ಭಟ್ಕಳ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಕೊರತೆಯಾಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಸಭೆ ಮಾಡಿ, ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಬಗ್ಗೆ ಕೇಳಿ ಬಂದ ತಕ್ಷಣ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
ತಮ್ಮ ಗೃಹಕಚೇರಿಯಲ್ಲಿ ಶನಿವಾರ ಜನತಾ ದರ್ಶನದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ವರ್ಷದಿಂದ ಕುಡಿಯುವ ನೀರಿಗೆ ನನ್ನ ಕ್ಷೇತ್ರದಲ್ಲಿ ಯಾವುದೇ ತೊಂದರೆಯಾಗದೇ ಇರಲು ಶರಾವತಿ ನದಿಯಿಂದ ಮಾಗೋಡ ಬಳಿಯಲ್ಲಿ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿದ್ದು, ಇದು ಮಾಗೋಡಿನಿಂದ ಗೊರ್ಟೆ ತನಕ ನೀರು ಪೂರೈಸುವ ಯೋಜನೆಯಾಗಿದೆ. ಕಾಸರಕೋಡ, ಕೆಳಗಿನೂರಿಗೂ ಕೂಡ ಇದೇ ನೀರು ಪೂರೈಕೆಯಾಗುತ್ತದೆ. ಈಗಾಗಲೇ ₹೨೪೦ ಕೋಟಿ ಮಂಜೂರಿಯಾಗಿದೆ. ಟೆಂಡರ್ ಆಗಿ ಕೆಲಸ ಕೂಡ ಆರಂಭವಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ₹೩೭ ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಮಂಜೂರಿಯಾಗಿದ್ದರೆ, ಮಂಕಿ ಪಟ್ಟಣ ಪಂಚಾಯತಕ್ಕೆ ₹೧೦೬ ಕೋಟಿ ಟೆಂಡರ್ ಆಗಿದೆ ಎಂದರು.ಉಚಿತವಾಗಿ ನೀರನ್ನು ಕೊಡುವ ಕುರಿತು ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಯಾರೇ ಉಚಿತ ನೀರು ಕೊಡುವುದಿದ್ದರೆ ನಿರಂತರವಾಗಿ ಆ ಭಾಗದಲ್ಲಿ ಸಾಕಾಗುವಷ್ಟು ನೀರನ್ನು ಕೊಡಬೇಕು ಎಂದು ಹೇಳಿದರು.
ಕೆಲವು ದಿನಗಳ ಕಾಲ ನೀರು ಪೂರೈಸಿ ನಂತರ ನಿಲ್ಲಿಸಿದರೆ ಸರ್ಕಾರದ ನೀರು ಬರುವುದಿಲ್ಲ. ಖಾಸಗಿಯವರ ನೀರು ಬರುವುದಿಲ್ಲ ಎಂದಾಗಬಾರದು. ಕುಡಿಯುವ ನೀರು ಪೂರೈಕೆಗೆ ಯಾರೇ ಮುಂದೆ ಬಂದರೂ ಸ್ವಾಗತವಿದ್ದು, ಆ ಭಾಗಕ್ಕೆ ಬೇಕಾಗುವಷ್ಟು ನೀರು ಕೊಡಬೇಕು, ನಿರಂತರ ಕೊಡಬೇಕು ಎಂದರು.ಶಿರಾಲಿ ಭಾಗದ ರೈತರಿಗೆ ನೀರು ಕೊಡುವ ಉದ್ದೇಶದಿಂದ ಕಡವಿನಕಟ್ಟೆ ಏತ ನೀರಾವರಿಗೆ ₹೧೩ ಕೋಟಿಯ ಪೈಪ್‌ಲೈನ್ ಮಂಜೂರಿಯಾಗಿದೆ. ಈ ಹಿಂದೆ ಚಾನಲ್ ಮೂಲಕ ಬರುವ ನೀರನ್ನು ಪೈಪ್‌ಲೈನ್ ಮೂಲಕ ಪೂರೈಸುವ ಯೋಜನೆ ಇದೆ. ಎಲ್ಲಿ ನೀರು ಬೇಕೋ ಅಲ್ಲಿ ಪೈಪ್‌ಲೈನ್‌ನಿಂದಲೇ ನೀರು ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಅದೇರೀತಿ ಹೊನ್ನಾವರ ತಾಲೂಕಿನ ಕುದ್ರಗಿ ಗ್ರಾಪಂ ವ್ಯಾಪ್ತಿಯಲ್ಲೂ ₹೧೭ ಕೋಟಿ ಮಂಜೂರಿಯಾಗಿದೆ. ಮಂಕಿಯಿಂದ ಬೈಲೂರು ತನಕ ಏತ ನೀರಾವರಿಗೆ ₹೧೮೦೦ ಕೋಟಿ ಅಂದಾಜು ಪತ್ರ ತಯಾರಿಸಿದ್ದು, ಇದನ್ನು ಮಂಜೂರಿಗೆ ಕಳುಹಿಸಲಿದ್ದು ಮಂಜೂರಿಯಾಗುವ ಭರವಸೆ ಇದೆ. ಬೃಹತ್ ಈ ಯೋಜನೆ ಮಂಜೂರಿಯಾದರೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಶೇ.೧೦೦ ಪರಿಹಾರವಾಗಲಿದೆ ಎಂದರು.