ಜಾನಪದ ವಿವಿ ಅಕ್ರಮ ನೇಮಕಾತಿ: ತನಿಖೆಯ ಆದೇಶಕ್ಕೆ ಸ್ವಾಗತ

KannadaprabhaNewsNetwork |  
Published : Feb 19, 2026, 02:30 AM IST
ಡಾ.ಶಿವಸೋಮಣ್ಣ ನಿಟ್ಟೂರ | Kannada Prabha

ಸಾರಾಂಶ

ವಿಶ್ವದ ಏಕೈಕ ಜಾನಪದ ವಿವಿ ಉಳಿಸಿ ಬೆಳೆಸುವುದು ನಮ್ಮ ಉದ್ದೇಶ. ಬೇಡಿಕೆಗಳು ಈಡೇರುವ ವರೆಗೆ ಒಕ್ಕೂಟವು ನಿರಂತರ ಹೋರಾಟ ಮಾಡಲಿದ್ದು, 2026ರೊಳಗೆ ತನಿಖೆಯು ಮುಕ್ತಾಯಗೊಂಡು ತಪ್ಪಿತಸ್ಥರ ಮೇಲೆ ಶಿಕ್ಷೆಯಾಗಲಿ ಎಂದು ಡಾ. ಶಿವಸೋಮಣ್ಣ ನಿಟ್ಟೂರ ಒತ್ತಾಯಿಸಿದ್ದಾರೆ.

ಧಾರವಾಡ:

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ 2023ರಲ್ಲಿ ನಡೆದ ಅಕ್ರಮ ನೇಮಕಾತಿ ಹಾಗೂ ಹಣಕಾಸಿನ ಅವ್ಯವಹಾರದ ತನಿಖೆಗೆ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರ ಆದೇಶ ಮಾಡಿರುವುದು ನಮ್ಮ ಹೋರಾಟಕ್ಕೆ ಸಂದ ಫಲ ಎಂದು ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ಶಿವಸೋಮಣ್ಣ ನಿಟ್ಟೂರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟವು ನಿರಂತರ ಹೋರಾಟ ಹಾಗೂ ಅಕ್ರಮ ನೇಮಕಾತಿ, ಅವ್ಯವಹಾರದ ಸಂಪೂರ್ಣ ದಾಖಲೆಗಳನ್ನು ಸರ್ಕಾರಕ್ಕೆ ಮಾಧ್ಯಮಗಳ ಮೂಲಕ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಇದು ಒಕ್ಕೂಟದ ಮೊದಲ ಹಂತದ ಗೆಲುವು. ರಾಜ್ಯಪಾಲರ ಆದೇಶದಂತೆ ನಿವೃತ್ತ ನ್ಯಾಯಮೂರ್ತಿ ಉಮೇಶ ಅಡಿಗ ಅವರು ಮೂರು ತಿಂಗಳಲ್ಲಿ ತನಿಖೆ ಮಾಡಲಿದ್ದು, ಪಾರದರ್ಶಕ ತನಿಖೆ ಆಗಲಿದೆ ಎಂಬ ನಂಬಿಕೆ ಇದೆ ಎಂದರು.

ರಾಜ್ಯ ಸರ್ಕಾರ ವಿವಿಯ ಸಹಾಯಕ ಕುಲಸಚಿವ ಶಹಾಜಹಾನ್ ಮುದಕವಿ ಅವರ ಅಕ್ರಮಗಳ ಕುರಿತು ಪ್ರತ್ಯೇಕ ತನಿಖೆ ಸಹ ನಡೆಸಲು ನಿರ್ಧರಿಸಿದೆ. ಸಮರ್ಪಕ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಕ್ರಮ ನೇಮಕಾತಿ ರದ್ದುಗೊಳಿಸಿ ಅರ್ಹ ಅಭ್ಯರ್ಥಿಗಳ ನೇಮಕ ಮಾಡಬೇಕು. ಹಣ ಕೊಟ್ಟು ನೇಮಕ ಆದವರನ್ನು ಉದ್ಯೋಗದಿಂದ ಕಿತ್ತೊಗೆದು ಅವರಿಗೆ ತಕ್ಕ ಪಾಠ ಕಲಿಸಬೇಕು. ಈ ತನಿಖೆಯು ಉಳಿದ ವಿವಿಗಳಲ್ಲಾದ ಅಕ್ರಮಗಳಿಗೂ ಮಾದರಿಯಾಗಬೇಕು ಎಂದು ನಿಟ್ಟೂರ ಆಗ್ರಹಿಸಿದರು.

ವಿಶ್ವದ ಏಕೈಕ ಜಾನಪದ ವಿವಿ ಉಳಿಸಿ ಬೆಳೆಸುವುದು ನಮ್ಮ ಉದ್ದೇಶ. ಬೇಡಿಕೆಗಳು ಈಡೇರುವ ವರೆಗೆ ಒಕ್ಕೂಟವು ನಿರಂತರ ಹೋರಾಟ ಮಾಡಲಿದ್ದು, 2026ರೊಳಗೆ ತನಿಖೆಯು ಮುಕ್ತಾಯಗೊಂಡು ತಪ್ಪಿತಸ್ಥರ ಮೇಲೆ ಶಿಕ್ಷೆಯಾಗಲಿ ಎಂದು ಮನವಿ ಮಾಡಿದರು.

ನಿವೃತ್ತ ನ್ಯಾಯಾಧೀಶರ ತನಿಖೆ ಹೊರತಾಗಿಯೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಉನ್ನತ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಾಜಹಾನ್ ಮುದಕವಿ ಅಕ್ರಮಗಳ ವಿರುದ್ಧ ಪ್ರತ್ಯೇಕ ತನಿಖೆಗಾಗಿ ಫೆ. 19ರಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಡಾ. ಬಿ.ಎಂ. ದುಗಾಣಿ, ಕ.ಜಾ.ವಿ.ವಿ. ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಗೊಬ್ಬಿ, ವಿರೂಪಾಕ್ಷ ಮಾಚನೂರ, ಸುರೇಶ ಪಮ್ಮಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿ ಕ್ಷೇತ್ರದಲ್ಲಿ ಸಚಿವರಿಂದ ಅಟ್ರಾಸಿಟಿ ಕೇಸ್ ಭಾಗ್ಯ
ಸರ್ವರಲ್ಲೂ ಸಮಾನ ಮನೋಭಾವ ಹೊಂದಿದ್ದ ಶಾಂತವೀರ ಪಟ್ಟಾಧ್ಯಕ್ಷರು: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ