ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿದಿದ್ದು, ನದಿಗಳು, ಹೊಳೆ ಹಾಗೂ ಜಲಪಾತಗಳಲ್ಲಿ ನೀರಿನ ಹರಿವು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ಈ ನಡುವೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಕಳ ಹಾಗೂ ಹೆಬ್ರಿ ಭಾಗದ ಜಲಪಾತಗಳತ್ತ ಆಗಮಿಸುತ್ತಿದ್ದಾರೆ.

ರಾಂ ಅಜೆಕಾರು ಕಾರ್ಕಳ

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿದಿದ್ದು, ನದಿಗಳು, ಹೊಳೆ ಹಾಗೂ ಜಲಪಾತಗಳಲ್ಲಿ ನೀರಿನ ಹರಿವು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ಈ ನಡುವೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಕಳ ಹಾಗೂ ಹೆಬ್ರಿ ಭಾಗದ ಜಲಪಾತಗಳತ್ತ ಆಗಮಿಸುತ್ತಿದ್ದಾರೆ. ಆದರೆ ಈ ಭಾಗದ ಜಲಪಾತದ ಸೊಬಗು ಎಷ್ಟು ಆಕರ್ಷಕವೋ, ಅಷ್ಟೇ ಅಪಾಯಕಾರಿಯಾಗಿರುವ ಕಾರಣ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಭಾರಿ‌ ಮಳೆ ಹಿನ್ನೆಲೆಯಲ್ಲಿ ಕೂಡ್ಲು ಜಲಪಾತಕ್ಕೆ ಪ್ರವೇಶ ಅವಕಾಶವನ್ನು ಮುಂದಿನ ಅದೇಶದವರೆಗೆ ನಿಷೇಧಿಸಲಾಗಿದೆ.ನೀರಿನ ಹರಿವು ಹೆಚ್ಚಳ: ಕಾರ್ಕಳ ತಾಲೂಕಿನ ಮಾಳ ದುರ್ಗಾ ಜಲಪಾತ, ಪರಪ್ಪಾಡಿ ಜಲಪಾತ, ಹುಕ್ರಟ್ಟೆ ಫಾಲ್ಸ್, ಅಬ್ಬಿ ಜಲಪಾತ ಹಾಗೂ ಹೆಬ್ರಿ ಭಾಗದ ಕಬ್ಬಿನಾಲೆ ಮತ್ತು ಮತ್ತಾವು ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಈ ಸ್ಥಳಗಳಲ್ಲಿ ನೀರಿನ ಮಟ್ಟ ಕ್ಷಣಾರ್ಧದಲ್ಲಿ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಬಂಡೆಗಳ ಮೇಲೆ ಏರುವುದು, ಸೆಲ್ಫಿ ಅಥವಾ ಫೋಟೋಗಾಗಿ ಅಪಾಯಕಾರಿ ಸ್ಥಳಗಳಿಗೆ ತೆರಳುವುದು, ನೀರಿನೊಳಗೆ ಇಳಿಯುವುದು ಹಾಗೂ ಸುರಕ್ಷತಾ ಸೂಚನೆ ನಿರ್ಲಕ್ಷಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿವಿಧ ಜಲಪಾತಗಳು ಮತ್ತು ನದಿ ತೀರಗಳಲ್ಲಿ ಸಂಭವಿಸಿರುವ ದುರಂತಗಳು ಇದಕ್ಕೆ ಸಾಕ್ಷಿಯಾಗಿವೆ. ಜುಲೈ 2025ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತಲಸಿ ಅಬ್ಬಿ ಜಲಪಾತದಲ್ಲಿ ಫೋಟೋ ತೆಗೆಯಲು ಪ್ರಯತ್ನಿಸಿದ ವೇಳೆ ಬೆಂಗಳೂರಿನ ಪ್ರವಾಸಿಗರೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಈ ಭಾರಿ ಹೆಬ್ರಿ ತಾಲೂಕಿನ‌ ನಾಡ್ಪಾಲು ಗ್ರಾಮದ ಕೂಡ್ಲು ಪಾಲ್ಸ್ ನಲ್ಲೂ ಪ್ರವಾಸಿಗರೊರ್ವರು ಮೃತಪಟ್ಟ ವರದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸುವುದನ್ನು ಈಗಾಗಲೇ ಅರಣ್ಯ ಇಲಾಖೆ ನಿರ್ಬಂಧಿಸಿದೆ. ಸುರಕ್ಷತಾ ಬೇಲಿಗಳನ್ನು ದಾಟುವುದು, ಎಚ್ಚರಿಕೆ ಫಲಕಗಳನ್ನು ನಿರ್ಲಕ್ಷಿಸುವುದು ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಸಾಹಸಕ್ಕೆ ಮುಂದಾಗುವುದು ಕಾನೂನುಬಾಹಿರವಾಗಿದ್ದು, ಜೀವಕ್ಕೂ ಅಪಾಯಕಾರಿಯಾಗಿದೆ.ಮಳೆಗಾಲದಲ್ಲಿ ಜಲಪಾತಗಳ ಸೌಂದರ್ಯ ಮನಸೆಳೆಯುವುದು ಸಹಜ. ಆದರೆ ಒಂದು ಕ್ಷಣದ ನಿರ್ಲಕ್ಷ್ಯ ಜೀವಿತಾವಧಿಯ ದುಃಖಕ್ಕೆ ಕಾರಣವಾಗಬಹುದು. ಆದ್ದರಿಂದ ಪ್ರವಾಸಿಗರು ಸುರಕ್ಷಿತ ಅಂತರದಿಂದಲೇ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ, ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ, ಅನಗತ್ಯ ಸಾಹಸದಿಂದ ದೂರವಿರುವ ಮೂಲಕ ತಮ್ಮ ಹಾಗೂ ಕುಟುಂಬದ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳು ಮತ್ತು ಸ್ಥಳೀಯರು ಮನವಿ ಮಾಡಿದ್ದಾರೆ.*ಭಾರಿ ಮಳೆಯಿಂದ ಜಲಪಾತಗಳು, ನದಿಗಳಲ್ಲಿ ನೀರಿನ ಹರಿವು ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ. ಸಾರ್ವಜನಿಕರು ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸಬಾರದು, ಸುರಕ್ಷತಾ ಬೇಲಿಗಳನ್ನು ದಾಟಬಾರದು ಹಾಗೂ ಸೆಲ್ಫಿ ಅಥವಾ ಸಾಹಸಕ್ಕಾಗಿ ಜೀವವನ್ನು ಪಣಕ್ಕಿಡಬಾರದು. ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. -ಜಿ.ಡಿ. ದಿನೇಶ್ ಸಹಾಯಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದಾಪುರ ಉಪ ವಿಭಾಗ ಕುದುರೆಮುಖ ವನ್ಯಜೀವಿ ವಿಭಾಗ