸಿ ಹೋಗಿದ್ದಾರೆ, ನಾನು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನರ ಮೇಲೆ ಅಟ್ರಾಸಿಟಿ ಕೇಸ್ ಮಾಡಿಸಿ 6ನೇ ಗ್ಯಾರಂಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಬಸವರಾಜ ದಢೇಸ್ಗೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲಿ ಸಚಿವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದು ಸಚಿವರು ಮಾತನಾಡುವ ಪರಿಯೇ ಎಂದು ಪ್ರಶ್ನೆ ಮಾಡಿದ ಅವರು, ಯಾವ ಕಾರಣಕ್ಕೆ ಎನ್ನುವುದನ್ನು ಸಹ ಹೇಳಲಿಲ್ಲ. ಆದರೆ, ಸಚಿವರು ದರ್ಪದಿಂದ ಮರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ಉತ್ಸವ ಕಾರ್ಯಕ್ರಮದಲ್ಲಿ ಇವರ ಮಾತು ಕೇಳುವವರು ಇರಲಿಲ್ಲ. ಅಷ್ಟೇ ಅಲ್ಲ, ಕಾಂಗ್ರೆಸ್ ನಾಯಕರು ಇರಲಿಲ್ಲ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಬಂದಿರಲಿಲ್ಲ. ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಬರದೆ ಇರುವುದರಿಂದಲೇ ಗೊತ್ತಾಗುತ್ತದೆ ಕಾಂಗ್ರೆಸ್ ಪಕ್ಷದಲ್ಲಿ ಇವರನ್ನು ಒಂಟಿ ಮಾಡಲಾಗಿದೆ ಎಂದು ಆರೋಪಿಸಿದರು.ಗ್ಯಾರಂಟಿ ಉತ್ಸವ ಕಾರ್ಯಕ್ರಮದಲ್ಲಿ ಬಂದಿದ್ದ ಆಶಾ ಕಾರ್ಯಕರ್ತೆಯರು ಎದ್ದೆದ್ದು ಹೋಗುತ್ತಿದ್ದರು. ಬಾಗಿಲು ಹಾಕಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.
ಈಗಲೇ ಚುನಾವಣೆ ನಡೆದರೇ 50 ಸಾವಿರ ಮತಗಳ ಅಂತರದಿಂದ ಸೋಲುತ್ತಾರೆ. ನನ್ನ ಬಳಿ ಹಣ ಇಲ್ಲ, 50 ಎಕರೆ ಭೂಮಿ ಇದ್ದು, ಬಾಜಿ ಕಟ್ಟಲು ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬಂದಾಗ ಇವರ ವಾಹನಗಳಿಗೆ ಡೀಸೆಲ್ ಹಾಕಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಮೂರು ಬಾರಿ ಶಾಸಕರಾಗಿ, ಸಚಿವರಾಗಿದ್ದಾರೆ. ಹಾಗಂತ ನಾನು ಇವರ ರಾಜೀನಾಮೆ ನೀಡಿ ಎಂದು ಕೇಳುತ್ತಿಲ್ಲ. ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡಿ, ಜನರ ರಕ್ಷಣೆ ಮಾಡಿ ಎಂದು ಆಗ್ರಹಿಸುತ್ತಿದ್ದೇನೆ. ಆದರೆ, ಇವರು ಆಡಳಿತ ಮಾಡುವ ಬದಲು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಅಟ್ರಾಸಿಟಿ ಕೇಸ್ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದರು.