ಹಾವೇರಿ: ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಜನಾಂಗದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಸಾವಿರಾರು ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ. ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಮಾಡಿಕೊಳ್ಳದೇ ಕಾಲಹರಣ ಮಾಡುತ್ತಿರುವುದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ. ಈ ಸರ್ಕಾರಕ್ಕೆ ಸಾಧನಾ ಸಮಾವೇಶ ಮಾಡಲು ನೈತಿಕತೆಯೇ ಇಲ್ಲ ಎಂದು ರಾಜ್ಯ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ದೂರಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 14ರಂದು ಸಿಎಂ ಸಿದ್ದರಾಮಯ್ಯ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಕಳೆದ 45 ವರ್ಷಗಳಿಂದ ಒಳ ಮೀಸಲಾತಿಗೆ ಹೋರಾಟ ಮಾಡುತ್ತಾ ಬಂದರೂ ಒಳ ಮೀಸಲಾತಿ ರಚಿಸಲು ಸಾಧ್ಯವಾಗಲಿಲ್ಲ, ಕಳೆದ ಬಿಜೆಪಿ ಅವಧಿಯಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿಗೆ ಇದ್ದ ಶೇ.15ರಷ್ಟು ಮೀಸಲಾತಿಯನ್ನು ಶೇ.17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಇದ್ದ ಶೇ.3ರ ಮೀಸಲನ್ನು ಶೇ.7ಕ್ಕೆ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರು. ಆದರೆ ಸುಪ್ರೀಂ ಕೋರ್ಟ್ ಒಳ ಮೀಸಲು ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಆದೇಶ ನೀಡಿದೆ. ಆದರೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಗೌರವ ಕೊಡದೆ ಗೃಹ ಸಚಿವರ ಮನೆಯಲ್ಲಿ ಮೀಸಲಾತಿ ನಿಗದಿ ಪಡಿಸಿದ್ದಾರೆ. ಈ ಹಿಂದೆ ನೇಮಿಸಿದ ಆಯೋಗಕ್ಕೆ ಬೆಲೆ ಇಲ್ಲವೇ? ಇದೇನಾ ಸರ್ಕಾರದ ಸಾಧನೆ ಎಂದು ಅಸಮಾಧಾನ ಹೊರ ಹಾಕಿದರು.ಈ ಸರ್ಕಾರ ಬಡವರು, ಹಿಂದುಳಿದವರು, ಎಸ್ಸಿ, ಎಸ್ಟಿ ಸಮುದಾಯಗಳ ವಿರೋಧಿಯಾಗಿದೆ. ಯಾವುದೇ ನಿಗಮಗಳಿಗೆ ಅನುದಾನ ಕೊಡುತ್ತಿಲ್ಲ, ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸೌಲಭ್ಯ ಪಡೆಯುವಲ್ಲಿ ವಂಚಿತರನ್ನಾಗಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ಇತ್ತ ದುರ್ಬಲ ವರ್ಗದವರಿಗೆ ಯಾವ ಯೋಜನೆಗಳು ಜಾರಿಯಾಗುತ್ತಿಲ್ಲ, ಇದು ಅಸ್ಪೃಶ್ಯರ ವಿರೋಧಿ ಸರ್ಕಾರ. ಈ ಸರ್ಕಾರಕ್ಕೆ ಸಾಧನಾ ಸಮಾವೇಶ ಮಾಡಲು ನೈತಿಕತೆಯೇ ಇಲ್ಲ. ರಾಜ್ಯ ಸರ್ಕಾರದ ಸಾಧನೆ ಶೂನ್ಯ. ಆಡಳಿತದ ವಿರೋಧಿ ಅಲೆ ಎದ್ದಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡ ವೆಂಕಟೇಶ ನಾರಾಯಣಿ ಮಾತನಾಡಿದರು. ಅಶೋಕ ಮರೆಣ್ಣನವರ, ಸುಭಾಸ ಬೆಂಗಳೂರ, ಮಲ್ಲೇಶಪ್ಪ ಕಡಕೋಳ, ರಾಜು ಹೊಸಕೇರಿ, ಶೇಖಪ್ಪ ಕಳ್ಳಿಮನಿ, ಶಿವಬಸವ ಚೌಶೆಟ್ಟಿ ಇದ್ದರು.