ಕಾರ್ಕಳದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ದಿವಂಗತ ಎಚ್. ಗೋಪಾಲ ಭಂಡಾರಿ ಅವರ 7ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ದೇವಾಡಿಗ ಭವನದಲ್ಲಿ ರಕ್ತದಾನ ಶಿಬಿರ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಕಳ: ಕಾರ್ಕಳದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ದಿವಂಗತ ಎಚ್. ಗೋಪಾಲ ಭಂಡಾರಿ ಅವರ 7ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ದೇವಾಡಿಗ ಭವನದಲ್ಲಿ ರಕ್ತದಾನ ಶಿಬಿರ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮ ಶನಿವಾರ ನಡೆಯಿತು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಗೋಪಾಲ ಭಂಡಾರಿ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಭಾಗವಹಿಸಿ ಒಟ್ಟು 56 ಯೂನಿಟ್ ರಕ್ತದಾನ ಮಾಡಿದರು. ಇದೇ ಸಂದರ್ಭ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಶಿಕ್ಷಣ ಧನ ಸಹಾಯ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಗೋಪಾಲ ಭಂಡಾರಿ ಅವರು ಎರಡು ಅವಧಿಗೆ ಶಾಸಕರಾಗಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಶುದ್ಧಹಸ್ತ ಆಡಳಿತ ನೀಡಿದವರು. ಅವರ ಆದರ್ಶಗಳು ನಮಗೆ ಸದಾ ಪ್ರೇರಣೆಯಾಗಿವೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಗೋಪಾಲ ಭಂಡಾರಿ ಅವರು ತೋರಿಸಿದ ಆದರ್ಶದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಅವರು ಗೋಪಾಲ ಭಂಡಾರಿ ಅವರ ಆಡಳಿತ ನೈಪುಣ್ಯವನ್ನು ಸ್ಮರಿಸಿದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಮಾತನಾಡಿ, ಗೋಪಾಲ ಭಂಡಾರಿ ಅವರ ಆದರ್ಶಗಳನ್ನು ಕಾರ್ಕಳದ ಮೂಲೆ ಮೂಲೆಗೂ ತಲುಪಿಸುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದರು.
ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್ ನುಡಿನಮನ ಸಲ್ಲಿಸಿದರು.ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶೇಖರ ಮಡಿವಾಳ, ಸಿರಿಯಣ್ಣ ಶೆಟ್ಟಿ, ಸುಭಿತ್ ಎನ್.ಆರ್., ಅಜಿತ್ ಹೆಗ್ಡೆ (ಮಾಳ), ಕೃಷ್ಣ ಶೆಟ್ಟಿ (ನಲ್ಲೂರು), ಸುನಿಲ್ ಭಂಡಾರಿ, ಉದಯ ಶೆಟ್ಟಿ (ಕುಕುಂದೂರು), ಅನಿಲ್ ಪೂಜಾರಿ (ನೆಲ್ಲಿಗುಡ್ಡೆ), ಅಶ್ಫಾಕ್ ಅಹ್ಮದ್, ಶೇಖ್ ಶಬೀರ್ (ಮಿಯ್ಯಾರು), ಭಾನು ಬಾಸ್ಕರ ಪೂಜಾರಿ, ಅನಿತಾ ಡಿಸೋಜ, ಸುಧಾಕರ ಶೆಟ್ಟಿ (ಮುಡಾರು), ರೀನಾ ಜೂಲಿಯೆಟ್ ಡಿಸೋಜ, ರಾಜೇಂದ್ರ ದೇವಾಡಿಗ, ಸೂರಜ್ ಶೆಟ್ಟಿ (ನಕ್ರೆ), ಶೋಭಾ ಪ್ರಸಾದ್ ಉಪಸ್ಥಿತರಿದ್ದರು.ಪ್ರಭಾಕರ ಬಂಗೇರ ಸ್ವಾಗತಿಸಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೊ ನಿರೂಪಿಸಿದರು.