ಚಿನ್ನಸ್ವಾಮಿ ಸ್ಟೇಡಿಯಂಗೆ ಸಚಿವ ಪರಮೇಶ್ವರ್‌ ಭೇಟಿ

KannadaprabhaNewsNetwork |  
Published : Jun 06, 2025, 12:43 AM IST
ಪರಮೇಶ್ವರ್‌  | Kannada Prabha

ಸಾರಾಂಶ

ಆರ್‌ಸಿಬಿ ವಿಜಯೋತ್ಸವದ ವೇಳೆ ಎಂ.ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂ ಬಳಿ ಕಾಲ್ತುಳಿತ ಮಹಾದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಬುಧವಾರ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್‌ಸಿಬಿ ವಿಜಯೋತ್ಸವದ ವೇಳೆ ಎಂ.ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂ ಬಳಿ ಕಾಲ್ತುಳಿತ ಮಹಾದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಬುಧವಾರ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಲ್ತುಳಿತ ಸಂಭವಿಸಿದ ಗೇಟ್‌ಗಳ ಬಳಿ ತೆರಳಿ ವೀಕ್ಷಿಸಿದ ಗೃಹ ಸಚಿವರು, ಮುರಿದು ಬಿದ್ದ ಗೇಟ್‌ಗಳನ್ನು ಪರಿಶೀಲಿಸಿದರು. ಈ ವೇಳೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಅವರು ದುರಂತ ಘಟನೆ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಿದರು.

ನಂತರ ಗೃಹ ಸಚಿವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಪದಾಧಿಕಾರಿಗಳು, ಆರ್‌ಸಿಬಿ ತಂಡದ ಪದಾಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಘಟನೆ ಕುರಿತು ಸಭೆ ನಡೆಸಿ ಚರ್ಚಿಸಿದರು. ಅವಘಡದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು. ಈ ವೇಳೆ ಪೊಲೀಸ್ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನೂ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ಈ ಘಟನೆ ಸಂಬಂಧ ಮುಖ್ಯಮಂತ್ರಿ ಅವರು ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸಿದ್ದು, ಅದರ ಪ್ರಕ್ರಿಯೆ ಆರಂಭವಾಗಿದೆ. ಸ್ಟೇಡಿಯಂನ ಯಾವ ಸ್ಥಳದಲ್ಲಿ ಕಾಲ್ತುಳಿತ ಆಗಿದೆ. ಅದನ್ನು ಯಾವ ರೀತಿ ತಪ್ಪಿಸಬಹುದಿತ್ತು ಎಂಬುದನ್ನು ತಿಳಿದುಕೊಳ್ಳಲು ಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.

ಸ್ಟೇಡಿಯಂನ ಗೇಟ್‌ ಸಂಖ್ಯೆ 6, 7, 2 ಮತ್ತು 2ಎ, 17, 18, 21, 16ರ ಬಳಿ ಕಾಲ್ತುಳಿತ ಆಗಿದೆ. ಘಟನೆ ನಡೆದ ಸ್ಥಳದಲ್ಲಿ ಜನ ಮೃತಪಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ಆಸ್ಪತ್ರೆಗೆ ಕರೆದೊಯ್ಯುವಾಗ, ಚಿಕಿತ್ಸೆ ವೇಳೆ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ ಯಾವ ಗೇಟ್‌ನಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಸಚಿವರು ತಿಳಿಸಿದರು.ವಿಧಾನಸೌಧದ ಮುಂದೆ ಒಂದು ಲಕ್ಷ ಜನ ಸೇರುತ್ತಾರೆ ಎಂದು ಅಂದಾಜಿಸಲಾಗಿತ್ತು. ಸ್ಟೇಡಿಯಂನಲ್ಲಿ 40 ಸಾವಿರ ಮತ್ತು ಸ್ಟೇಡಿಯಂ ಹೊರಗಡೆ 2.50 ಲಕ್ಷ ಜನ ಸೇರಿದ್ದರು ಎಂಬುದಾಗಿ ಅಂದಾಜಿಸಲಾಗಿದೆ. ಮೆಟ್ರೋ ಸಂಸ್ಥೆಯವರು ಹೇಳುವ ಪ್ರಕಾರ ಸುಮಾರು 9 ಲಕ್ಷ ಜನ ಪ್ರಯಾಣಿಸಿದ್ದಾರೆ. ಇಷ್ಟೊಂದು ಜನ ಒಂದೇ ಕಡೆ ಸೇರಿದ್ದರ ಉದಾಹರಣೆಗಳಿಲ್ಲ. ದುರ್ದೈವದಿಂದ ಈ ರೀತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ