ಕೊಪ್ಪಳ: ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಂಡಿರುವ ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಯಲಬುರ್ಗಾದಲ್ಲಿ ನ್ಯಾಯಾಲಯ ಸಂಕೀರ್ಣ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ. ಬಿಸಿಎಂ ಇಲಾಖೆಯ 2023-24ನೇ ಸಾಲಿನಲ್ಲಿ ಮಂಜೂರಾದ ಮೂರು ಕಾಮಗಾರಿಗಳು ಹಾಗೂ ಕೊಪ್ಪಳ ತಾಲೂಕಿನ ಮೂರು ದೇವಸ್ಥಾನಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಯಲಬುರ್ಗಾದಲ್ಲಿ ನೂತನ ತಾಲೂಕು ಸೌಧ ನಿರ್ಮಾಣಕ್ಕೆ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕುಷ್ಟಗಿಯಿಂದ ತಾವರಗೇರಾ ಮಾರ್ಗವಾಗಿ ಲಿಂಗಸೂರು ಹಾಗೂ ಗಜೇಂದ್ರಗಡ ಮಾರ್ಗವಾಗಿ ರೋಣ ಸಂಪರ್ಕಿಸುವ ರಸ್ತೆಗಳ ದುರಸ್ತಿ ಸೇರಿದಂತೆ ವಿವಿಧ ತಾಲೂಕು ಸಂಪರ್ಕ ರಸ್ತೆಗಳ ಕಾಮಗಾರಿಗಳ ಬಗ್ಗೆಯೂ ಚರ್ಚಿಸಲಾಯಿತು. ಗಂಗಾವತಿ-ಕನಕಗಿರಿ, ಯಲಬುರ್ಗಾ-ಕನಕಗಿರಿ ಹಾಗೂ ಕಾರಟಗಿ-ಕನಕಗಿರಿ ರಸ್ತೆ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ರಸ್ತೆ ದುರಸ್ತಿಗೆ ಸಚಿವರ ಸಲಹೆ: ಕೆಕೆಆರ್‌ಡಿಬಿ ಹಾಗೂ ಲೋಕೋಪಯೋಗಿ ಇಲಾಖೆಯ ವಿವಿಧ ಅನುದಾನಗಳಲ್ಲಿ ಕನಕಗಿರಿ, ಕಾರಟಗಿ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು ಮತ್ತು ಕೊಪ್ಪಳ ತಾಲೂಕುಗಳಲ್ಲಿ ಅಗತ್ಯವಿರುವ ಕಡೆ ರಸ್ತೆ ದುರಸ್ತಿ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರ ಬೇಡಿಕೆಯಂತೆ ಕನಕಗಿರಿ-ಮುಸಲಾಪುರ ಸಂಪರ್ಕ ರಸ್ತೆ ಸೇರಿದಂತೆ ಇತರ ರಸ್ತೆಗಳ ದುರಸ್ತಿ ಪ್ರಸ್ತಾವನೆಯನ್ನು ಕೂಡಲೇ ಸಿದ್ಧಪಡಿಸುವಂತೆ ಸಚಿವ ಶಿವರಾಜ ತಂಗಡಗಿ ಸಲಹೆ ನೀಡಿದರು.