ಶಿಕ್ಷಣದ ಮೂಲಕ ಸಮಾಜದ ಅಜ್ಞಾನ, ಅಸಮಾನತೆ ಮತ್ತು ಹಿಂದುಳಿದ ಪರಿಸ್ಥಿತಿಯನ್ನು ನಿವಾರಿಸಿ ಜ್ಞಾನದ ಬೆಳಕನ್ನು ಎಲ್ಲೆಡೆ ಪಸರಿಸಬೇಕೆಂಬ ಮಹೋನ್ನತ ಸಂಕಲ್ಪದೊಂದಿಗೆ ಆರಂಭಗೊಂಡ ಕೆ.ಎಲ್.ಇ. ಸಂಸ್ಥೆಯು ಇಂದು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ದೇಶದ ಗಮನ ಸೆಳೆದ ಮಹತ್ವದ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಹಾವೇರಿ: ಶಿಕ್ಷಣದ ಮೂಲಕ ಸಮಾಜದ ಅಜ್ಞಾನ, ಅಸಮಾನತೆ ಮತ್ತು ಹಿಂದುಳಿದ ಪರಿಸ್ಥಿತಿಯನ್ನು ನಿವಾರಿಸಿ ಜ್ಞಾನದ ಬೆಳಕನ್ನು ಎಲ್ಲೆಡೆ ಪಸರಿಸಬೇಕೆಂಬ ಮಹೋನ್ನತ ಸಂಕಲ್ಪದೊಂದಿಗೆ ಆರಂಭಗೊಂಡ ಕೆ.ಎಲ್.ಇ. ಸಂಸ್ಥೆಯು ಇಂದು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ದೇಶದ ಗಮನ ಸೆಳೆದ ಮಹತ್ವದ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಂಸ್ಥೆಯ ಈ ಅಭೂತಪೂರ್ವ ಬೆಳವಣಿಗೆಯ ಹಿಂದೆ ಸಂಸ್ಥಾಪಕ ಸಪ್ತರ್ಷಿಗಳ ತ್ಯಾಗ, ದಾನಿಗಳ ಔದಾರ್ಯ, ಶಿಕ್ಷಣಪ್ರೇಮಿಗಳ ಸಹಕಾರ, ದೂರದೃಷ್ಟಿಯ ನಾಯಕತ್ವದ ಸುದೀರ್ಘ ಇತಿಹಾಸವಿದೆ ಎಂದು ಧಾರವಾಡದ ಖ್ಯಾತ ಅಂತಾರಾಷ್ಟ್ರೀಯ ಹಿಂದೂಸ್ಥಾನಿ ಗಾಯಕ ಡಾ. ಮೃತ್ಯುಂಜಯ ಶೆಟ್ಟರ್ ಹೇಳಿದರು.
ನಗರದ ಗುದ್ಲೆಪ್ಪ ಹಳ್ಳಿಕೇರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಕೆಎಲ್ಇ ಸಂಸ್ಥೆಯ ೧೧೧ನೇ ಸಂಸ್ಥಾಪಕರ ದಿನಾಚರಣೆಯಂದು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕೆಎಲ್ಇ ಸಂಸ್ಥೆಯ ಶತಮಾನದ ಶೈಕ್ಷಣಿಕ ಪಯಣವು ಕೇವಲ ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯ ಕಥೆಯಲ್ಲ; ಅದು ಶಿಕ್ಷಣದ ಮೂಲಕ ಸಮಾಜವನ್ನು ಕಟ್ಟುವ ಮಹತ್ಕಾರ್ಯದ ಯಶೋಗಾಥೆಯಾಗಿದೆ. ಸಂಸ್ಥಾಪಕರು ಅಂದು ಕಂಡ ಕನಸು, ಅವರು ಹಾಕಿಕೊಟ್ಟ ಆದರ್ಶ ಮತ್ತು ಸೇವಾ ಮನೋಭಾವ ಇಂದು ಬೃಹತ್ ಶೈಕ್ಷಣಿಕ ಪರಂಪರೆಯಾಗಿ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳ ಪೋಷಣೆಯೂ ಸಮಾಜದ ಪ್ರಗತಿಗೆ ಅಗತ್ಯವಾಗಿದ್ದು, ಇಂತಹ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ ಎಂದರು.೧೯೧೬ರ ನ. ೧೩ರಂದು ಬೆಳಗಾವಿಯಲ್ಲಿ ಒಂದು ಆಂಗ್ಲೋ-ವೆರ್ನಾಕ್ಯುಲರ್ ಶಾಲೆಯ ಸ್ಥಾಪನೆಯೊಂದಿಗೆ ಆರಂಭವಾದ ಈ ಶೈಕ್ಷಣಿಕ ಆಂದೋಲನದ ಹಿಂದೆ ಉತ್ತರ ಕರ್ನಾಟಕದ ಗ್ರಾಮೀಣ ಜನರಿಗೆ ಶಿಕ್ಷಣ ದೊರಕಿಸಬೇಕೆಂಬ ಉದಾತ್ತ ಆಶಯವಿತ್ತು. ಆ ಕಾಲದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಜನಸಮುದಾಯಕ್ಕೆ ಜ್ಞಾನದ ಬಾಗಿಲು ತೆರೆಯಬೇಕೆಂಬ ಉದ್ದೇಶದಿಂದ ದಾನಿಗಳ ಸಹಕಾರಗಳೊಂದಿಗೆ ಸಪ್ತರ್ಷಿಗಳು ತಮ್ಮ ಬದುಕನ್ನೇ ಶಿಕ್ಷಣ ಸೇವೆಗೆ ಸಮರ್ಪಿಸಿಕೊಂಡಿದ್ದರು. ಅವರ ನಿಸ್ವಾರ್ಥ ಪರಿಶ್ರಮ, ಸಂಕಲ್ಪಶಕ್ತಿ ಮತ್ತು ತ್ಯಾಗದ ಫಲವಾಗಿ ಸಣ್ಣದಾಗಿ ಆರಂಭಗೊಂಡ ಸಂಸ್ಥೆ ಇಂದು ಶಿಕ್ಷಣ, ವೈದ್ಯಕೀಯ, ತಾಂತ್ರಿಕ, ಕೃಷಿ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದರು. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಎಸ್. ಎಲ್. ಬಾಲೇಹೊಸೂರ ಅವರು ಕೆಎಲ್ಇ ಸಂಸ್ಥೆಯ ಸ್ಥಾಪನೆಯ ಹಿನ್ನೆಲೆ, ಸಪ್ತರ್ಷಿಗಳ ದೂರದೃಷ್ಟಿ ಹಾಗೂ ಸಂಸ್ಥೆಯ ಬೆಳವಣಿಗೆಯ ವಿವಿಧ ಮಜಲುಗಳನ್ನು ವಿವರಿಸಿದರು. ವೇದಿಕೆಯಲ್ಲಿ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಸಿ. ಬಿ. ಹಿರೇಮಠ, ಜೆ.ಎಸ್. ಅರಣಿ, ಬಸವರಾಜ ಮಾಸೂರ ಹಾಗೂ ಬಿಸಿಎ ಪ್ರಾಚಾರ್ಯ ಪ್ರೊ. ವೆಂಕಟೇಶ ಕಲಾಲ, ನಿವೃತ್ತ ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರು ಉಪಸ್ಥಿತರಿದ್ದರು. ಪವಿತ್ರ ಕಟ್ಟೀಮನಿ ಪ್ರಾರ್ಥನೆ ಹಾಡಿದರು. ಪದವಿ ಪ್ರಾಚಾರ್ಯ ಡಾ. ಸಿದ್ಧೇಶ್ ಎಂ. ಬಿ. ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆಯ ಕಾರ್ಯಾಧ್ಯಕ್ಷೆ ಡಾ. ಎಂ. ಪಿ. ಕಣವಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಸಿದ್ಧೇಶ್ವರ ಹುಣಸೀಕಟ್ಟಿಮಠ ನಿರ್ವಹಿಸಿದರು. ಪದವಿಪೂರ್ವ ಪ್ರಾಚಾರ್ಯ ಪ್ರೊ. ವೇಣುಗೋಪಾಲ ಎಚ್. ಆರ್. ವಂದಿಸಿದರು. ಕಾರ್ಯಕ್ರಮದ ವಿಶೇಷವಾಗಿ ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳು ಹಾಗೂ ಸಂಸ್ಥೆಯ ಬೆಳವಣಿಗೆಗೆ ಉದಾರವಾಗಿ ದೇಣಿಗೆ ನೀಡಿ ಸಹಕರಿಸಿದ ದಾನಿಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವಪೂರ್ವಕವಾಗಿ ಪೂಜೆ ನೆರವೇರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.