ಕೊಟ್ಟೂರು: ಪಶ್ಚಿಮದಲ್ಲಿ ಸೂರ್ಯ ಅಸ್ತಂಗತನಾಗುವ ಸಮಯಕ್ಕೆ ಅನುಗುಣವಾಗಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವು ಲಕ್ಷಾಂತರ ಜನಸಾಗರದ ಮಧ್ಯೆ ಗುರುವಾರ ಸಂಜೆ ೫.೩೨ಕ್ಕೆ ಮೂಲ ನಕ್ಷತ್ರದ ಸಮಯದಲ್ಲಿ ವಿಜೃಂಭಣೆಯಿಂದ ಜರುಗಿತು.
ನಂತರ ಶ್ರೀಸ್ವಾಮಿಯನ್ನು ರಥದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಶ್ರೀಸ್ವಾಮಿಯನ್ನು ರಥದ ಮೇಲೆ ಕುಳ್ಳಿರಿಸಲು ಪೂಜಾಕರ್ತರ ಬಳಗದವರು ಹೊತ್ತೊಯ್ದು ರಥದಲ್ಲಿ ಆಸೀನಪಡಿಸಿದರು. ಸಂಜೆ ಮೂಲ ನಕ್ಷತ್ರದ ಸಮಯವಾದ ೫.೩೨ಕ್ಕೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ದೊರಕಿತು. ಈ ಪ್ರಕ್ರಿಯೆ ನಡೆಯುತ್ತಿದ್ದಂತೆಯೇ ನೆರೆದಿದ್ದ ಲಕ್ಷಾಂತರ ಭಕ್ತರು ಏಕ ಸ್ವರದಿಂದ ಕೊಟ್ಟೂರು ದೊರೆಯೇ ನಿನಗಾರು ಸರಿಯೇ ಎಂಬ ಮತ್ತಿತರ ಜಯಘೋಷಗಳನ್ನು ಕೂಗುತ್ತಾ ನಮಿಸಿ ರಥವನ್ನು ಎಳೆದರು.
ಕೆಲ ನಿಮಿಷದಲ್ಲಿ ರಥದ ಮಿಣಿ (ಹಗ್ಗ) ಕಟ್ಟಾದ ಹಿನ್ನೆಲೆಯಲ್ಲಿ ಮತ್ತೆ ಮಿಣಿಯನ್ನು ಕಟ್ಟಿ ಭಕ್ತರು ಎಳೆದೊಯ್ಯಲು ಮುಂದಾದರು.ಆಕರ್ಷಕ ಸಮಾಳ, ನಂದಿಕೋಲು ಕುಣಿತ, ಮತ್ತಿತರ ವಾದ್ಯಗಳ ವಿನಾದಕ್ಕೆ ಅನುಗುಣವಾಗಿ ಭಕ್ತರು ಕುಣಿದು ಸಂಭ್ರಮಿಸಿದರು. ರಥ ರಾಜ ಗಾಂಭೀರ್ಯದಿಂದ ಪಾದಗಟ್ಟೆವರೆಗೂ ಸಾಗಿ ಪುನಃ ವಾಪಸ್ ತೇರು ಗಡ್ಡೆಯ ಬಳಿಯ ನಿಗದಿತ ಸ್ಥಳದಲ್ಲಿ ಸಂಜೆ ೭.೧೫ ಕ್ಕೆ ನಿಲುಗಡೆಗೊಂಡಿತು. ರಥದಲ್ಲಿ ಕ್ರಿಯಾಮೂರ್ತಿ ಪ್ರಕಾಶ ಕೊಟ್ಟೂರು ದೇವರು ಮತ್ತಿತರರು ಇದ್ದರು.
ರಥೋತ್ಸವ ಜರುಗುವ ಸಮಯದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮತ್ತಿತರರು ಹಾಜರಿದ್ದರು.