ಹಾವೇರಿ: ಸರ್ವರಲ್ಲೂ ಸಮಾನ ಮನೋಭಾವ ಹೊಂದಿದ್ದ ಲಿಂ. ಶಾಂತವೀರ ಪಟ್ಟಾಧ್ಯಕ್ಷರು ಸದಾಚಾರಿ ಆಗಿದ್ದರು. ಅವರು ನುಡಿದಂತೆ ನಡೆದರು. ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಮಾತೃ ಹೃದಯಿಯಾಗಿದ್ದರು ಎಂದು ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಮಹಾತ್ಮರ ಜೀವನ ದರ್ಶನವೇ ಒಂದು ಆದರ್ಶ. ತಮ್ಮ ನಡೆ ಮತ್ತು ನುಡಿಗಳನ್ನು ಒಂದೇ ಎನ್ನುವಂತೆ ಬದುಕಿ, ಅರಿವು, ಆಚಾರ, ಅನುಭಾವದಿಂದ ಮಾನವ ಬದುಕಿಗೆ ದಾರಿದೀಪವಾದ ಜಂಗಮ ಪುಂಗವರಲ್ಲಿ ಲಿಂ. ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು. ಶಾಂತವೀರ ಪಟ್ಟಾಧ್ಯಕ್ಷರು ಯಾವುದೇ ಜಾತಿ-ಪಂಥ, ಮತಕ್ಕೆ ಸೀಮಿತಗೊಳಿಸದೇ ಅವರು ಎಲ್ಲ ಸಮಾಜಕ್ಕೆ ಸೇರಿದವರಾಗಿದ್ದಾರೆ. ಮನುಕುಲಗಳ ಒಳಿತಿಗಾಗಿ ಶ್ರಮಿಸಿದವರು ಎಂದು ಹೇಳಿದರು.
ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಯೋಗ ಮತ್ತು ಶಿವಯೋಗದ ಮೂಲಕ ಪಂಚ ಪುರುಷ ಸಿದ್ಧಿಯನ್ನು ಸಾಧಿಸಿದ ಲಿಂ.ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ತಮ್ಮ ತಪಃಶಕ್ತಿಯ ಮೂಲಕ ಭಕ್ತರ ನೋವುಗಳನ್ನು ಪರಿಹರಿಸಿ, ಜನಮುಖಿ ಕಾರ್ಯಗಳಿಂದ ಜಗದೀಶ್ವರರಾಗಿದ್ದಾರೆ ಎಂದು ಹೇಳಿದರು.ಬೈರನಹಟ್ಟಿ ದೊರೆ ಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಪ್ರವಚನಕಾರ ಮುಧೋಳ ಸಿದ್ದಾರೂಢ ಶಿವಯೋಗಾಶ್ರಮದ ಸಿದ್ದರಾಮ ಸ್ವಾಮೀಜಿ, ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಉಪಸ್ಥಿತರಿದ್ದರು.
ವೇದಿಕೆ ಸಮಾರಂಭದಲ್ಲಿ ಸಾಧನೆಗೈದ ಸಂಸ್ಕೃತ ಪಾಠ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಶಿವಮೊಗ್ಗದ ಮಹಾಲಿಂಗಯ್ಯ ಶಾಸ್ತ್ರಿಗಳು ಹಾಗೂ ಬೈಲಹೊಂಗಲದ ಮಹಾಂತೇಶ್ ಶಾಸ್ತ್ರಿಗಳು ಆರಾದ್ರಿಮಠ್ ಅವರನ್ನು ಸನ್ಮಾನಿಸಲಾಯಿತು.