ಕನ್ನಡಪ್ರಭ ವಾರ್ತೆ ವಿಜಯಪುರ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಇವರ ಸೂಚನೆಯಂತೆ ವಿಜಯಪುರದಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳ ಆಲಮಟ್ಟಿ ಉದ್ಯಾನವನಕ್ಕೆ ನೂತನ ಸಾರಿಗೆಯನ್ನು ಆರಂಭಗೊಳಿಸಲಾಗಿದೆ. ಈ ಸಾರಿಗೆಯು ಪ್ರತಿದಿನ ಆರು ಸರತಿಯಲ್ಲಿ ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೋಗಿ ಬರಲಿದೆ. ಮೊದಲನೇ ಪಾಳಿ ಬೆಳಗ್ಗೆ 10 ಗಂಟೆಗೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಕೇಂದ್ರ ಬಸ್ ನಿಲ್ದಾಣದಿಂದ ಆರಂಭಗೊಳ್ಳಲಿದೆ. ಆಲಮಟ್ಟಿಯ ಉದ್ಯಾನವನದಿಂದ ಕೊನೆಯ ಬಸ್ ರಾತ್ರಿ 8.20ಕ್ಕೆ ಮರಳಿ ವಿಜಯಪುರಕ್ಕೆ ಬಸ್ ಆಗಮಿಸಲಿದೆ. ಬಳಿಕ ಮಾತನಾಡಿದ ಸಚಿವರು, ಪ್ರೇಕ್ಷಣೀಯ ಸ್ಥಳಗಳಿಗೆ ಹೊಸದಾಗಿ ತನ್ನ ಸಂಚಾರ ಆರಂಭಿಸಲಿರುವ ಈ ಬಸ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ವಿಜಯಪುರ ಮೂರನೇ ಘಟಕದ ವ್ಯವಸ್ಥಾಪಕ ಎಸ್.ಎಂ.ವಾಲೀಕಾರ, ಸಹಾಯಕ ಸಂಚಾರ ವ್ಯವಸ್ಥಾಪಕ ಜಾನಪ್ಪ ಹುಗ್ಗೆಣ್ಣನವರ, ಪ್ರವಾಸೋದ್ಯಮ ಇಲಾಖೆ ಅನೀಲಕುಮಾರ ಬಣಜಿಗೇರ, ಮುಖಂಡೆ ಮಹಾದೇವಿ ಗೋಕಾಕ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.