ಮಣಿಪಾಲ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ. ಖಾದರ್ ಫರೀದ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜಿಪಂ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಆಯೋಜಿಸಲಾಗಿತ್ತು.ಸಭೆಯಲ್ಲಿ ಈ ಮಳೆಗಾಲದ ಸಂದರ್ಭದಲ್ಲಿ ಹೆಜಮಾಡಿ, ನಡಿಪಟ್ಟ, ಕಾಡಿಪಟ್ಟಿ, ಮೂಳೂರು, ತೊಟ್ಟಂ, ಲೈಟ್ ಹೌಸ್ ಮುಂತಾದ ಕಡೆಗಳಲ್ಲಿ ಸಂಭಾವ್ಯ ಕಡಲುಕೊರೆತವನ್ನು ತಪ್ಪಿಸಲು ಅಗತ್ಯ ಕ್ರಮಗಳ ಬಗ್ಗೆ ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ನಾದುರಸ್ತಿ ಸ್ಥಿತಿಯಲ್ಲಿರುವ ಗ್ರಾಮೀಣ ಭಾಗದ ರಸ್ತೆಗಳಿಂದ ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಪ್ರಾಕೃತಿಕ ವಿಕೋಪ ನಿಧಿಯಡಿ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿದರು.
ತೀವ್ರ ಸರಹದ ವೈದ್ಯಕೀಯ ಪ್ರಕರಣಗಳಲ್ಲಿ ಸರ್ಕಾರಿ ಆರೋಗ್ಯ ಸೌಲಭ್ಯ ಪಡೆಯಲು ಬಿ.ಪಿ.ಎಲ್. ಪಡಿತರ ಚೀಟಿಯ ಅಗತ್ಯವಿದೆ. ಆದರೇ ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರ ಹುದ್ದೆ ತೆರವಾಗಿದ್ದು, ಸಾರ್ವಜನಿಕರಿಗೆ ಸಕಾಲದಲ್ಲಿ ಬಿ.ಪಿ.ಎಲ್. ಚೀಟಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆಯೂ ಶಾಸಕರು ಸಚಿವರ ಗಮನ ಸೆಳೆದರು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾಪು ಶಾಸಕ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.