ತಂಡವಾಗಿ ಕೆಲಸ ಮಾಡಿ ಪ್ರಾಕೃತಿಕ ವಿಕೋಪ ಎದುರಿಸಿ: ಅಧಿಕಾರಿಗಳಿಗೆ ಖಾದರ್‌ ಸೂಚನೆ

KannadaprabhaNewsNetwork |  
Published : Jul 06, 2026, 03:00 AM IST
ಸಚಿವ ಯು.ಟಿ.ಖಾದರ್‌ ನೇತೃತ್ವದಲ್ಲಿ ವಿಪತ್ತು ನಿರ್ವಹಣೆ ಸಭೆ ನಡೆಯಿತು | Kannada Prabha

ಸಾರಾಂಶ

ಪ್ರಕೃತಿ ವಿಕೋಪ ಯಾವಾಗ ಸಂಭವಿಸುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಅಸಾಧ್ಯ. ಮಳೆಗಾಲದ ಮುಂದಿನ ಮೂರು ತಿಂಗಳು ಇಲಾಖೆಗಳು, ಅಧಿಕಾರಿಗಳು ತಂಡವಾಗಿ ಕೆಲಸ ಮಾಡಿ ಪ್ರಾಕೃತಿಕ ವಿಕೋಪ ಎದುರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಹೇಳಿದರು.

ಮಂಗಳೂರು: ಪ್ರಕೃತಿ ವಿಕೋಪ ಯಾವಾಗ ಸಂಭವಿಸುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಅಸಾಧ್ಯ. ಮಳೆಗಾಲದ ಮುಂದಿನ ಮೂರು ತಿಂಗಳು ಇಲಾಖೆಗಳು, ಅಧಿಕಾರಿಗಳು ತಂಡವಾಗಿ ಕೆಲಸ ಮಾಡಿ ಪ್ರಾಕೃತಿಕ ವಿಕೋಪ ಎದುರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಹೇಳಿದರು.ಅವರು ಭಾನುವಾರ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ನಿರ್ವಹಣೆ ಬಗ್ಗೆ ಸಭೆ ನಡೆಸಿ ಮಾತನಾಡಿದರು.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು 24 ಗಂಟೆಯೂ ಸದಾ ಎಚ್ಚರವಾಗಿದ್ದು, 24 ಗಂಟೆಯೂ ಬರುವ ಪೋನ್‌ ಕರೆಗಳನ್ನು ಸ್ವೀಕರಿಸಿ ಸ್ಪಂದಿಸಬೇಕು. ಸ್ಥಳೀಯ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಸ್ಥಳೀಯ ವಿಎ, ಪಿಡಿಒ, ಸ್ಥಳೀಯ ಆಡಳಿತ ತಕ್ಷಣ ಘಟನಾ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಹಾಗೂ ಹಾನಿಯಾಗಿ ತಕ್ಷಣದ ತುರ್ತು ಪರಿಹಾರ ವಿತರಿಸಬೇಕು. ಮೆಸ್ಕಾಂ, ತೋಟಗಾರಿಕೆ, ಕೃಷಿ ಇಲಾಖೆ, ಹೆದ್ದಾರಿ ಇಲಾಖೆ, ಎಂಜೀನಿಯರಿಂಗ್‌ ವಿಭಾಗ ಇಲಾಖೆ, ನಗರಾಭಿವೃದ್ಧಿ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ತಂಡವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.ಅನುದಾನದ ಕೊರತೆ ಇಲ್ಲ:ದ.ಕ.ಜಿಲ್ಲಾಧಿಕಾರಿ ದರ್ಶನ್‌ ಮಾತನಾಡಿ, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1.5 ಕೋಟಿ ರು. ಇದೆ. ತಾಲೂಕುಗಳಿಗೆ ಒಟ್ಟು 3.74 ಕೋಟಿ ರು. ಹಂಚಲಾಗಿದೆ ಎಂದು ಮಾಹಿತಿ ನೀಡಿದರು. ಯು.ಟಿ.ಖಾದರ್‌ ಮಾತನಾಡಿ, ಪ್ರಾಕೃತಿಕ ವಿಕೋಪದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ, ತುರ್ತು ಪರಿಹಾರ ಕಾಮಗಾರಿಗಳನ್ನು ತಕ್ಷಣ ಮಾಡಲು ಅಧಿಕಾರಿಗಳು ಕ್ರಮಕೈಗೊಳ್ಳಲಾಗುವುದು. ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಅನುದಾನದ ಬೇಡಿಕೆ ಇದ್ದಲ್ಲಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಜನವರಿಯಿಂದ ಈವರಗೆ ಶೇ.41 ಮಳೆಯಾಗಿದೆ, ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಈ ಬಾರಿ ಮಳೆ ತಡವಾಗಿದ್ದರಿಂದ ಭತ್ತದ ನಾಟಿಗೆ ಸಮಸ್ಯೆ ಆಗಿದೆ. ತಗ್ಗು ಪ್ರದೇಶದ ಗದ್ದೆಯಲ್ಲಿ ಸದ್ಯ ನೀರಿನ ಪ್ರಮಾಣ ಇದ್ದು, ಎತ್ತರದ ಗದ್ದೆಗಳಲ್ಲಿ ನೀರು ಇಲ್ಲದಂತಾಗಿದೆ. ನಮ್ಮಲ್ಲಿ ಬೀಜಗಳು ಸ್ಟಾಕ್‌ ಇದೆ ಎಂದು ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮಳೆಮಾಪನ ಸುಸ್ಥಿಯಲ್ಲಿರಲಿ:

ಮಳೆಮಾಪನ ಸುಸ್ಥಿತಿಯಲ್ಲಿ ಇಲ್ಲದ ಪರಿಣಾಮ ಕಳೆದ ವರ್ಷ ಬೆಳೆವಿಮೆ ನ್ಯಾಯವಾಗಿ ಸಿಕ್ಕಿಲ್ಲ. ಆದ್ದರಿಂದ ರೈತರು ಸಂಕಷ್ಟ ಎದುರಿಸಿದ್ದಾರೆ. ಈ ಬಾರಿಯಾದರೂ ಮಳೆಮಾಪಕಗಳ ದುರಸ್ತಿ ನಡೆಸಲಾಗಿದೆಯಾ ಎಂದು ಶಾಸಕರಾದ ಭಾಗೀರಥಿ ಮುರುಳ್ಯ, ಕಿಶೋರ್‌ ಕುಮಾರ್‌, ಐವನ್‌ ಡಿಸೋಜಾ ಪ್ರಶ್ನಿಸಿದರು. ಜಿಲ್ಲೆಯಲ್ಲಿ 274 ಘಟಕಗಳಿದ್ದು, 108 ಘಟಕಗಳು ಕೆಲಸ ಮಾಡುತ್ತಿದ್ದು, 166 ಘಟಕದ ದುರಸ್ತಿಗೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಒಂದು ಗ್ರಾಮದಲ್ಲಿ ಮಳೆ ಮಾಪಕ ಇಲ್ಲ ಅಥವಾ ಸರಿ ಇಲ್ಲ ಎಂದಾದರೆ ಪಕ್ಕದ ಗ್ರಾಮದ ಮಳೆಮಾಪಕದ ವರದಿ ಪಡೆಯುವ ಬಗ್ಗೆ ಚರ್ಚೆ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಎಪ್ರಿಲ್‌ನಲ್ಲೇ ಮಳೆ ಮಾಪಕಗಳನ್ನು ದುರಸ್ತಿ ಮಾಡಬೇಕಾಗಿದ್ದರೂ ಇನ್ನೂ ಮಾಡಿಲ್ಲ ಎಂದಾದರೇ, ಮಳೆ ಮುಗಿದ ಬಳಿಕ ದುರಸ್ತಿ ಮಾಡುತ್ತೀರಾ ಎಂದು ಸುಳ್ಯ ಶಾಸಕರು ಪ್ರಶ್ನಿಸಿದರು. ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಹೆದ್ದಾರಿ ಜಂಕ್ಷನ್‌ಗಳಲ್ಲಿ ಸಮಸ್ಯೆಗೆ ಅಸಮಾಧಾನ: ನಗರದ ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಾದ ಪಂಪ್‌ವೆಲ್‌, ನಂತೂರು, ಕೂಳೂರು, ತೊಕ್ಕೊಟ್ಟು ಮೊದಲಾದ ಕಡೆಗಳಲ್ಲಿ ಮಳೆಗಾಲದಲ್ಲಿ ನಿತ್ಯ ಸಮಸ್ಯೆಗಳಾಗುತ್ತಿವೆ. ಇದಕ್ಕೆ ಪರಿಹಾರ ಯಾಕೆ ಮಾಡಿಲ್ಲ ಎಂದು ಸಚಿವ ಯು.ಟಿ.ಖಾದರ್‌ ಪ್ರಶ್ನಿಸಿದರು. ಶಾಸಕರಾದ ವೇದವ್ಯಾಸ್‌ ಕಾಮತ್‌, ಐವನ್‌ ಡಿಸೋಜಾ ಮಾತನಾಡಿ ನಗರದ ಹೆದ್ದಾರಿಗಳಲ್ಲಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ನಂತೂರಿನಲ್ಲಿ ಕಟ್ಟಡವೊಂದು ಹೆದ್ದಾರಿ ಬದಿ ಅಪಾಯ ಸ್ಥಿತಿಯಲ್ಲಿದೆ. ಅಪಾಯ ಸಂಭವಿಸುವ ಮೊದಲು ಕ್ರಮ ವಹಿಸುವಂತೆ ಒತ್ತಾಯಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೆಸ್ಕಾಂ, ಲೋಕೋಪಯೋಗಿ ಇಲಾಖೆ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಲು ನಿರ್ದೇಶನ ನೀಡಲಾಯಿತು.

ರಸ್ತೆ ಬದಿಗಳ ಅಪಾಯಕಾರಿ ಮರಗಳ ತೆರವು ಮಾಡುವಂತೆ ಆಗ್ರಹಿಸಲಾಯಿತು. ಮರಗಳನ್ನು ಅರಣ್ಯ ಇಲಾಖೆ ತೆರವು ಮಾಡಿಸಬೇಕು ಎಂದು ಸಚಿವರು ಸೂಚಿಸಿದರು. ಸಂಭವನೀಯ ಭೂಕುಸಿತ, ನೆರೆ ಪ್ರದೇಶಗಳಲ್ಲಿ ಅಧಿಕಾರಿಗಳು, ಸ್ಥಳೀಯಾಡಳಿ ನಿಗಾ ಇರಿಸಬೇಕು. ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಬೇಕು. ಸ್ಥಳಾಂತರ ಮಾಡುವ ಅನಿವಾರ್ಯತೆ ಇದ್ದಲ್ಲಿ ಸ್ಥಳಾಂತರ ಮಾಡಿಸಿ, ನೋಟೀಸ್‌ ನೀಡಿ ಎಂದು ಸಚಿವರು ಸೂಚಿಸಿದರು. ಮನೆ ಇರುವ ಕಡೆಗಳಲ್ಲಿ ಭೂ ಕುಸಿತ, ಧರೆ ಕುಸಿತ ಆಗುವಲ್ಲಿ ಸರ್ಕಾರದಿಂದ ತಡೆಗೋಡೆ ನಿರ್ಮಿಸಲು ವಿಶೇಷ ಅನುದಾನ ತರಿಸಬೇಕು ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಪ್ರಸ್ತಾಪಿಸಿದರು.

ಸುಬ್ರಹ್ಮಣ್ಯಕ್ಕೆ ವೈದ್ಯರ ನೀಡಿ:

ಕುಕ್ಕೆ ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 24 ಗಂಟೆಯೂ ವೈದ್ಯರ ಬೇಡಿಕೆ ಇದ್ದು, ವೈದ್ಯರ ನಿಯೋಜಿಸುವಂತೆ ಶಾಸಕಿ ಭಾಗೀರಥಿ ಮುರುಳ್ಯ ಪ್ರಸ್ತಾಪಿಸಿದರು. ಅದು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು, ಅಲ್ಲಿ ಹಗಲು ಕರ್ತವ್ಯ ನಿರ್ವಹಿಸಲು ವೈದ್ಯರು ಇದ್ದಾರೆ ಎಂದು ಡಿಎಚ್‌ಒ ಡಾ.ತಿಮ್ಮಯ್ಯ ತಿಳಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಜೊತೆ ಆರೋಗ್ಯ ಸಚಿವರು ಸಭೆ ನಡೆಸಿ ದೇವಸ್ಥಾನದಿಂದ ವೈದ್ಯರ ನೇಮಕ ಮಾಡಿ, ಸಮಸ್ಯೆ ಬಗೆಹರಿಸುವಂತೆ ಶಾಸಕ ವೇದವ್ಯಾಸ್‌ ಕಾಮತ್‌ ಸಲಹೆ ನೀಡಿದರು. ಶಿಕ್ಷಣ ಇಲಾಖೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಪೊಲೀಸ್‌ ಇಲಾಖೆ, ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಇಲಾಖೆ, ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಮತ್ತಿತರ ಇಲಾಖೆಗಳ ಅಹವಾಲುಗಳನ್ನು ಸಚಿವರು ಆಲಿಸಿದರು.

ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ., ಶಾಸಕರಾದ ವೇದವ್ಯಾಸ್‌ ಕಾಮತ್‌, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜಾ, ಮಂಜುನಾಥ ಭಂಡಾರಿ, ಕಿಶೋರ್‌ ಕುಮಾರ್‌, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಅರುಣ್‌, ಡಿಎಫ್‌ಒ ರವಿಶಂಕರ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಫೂರ್‌, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌ ಹಾಗೂ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗೆ ರೈತ ಸಂತಸ, ನಗರದಲ್ಲಿ ಅವಾಂತರ
ಮತದಾರರ ಪಟ್ಟಿವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾ