ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಂಪ್ಲಿ ಉತ್ಸವದ ಅಂಗವಾಗಿ ನಿರ್ಮಿಸಲಾಗಿದ್ದ ಭವ್ಯ ಕಂಪಿಲರಾಯ ವೇದಿಕೆಯಲ್ಲಿ ಕಂಪ್ಲಿ ಉತ್ಸವಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಗುರುವಾರ ಚಾಲನೆ ನೀಡಿದರು. ವೇದಿಕೆಯಲ್ಲಿ ಕಂಪ್ಲಿಯ ಇತಿಹಾಸ, ಪರಂಪರೆ ಹಾಗೂ ಕಂಪಿಲರಾಯ ಮತ್ತು ಗಂಡುಗಲಿ ಕುಮಾರರಾಮರ ಶೌರ್ಯ ಸಾಹಸವನ್ನು ಕೊಂಡಾಡಿದ ಅವರು, ಉತ್ಸವದ ವೈಭವವನ್ನು ಪ್ರಶಂಸಿಸಿದರು.
ಕಂಪ್ಲಿ, ಕುರುಗೋಡು ಉತ್ಸವಗಳ ಆಚರಣೆಗೆ ಶಾಸಕ ಜೆ.ಎನ್. ಗಣೇಶ್ ಅಪಾರ ಶ್ರಮ ವಹಿಸಿದ್ದಾರೆ. 2018ರಿಂದ 2023ರವರೆಗೆ ತಮ್ಮ ಮೊದಲ ಅವಧಿಯಲ್ಲಿ ₹3 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಿದ್ದಾರೆ. 300 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಗಣೇಶ್ ಅವರಂತಹ ಶಾಸಕರು ಅಪರೂಪದಲ್ಲೇ ಅಪರೂಪ. ಜನತೆ ಸದಾ ಅವರ ಕೈಹಿಡಿದು ಅಭಿವೃದ್ಧಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಬಡ, ಹಿಂದುಳಿದ ಹಾಗೂ ಶ್ರಮಿಕ ವರ್ಗದ ಪರವಿರುವ ಸರ್ಕಾರವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಈ ಅವಧಿಯಲ್ಲಿ 80 ಸಾವಿರಕ್ಕೂ ಅಧಿಕ ಮನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ನಾಗೇಂದ್ರ, ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲಾಗಿದ್ದ ಕಂಪ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಹೊಂದಿದೆ. ಕಂಪ್ಲಿ ಜನರ ಹಿತಕ್ಕಾಗಿ ಕಂಪಿಲರಾಯರು ಶಾಸಕ ಗಣೇಶ್ ರೂಪದಲ್ಲಿ ಮರುಜನ್ಮ ಪಡೆದಂತಾಗಿದೆ ಎಂದು ಕೊಂಡಾಡಿದರು.
ನೂತನ ಕಂಪ್ಲಿ- ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನೊತ್ತಾಯಿಸಿ ₹120 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಶೀಘ್ರದಲ್ಲೇ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ನಾರಾ ಭರತ್ ರೆಡ್ಡಿ, ಮುಖಂಡರಾದ ಮುಂಡರಗಿ ನಾಗರಾಜ, ಚಿದಾನಂದ್, ಶ್ರೀನಿವಾಸ ರಾವ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಮುಖಂಡರಿದ್ದರು.