ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಕೈಗೆತ್ತಿಕೊಳ್ಳಿ

KannadaprabhaNewsNetwork | Published : Apr 6, 2025 1:47 AM

ಸಾರಾಂಶ

ಸದ್ಯ ಕಾಮಗಾರಿ ನಡೆಯಲು ಸಂಚಾರ ನಿಯಂತ್ರಣ ಮಾಡುವ ಅಗತ್ಯವಿದೆ. ಹಾಗಾಗಿ ಕೆಲ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಕಾಮಗಾರಿ ನಡೆಸಬೇಕು

ಹುಬ್ಬಳ್ಳಿ: ಪ್ಲೈಓವರ್ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಚೆನ್ನಮ್ಮ ಸರ್ಕಲ್‌ನಿಂದ ಹೊಸೂರು ಹಾಗೂ ನವಲಗುಂದ ರಸ್ತೆ ಬಳಿಯ ಕಾಮಗಾರಿಯನ್ನು 120 ದಿನದೊಳಗೆ ಪೂರ್ಣಗೊಳಿಸಲೇಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಖಡಕ್‌ ಸೂಚನೆ ನೀಡಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಸಂಜೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೇಲ್ಸೇತುವೆ ಕಾಮಗಾರಿ ಕುರಿತು ಚರ್ಚಿಸಿದರು. ಜತೆಗೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

2022 ರಿಂದ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿದೆ. ವಿಜಯಪುರ ರಸ್ತೆ ಕಡೆಗೆ 650 ಮೀ, ಗದಗ ರಸ್ತೆಯ ಬಳಿ 320 ಮೀ, ಚನ್ನಮ್ಮ ವೃತ್ತದಿಂದ ಹೊಸೂರ ವೃತ್ತದವರೆಗೂ 850 ಮೀ, ಗೋಕುಲ ರಸ್ತೆಯ ವಿಮಾನ ನಿಲ್ದಾಣ ಕಡೆಗೆ 600 ಮೀ.ಸೇರಿ ಒಟ್ಟು 3.10 ಕಿಮೀ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ ಎಂದರು.

120 ದಿನದೊಳಗೆ ಪೂರ್ಣಗೊಳಿಸಿ:

ಸದ್ಯ ಕಾಮಗಾರಿ ನಡೆಯಲು ಸಂಚಾರ ನಿಯಂತ್ರಣ ಮಾಡುವ ಅಗತ್ಯವಿದೆ. ಹಾಗಾಗಿ ಕೆಲ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಕಾಮಗಾರಿ ನಡೆಸಬೇಕು. ಏ.20ರಿಂದ ಆಗಸ್ಟ್‌ 19ರವರೆಗೆ ಸಂಚಾರ ಬದಲಾವಣೆ ಮಾಡಿ ಕಾಮಗಾರಿ ನಡೆಸಬೇಕು. ಚನ್ನಮ್ಮ ವೃತ್ತದಿಂದ ಹೊಸೂರು ವೃತ್ತದ ವರೆಗೂ 850 ಮೀಟರ್ ಚನ್ನಮ್ಮ ವೃತ್ತದ ಆಯ್ದ ಭಾಗಗಳಲ್ಲಿ ಪಿಲ್ಲರ್ ಕಾಮಗಾರಿಗಳಿಗೆ ಬ್ಯಾರಿಕೇಡಿಂಗ್ ಮಾಡಿಕೊಳ್ಳಲು, ವಿಜಯಪುರ ರಸ್ತೆಯಲ್ಲಿ ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತದ ವರೆಗೂ 150 ಮೀ ಸಿವಿಲ್ ಕಾಮಗಾರಿ ನಡೆಸಬೇಕು ಎಂದು ಸೂಚನೆ ನೀಡಿದರು.

ಕಾಮಗಾರಿ ಅವಧಿಯಲ್ಲಿ ಚನ್ನಮ್ಮ ವೃತ್ತದಿಂದ ಹೊಸೂರ ವೃತ್ತ ಹಾಗೂ ವಿಜಯಪುರ ರಸ್ತೆಯಲ್ಲಿ 80 ಗರ್ಡರ್ ಹಾಗೂ 16 ಸ್ಲ್ಯಾಬ್‌ಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಚನ್ನಮ್ಮ ವೃತ್ತದಲ್ಲಿ ರೋಟರಿ ಕಾಮಗಾರಿಗಾಗಿ ಪೋರ್ಟ್‌ಲ್ ಕ್ಯಾಪ್ ನಿರ್ಮಾಣ ಸೇರಿದಂತೆ ಅಗತ್ಯ ಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಈ ಎರಡು ಕಡೆಯ ಮೇಲ್ಸೇತುವೆ 120 ದಿನದೊಳಗೆ ಪೂರ್ಣಗೊಳಿಸಲೇಬೇಕು. ಅಲ್ಲಿನ ಮೇಲ್ಸೇತುವೆ ಅಷ್ಟೇ ಅಲ್ಲ. ಕೆಳಗಿನ ರಸ್ತೆ ಕೂಡ ಮುಗಿಯಲೇಬೇಕು. ಅಷ್ಟರೊಳಗೆ ಮುಗಿಯದಿದ್ದರೆ ಸರಿಯಿರಲಿಲ್ಲ ಎಂದು ಖಡಕ್‌ ವಾರ್ನಿಂಗ್‌ ನೀಡಿದರು.

ಈ ಎರಡು ಕಡೆಯ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು, ಸಂಚಾರ ಶುರುವಾದ ಬಳಿಕ ಗದಗ ರಸ್ತೆ ಸಂಪರ್ಕಿಸುವ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಅಲ್ಲಿವರೆಗೂ ಈ ಎರಡು ರಸ್ತೆಗಳನ್ನು ಬಂದ್‌ ಮಾಡಿ ಅತ್ಯಂತ ತೀವ್ರಗತಿಯಲ್ಲಿ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಿದರು. ಜತೆಗೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡರು.

ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಪರಿಶೀಲನೆ ನಡೆಸುವಂತೆ ಇದೇ ವೇಳೆ ಜಿಲ್ಲಾಧಿಕಾರಿಗಳು, ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರು:

ಇದಕ್ಕೂ ಮುನ್ನ ಧಾರವಾಡ ಗ್ರಾಮೀಣ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಕುಡಿಯುವ ನೀರು ಸರಬಾರಾಜು ಮಾಡುತ್ತಿರುವ ಎಲ್‌ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಪ್ರಹ್ಲಾದ ಜೋಶಿ, ಕುಡಿವ ನೀರಿನ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪ್ರತಿ ಪ್ರದೇಶಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡುವಂತೆ ಮತ್ತು ಸರಬರಾಜಿಗಿರುವ ತೊಂದರೆ ಕೂಡಲೇ ಬಗೆಹರಿಸಿಕೊಡಬೇಕು. ಜನರಿಗೆ ತೊಂದರೆಯಾಗದಂತೆ ಸತತ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಎಲ್‌ಆ್ಯಂಡ್‌ಟಿ ಅವರು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಕೆಲವೊಂದು ಪ್ರದೇಶಗಳಿಗೆ 8-10 ದಿನಗಳಿಗೊಮ್ಮೆ ನೀರು ಸರಬರಾಜು ಆಗುವಂತಾಗಿದೆ. ಸಮರ್ಪಕವಾಗಿ ನಿಭಾಯಿಸಿದರೆ 4-5 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬಹುದು ಎಂದು ಸೂಚಿಸಿದರು.

ಯೋಜನೆಯಲ್ಲಿ ಒಟ್ಟು 139 ಮೇಲ್ಮಟ್ಟ ಜಲಗಾರಗಳಿದ್ದು, ಇದರಲ್ಲಿ 30 ಮೇಲ್ಮಟ್ಟ ಜಲಗಾರಗಳ ಕಾಮಗಾರಿಯು ಪೂರ್ಣಗೊಂಡಿರುತ್ತವೆ. 39 ಮೇಲ್ಮಟ್ಟ ಜಲಗಾರಗಳ ಕಾಮಗಾರಿಯು ವಿವಿಧ ಹಂತದಲ್ಲಿರುತ್ತದೆ. ಸಚಿವರು ಸದರಿ ಕಾಮಗಾರಿಯ ಪ್ರಗತಿಯನ್ನು ದಿನನಿತ್ಯ ಪರಿಶೀಲಿಸಲು ಹಾಗೂ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಅಲ್ಲದೆ ಕಾಮಗಾರಿದಲ್ಲಿ ಕಾರ್ಮಿಕಗಳ ಸಂಖ್ಯೆ ಸಹ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬೇಸಿಗೆ ಕಾಲದಲ್ಲಿ ಯಾವುದೇ ಕಾರಣದಿಂದ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ನೀರಿನ ಅಭಾವ ಇದ್ದಲ್ಲಿ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಬೇಕು. ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿ ಏ.10 ಇಲ್ಲವೇ 11ರಂದು ನಗರದಲ್ಲಿ ಮತ್ತೆ ಸಭೆ ಕರೆಯುವುದಾಗಿ ತಿಳಿಸಿದರು.

ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪಾಲಿಕೆ ಮೇಯರ್‌ ರಾಮಪ್ಪ ಬಡಿಗೇರ, ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ಇತರರು ಭಾಗವಹಿಸಿದ್ದರು.

Share this article