ಹುಬ್ಬಳ್ಳಿಯ ಸಿದ್ಧಾರೂಢರು ತಪಗೈದ ಹೋತನಹಳ್ಳಿಯಲ್ಲಿ ಜಾತ್ರಾ ಸಂಭ್ರಮ

KannadaprabhaNewsNetwork |  
Published : Feb 19, 2026, 02:30 AM IST
ಫೋಟೋ: 17ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಹಾನಗಲ್ಲ ತಾಲೂಕು ಹೋತನಹಳ್ಳಿಯ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಇದರೊಂದಿಗೆ ₹5 ಕೋಟಿ ವೆಚ್ಚದಲ್ಲಿ 4 ದೇವಸ್ಥಾನ ಹಾಗೂ ಜ್ಯೋತಿರ್ಲಿಂಗ ಸ್ಥಾಪನೆ ಭರದಿಂದ ಸಾಗಿದೆ.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ಹುಬ್ಬಳ್ಳಿಯ ಸಿದ್ಧಾರೂಢರು ತಪಗೈದ ಹಾನಗಲ್ಲ ತಾಲೂಕು ಹೋತನಹಳ್ಳಿಯ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಇದರೊಂದಿಗೆ ₹5 ಕೋಟಿ ವೆಚ್ಚದಲ್ಲಿ 4 ದೇವಸ್ಥಾನ ಹಾಗೂ ಜ್ಯೋತಿರ್ಲಿಂಗ ಸ್ಥಾಪನೆ ಭರದಿಂದ ಸಾಗಿದೆ.

ಹಾನಗಲ್ಲ ಪಟ್ಟಣದಿಂದ 8 ಕಿಮೀ ದೂರದಲ್ಲಿರುವ, ಹೋತನಹಳ್ಳಿ ಗ್ರಾಮ ಸಿದ್ಧಾರೂಢರು 1925ರಲ್ಲಿ ತಪಸ್ಸು ಮಾಡಿದ ಸ್ಥಳ. 25 ವರ್ಷಗಳ ಹಿಂದೆ ಇಲ್ಲಿನ ಒಂದು ಸಣ್ಣ ಕರಿ ಹಂಚಿನ ತಾಣದಲ್ಲಿ ಸ್ವಾಮಿಯಾಗಿ ಸೇವೆ ಆರಂಭಿಸಿದ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು ಈ ಸ್ಥಳವನ್ನು ಪ್ರೇಕ್ಷಣೀಯ, ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಈಗಿಲ್ಲಿ ಸಿದ್ಧಾರೂಢರು ತಪಗೈದ ಸ್ಥಳವನ್ನು ಸಿದ್ಧಾರೂಢ ಹಾಗೂ ಗುರುನಾಥರ ಮಂದಿರವನ್ನಾಗಿ ನಿರ್ಮಾಣ ಮಾಡಲಾಗಿದೆ. ಇದರ ಪಕ್ಕದಲ್ಲಿಯೇ ಒಂದು ಗಣಪತಿ ಮಂದಿರವಿದೆ.

ಶತಮಾನೋತ್ಸವ ಸಂಭ್ರಮ

ಸಿದ್ಧಾರೂಢರು ಹೋತನಹಳ್ಳಿಗೆ ಬಂದು ಕೆಲ ಕಾಲ ತಪಸ್ಸುಗೈದ ಕಾಲಕ್ಕೆ ಸರಿಯಾಗಿ ಈಗ ನೂರು ವರ್ಷಗಳು ಸಂದಿವೆ. ಕಳೆದ ವರ್ಷ ಸಿದ್ಧಾರೂಢರ ಪಾದಾರ್ಪಣೆಯ ಶತಮಾನೋತ್ಸ ಆಚರಿಸಲಾಗಿತ್ತು. ಹೊರ ರಾಜ್ಯಗಳಿಂದಲೂ ಮಠಾಧೀಶರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸುಂದರ ರಥ ನಿರ್ಮಾಣವಾಗಿ ರಥೋತ್ಸವವೂ ನಡೆದಿದೆ.

ಬಸವರಾಜಯ್ಯ ಅಜ್ಜ

ಕಳೆದ ವರ್ಷದ ಜಾತ್ರೆಗೆ ಆಗಮಿಸಿದ ಆಂದ್ರದ ಕರ್ಲೂಲಿನ ಬಸವರಾಜಯ್ಯ ಅಜ್ಜ ಎಂಬ 95 ವರ್ಷದ ಹಿರಿಯರು ಇಲ್ಲಿ ಸುಬ್ರಹ್ಮಣ್ಯ, ಪಂಚಲಿಂಗೇಶ್ವರ, ಶನೇಶ್ವರ, ನವಗ್ರಹ ಮಂದಿರಗಳನ್ನು ನಿರ್ಮಿಸಿಕೊಡುವ ಸಂಕಲ್ಪ ಮಾಡಿ ಈಗಾಗಲೇ ಮಂದಿರಗಳ ನಿರ್ಮಾಣ ಆರಂಭವಾಗಿದೆ. ಅಲ್ಲದೆ ಇದರೊಂದಿಗೆ ಶ್ರೀಮಠದ ಭಕ್ತರ ದೇಣಿಗೆಯಿಂದ 1108 ಶಿವಲಿಂಗಗಳ ಸ್ಥಾಪನೆ, 12 ಜ್ಯೋತಿರ್ಲಿಂಗಗಳು, 9 ಅಡಿ ಎತ್ತರದ ಶಿವಲಿಂಗ ಹಾಗೂ ನಂದಿ ಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ. ಇದೆಲ್ಲದರ ವೆಚ್ಚ ಅಂದಾಜು ₹5 ಕೋಟಿ ಆಗಲಿದೆ. ಬಸವರಾಜಯ್ಯ ಈಗಾಗಲೇ 4 ಕಡೆ ತಮ್ಮ ಸ್ವಂತ ಖರ್ಚಿನಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಜನರಲ್ಲಿ ಭಕ್ತಿ ದಾನ ಧರ್ಮ ಜಾಗೃತವಾಗಬೇಕು ಎಂಬುದು ಅವರ ಆಶಯವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು ಇಲ್ಲಿಗೆ ನಾನು ಸ್ವಾಮಿಯಾಗಿ ಬಂದಾಗ ಇಲ್ಲೊಂದು ಶಕ್ತಿ ಇದೆ ಎಂದು ಭಾಸವಾಯಿತು. ಅದು ಈಗ ಸತ್ಯವಾಗಿದೆ. ಇಲ್ಲಿನ ಭಕ್ತರು ಕೂಡ ಈ ಸ್ಥಳದ ಬಗ್ಗೆ ಬಹು ದೊಡ್ಡ ಗೌರವ ಭಕ್ತಿ ಹೊಂದಿದ್ದಾರೆ. ಇಲ್ಲಿಯ ಯಾವುದೇ ಕಾರ್ಯಗಳಿಗೆ ಹಣದ ಕೊರತೆಯಾಗಿಲ್ಲ. ಎಲ್ಲರೂ ಒಟ್ಟಾಗಿ ದೇಣಿಗೆಯಿಂದಲೇ ಎಲ್ಲ ಸೇವೆಯನ್ನು ಸಂಕಲ್ಪದಂತೆ ಮಾಡುತ್ತಾರೆ. ಇದು ಆಧ್ಯಾತ್ಮದ ಉನ್ನತ ಶಕ್ತಿ ಕೇಂದ್ರವಾಗಬೇಕು ಎಂಬುದು ಎಲ್ಲರ ಸಂಕಲ್ಪವಾಗಿದ್ದು, ಅದರಂತೆ ಎಲ್ಲ ಭಕ್ತರು ಸಹಕಾರ ನೀಡಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲವೂ ಸಿದ್ಧಾರೂಢರ ಮಹಿಮೆ. ಈ ಧರ್ಮಸ್ಥಳವನ್ನು ಪ್ರವಾಸಿ ಭಕ್ತಿಯ ನೆಲೆಯಾಗಿ, ಪ್ರವಾಸಿ ತಾಣವಾಗಿ ನಿರ್ಮಿಸುವ ಸಂಕಲ್ಪದಿಂದ ಎಲ್ಲ ಭಕ್ತರು ಕಾಯಾ ವಾಚಾ ಮನಸಾ ಸೇವೆ ಸಲ್ಲಿಸುತ್ತಿದ್ದಾರೆ. ಇದು ಭಕ್ತಿಯ ನೆಲೆಯಾಗಬೇಕು ಎಂಬುದು ನಮ್ಮ ಸಂಕಲ್ಪವೂ ಆಗಿದೆ ಎನ್ನುತ್ತಾರೆ.

ಜಾತ್ರೆ

ಶ್ರೀಮಠದಲ್ಲಿ 24ನೇ ವೇದಾಂತ ಸಮ್ಮೇಳನ ಹಾಗೂ ಪ್ರವಚನ, ಆರೂಢರ ಮಹಾರಥೋತ್ಸವ ನಡೆಯುತ್ತಿದೆ. ಪುಷ್ಪಗಿರಿ ಜಗದ್ಗುರು ಸೋಮಶೇಖರ ಶಿವಾಚಾರ್ಯರು, ಕೂಸನೂರಿನ ಜ್ಯೋತಿರ್ಲಿಂಗಾನಂದ ಮಹಾಸ್ವಾಮಿಗಳು, ಕಾಶಿಯ ಮಹಾಂತ ಈಶ್ವರ ದೇವಜಿ ಮಹಾರಾಜರು ಸೇರಿದಂತೆ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಫೆ. 19ರಂದು ಮಧ್ಯಾಹ್ನ 3.30ಕ್ಕೆ ಗಂಟೆಗೆ ಮಹಾರಥೋತ್ಸವ ನಡೆಯಲಿ. ಫೆ. 23ರ ವರೆಗೆ ನಿತ್ಯ ಪ್ರವಚನ ಹಾಗೂ ಧರ್ಮ ಸಭೆಗಳು ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿ ಕ್ಷೇತ್ರದಲ್ಲಿ ಸಚಿವರಿಂದ ಅಟ್ರಾಸಿಟಿ ಕೇಸ್ ಭಾಗ್ಯ
ಸರ್ವರಲ್ಲೂ ಸಮಾನ ಮನೋಭಾವ ಹೊಂದಿದ್ದ ಶಾಂತವೀರ ಪಟ್ಟಾಧ್ಯಕ್ಷರು: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ