ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸಚಿವರ ಸೂಚನೆ

KannadaprabhaNewsNetwork |  
Published : Jul 07, 2024, 01:24 AM IST
ಚಿಕ್ಕಮಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಸಕರಾದ ಎಚ್‌.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್‌. ಶ್ರೀನಿವಾಸ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಯನ್ನು 20 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರ ಭರವಸೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಯನ್ನು 20 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಶನಿವಾರ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಅಹವಾಲು ಆಲಿಸಿದ ಅವರು, ಆಗಸ್ಟ್ ಒಂದರಂದು ಶಾಸಕರು ಮೆಡಿಕಲ್ ಕಾಲೇಜಿಗೆ ಬಂದು ಪರಿಶೀಲನೆ ನಡೆಸುತ್ತಾರೆ. ಅಷ್ಟರೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿರಬೇಕು ಎಂದು ತಿಳಿಸಿದರು.

ಈ ವೇಳೆ ಸಚಿವರ ಎದುರು ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿನ ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು.

ಮೆಡಿಕಲ್ ವಿದ್ಯಾರ್ಥಿನಿ ನಮಿತಾ ಭಟ್ ಮಾತನಾಡಿ, ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಹಾಗಾಗಿ ಟೀಚರ್ಸ್ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದೇವೆ. ಆದರೆ, ಅಲ್ಲಿ ನೀರಿನ ಸಮಸ್ಯೆ ಇದೆ. ಕಾಲೇಜಿನ ಮ್ಯಾನೇಜ್ಮೆಂಟ್ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದೆ. ಇದರ ಬದಲಾಗಿ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಸಿದ ಸಚಿವರು ಇನ್ನೊಂದು ತಿಂಗಳ ಒಳಗೆ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯ ಸಿದ್ಧಗೊಳ್ಳಬೇಕು ಎಂದು ಹೇಳಿದ್ದಲ್ಲದೆ, ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇದುವರೆಗೆ ಏಕೆ ಆಗಿಲ್ಲ ಎಂದು ಗುತ್ತಿಗೆ ದಾರರನ್ನು ಪ್ರಶ್ನಿಸಿದಾಗ. ಉತ್ತರಿಸಿದ ಗುತ್ತಿಗೆದಾರರು ಈಗಾಗಲೇ ಪೈಪ್ ಲೈನ್ ಕಾಮಗಾರಿ ಆಗಿದೆ. ಸೋಲಾರ್ ಪ್ಯಾನೆಲ್ ಅಳವಡಿಕೆ ಕಾರ್ಯ ಬಾಕಿ ಇದೆ. ಇನ್ನೊಂದು ತಿಂಗಳ ಒಳಗೆ ಬಿಸಿನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಸುಮಿತ್ ಮಾತನಾಡಿ, ನರ್ಸಿಂಗ್ ಕಾಲೇಜನ್ನು ಪ್ರತ್ಯೇಕವಾಗಿ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇನ್ನು ನರ್ಸಿಂಗ್ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ಹೌಸಿಂಗ್ ಬೋರ್ಡ್ ನಲ್ಲಿದ್ದು ಪ್ರತಿದಿನ ವಿದ್ಯಾರ್ಥಿ ಗಳು 20 ಕಿ.ಮೀ. ಓಡಾಡಬೇಕಾದ ಅನಿವಾರ್ಯತೆ ಇದೆ ಎಂದು ಸಮಸ್ಯೆ ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸುತ್ತೇವೆ. ಮೆಡಿಕಲ್ ಕಾಲೇಜು ಕಟ್ಟಡದಲ್ಲಿ ಎಲ್ಲಾ ವ್ಯವಸ್ಥೆಗಳು ಇರುವ ಕಾರಣ ಪ್ರತ್ಯೇಕ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡುವ ಯಾವುದೇ ಯೋಚನೆ ಇಲ್ಲ ಎಂದು ಹೇಳಿದರು.

ಎಂಬಿಬಿಎಸ್ ವಿದ್ಯಾರ್ಥಿನಿ ಗೌರಿ ಮಾತನಾಡಿ, ಮೆಡಿಕಲ್ ಕಾಲೇಜು ನಗರದಿಂದ ದೂರದಲ್ಲಿದ್ದು ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ವಸ್ತುಗಳಿಗೆ ನಗರಕ್ಕೆ ಹೋಗಬೇಕಿದೆ. ಹೀಗಾಗಿ ಕ್ಯಾಂಪಸ್ ಆವರಣದಲ್ಲೆ ಶಾಪಿಂಗ್ ಕಾಂಪ್ಲೆಕ್ಸ್ ಆರಂಭಿಸಿದರೆ ಅನುಕೂಲ ಎಂದರು. ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಶಾಪಿಂಗ್ ಕಾಂಪ್ಲೆಕ್ಸ್ ಆರಂಭಕ್ಕೆ ಟೆಂಡರ್ ಕರೆಯುವುದಾಗಿ ಸಚಿವರು ತಿಳಿಸಿದರು.

ಮೆಡಿಕಲ್ ಕಾಲೇಜಿನ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶರಣಪ್ರಕಾಶ್ ಪಾಟೀಲ್, ಶೀಘ್ರ ನೀರಿನ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಮೆಡಿಕಲ್ ಕಾಲೇಜು ಡೀನ್ ಎಂ.ಆರ್.ಹರೀಶ್, ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪ್ರತಿದಿನ ಒಂದೂವರೆ ಲಕ್ಷ ಲೀ. ನೀರು ಬೇಕಾಗಬಹುದು ಈ ಹಿನ್ನೆಲೆಯಲ್ಲಿ ಮೂರು ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಟ್ಯಾಂಕ್ ನಿರ್ಮಾಣವಾದ ಬಳಿಕ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್.ಶ್ರೀನಿವಾಸ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಧ್ಯಕ್ಷ ಡಾ.ಅಂಶುಮಂತ್ ಉಪಸ್ಥಿತರಿದ್ದರು.

--- ಬಾಕ್ಸ್‌---ಒಂದು ತಿಂಗಳೊಳಗೆ ಲ್ಯಾಬ್‌ ಆರಂಭಿಸಬೇಕುಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ತಿಂಗಳ ಒಳಗೆ ಮೈಕ್ರೋ ಬಯಾಲಜಿ, ಪ್ಯಾಥಾಲಜಿ ಹಾಗೂ ಫಾರ್ಮಾಕಾಲಜಿ ಲ್ಯಾಬ್ ಗಳನ್ನು ಆರಂಭಿಸಬೇಕು ಎಂದು ಮೆಡಿಕಲ್ ಕಾಲೇಜು ಮುಖ್ಯಸ್ಥರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೂಚನೆ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲ್ಯಾಬ್ ಗಳು ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಮಸ್ಯೆ ಆಗಲಿದೆ.ಎಂದ ಅವರು, ಮೆಡಿಕಲ್ ಕಾಲೇಜಿಗೆ ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ನೇಮಕ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಕೆಲವರು ಕೊರ್ಟ್ ಮೆಟ್ಟಿಲೇರಿದ ಪರಿಣಾಮ ಸಮಸ್ಯೆ ಎದುರಾಗಿದೆ. ಹೀಗಾಗಿ ಅಡ್ವಕೇಟ್ ಜನರಲ್ ಬಳಿ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಮೆಡಿಕಲ್ ಕಾಲೇಜು ಪಕ್ಕದಲ್ಲೆ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಓಪಿಡಿ ವಿಭಾಗದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಶೀಘ್ರವೇ ಒಪಿಡಿ ವಿಭಾಗ ಬಳಸಿಕೊಳ್ಳುತ್ತೇವೆ. ಇನ್ನುಳಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

--- 6 ಕೆಸಿಕೆಎಂ 1ಚಿಕ್ಕಮಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಸಕರಾದ ಎಚ್‌.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್‌. ಶ್ರೀನಿವಾಸ್‌ ಇದ್ದರು.

----ಪೋಟೋ ಫೈಲ್‌ ನೇಮ್‌ 6 ಕೆಸಿಕೆಎಂ 2

ಚಿಕ್ಕಮಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ಅವರು ನಡೆಸಿದ ಸಂವಾದದಲ್ಲಿ ವಿದ್ಯಾರ್ಥಿನಿಯರು ಅಹವಾಲು ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ