ಕನ್ನಡಪ್ರಭ ವಾರ್ತೆ ನಾಲತವಾಡ
ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರೊಂದಿಗೆ ಪಟ್ಟಣದ ಮಾರ್ಗವಾಗಿ ತೆರಳಿದ ಸಚಿವರು, ಸ್ಥಳೀಯ ಹೃದಯಭಾಗದ ವೀರೇಶ್ವರ ಪುತ್ಥಳಿಗೆ ಹೂಮಾಲೆ ಸಮರ್ಪಿಸಿ ಸ್ಥಳೀಯ ಗಣ್ಯರಿಂದ ಹಾಗೂ ಗೆಳೆಯರ ಬಳಗದಿಂದ ಸನ್ಮಾನ ಸ್ವೀಕರಿಸಿದರು. ನಂತರ ಬಸವಸಾಗರ ಜಲಾಶಯದತ್ತ ತೆರಳಿದ ಸಚಿವರು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಹಾಗೂ ಕೆಬಿಜೆಎನ್‌ಎಲ್‌ನ ಅಧಿಕಾರಿಗಳೊಂದಿಗೆ ಮುದ್ದೇಬಿಹಾಳ, ರಾಯಚೂರು, ರಾಯಚೂರು, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯ ಜೀವನಾಡಿ ಬಸವಸಾಗರ ಜಲಾಶಯವನ್ನು ವೀಕ್ಷಣೆ ಮಾಡಿದರು.ಪಕ್ಕದ ಅಮೃತ ಕಂಪನಿ ಗುತ್ತಿಗೆಯ ಪೀರಾಪುರ-ಬೂದಿಹಾಳ ಏತ ನೀರಾವರಿ 2ನೇ ಹಂತದ ಯೋಜನೆಯ ತಾಂತ್ರಿಕ ನಿರ್ವಹಣೆಯ ಕಚೇರಿಯಲ್ಲಿ, ಡಿಜಿಟಲ್ ತಂತ್ರಜ್ಞಾನ ಮೂಲಕ ಪ್ರಾಯೋಗಿಕ ನೀರು ಹರಿಸುವಿಕೆಗೆ ಮೌಸ್ ಬಟನ್ ಒತ್ತುವ ಮೂಲಕ ಪರೀಕ್ಷೆ ಮಾಡಿದರು.
ಯೋಜನೆಯ ಮುಖ್ಯ ಉದ್ದೇಶ ಹಾಗೂ ನಿರ್ವಹಣೆಯ ಕುರಿತು ಬಿಪಿಎಲ್‌ಐ ವಿಸ್ತರಣೆ, ಮೂಲ, ನೀರಿನ ಅವಶ್ಯಕತೆ, 17805 ಹೆಕ್ಟರ್ ಪ್ರದೇಶದ ನೀರಾವರಿ ಪ್ರದೇಶದ ಮಾಹಿತಿ, ಪಂಪ್ ಹೌಸ್ ನೆಲದ ಮಟ್ಟ, ಸಂಪ್ ಮಹಡಿ ಮಟ್ಟ, ಮೋಟಾರ್ ಮಹಡಿ ಮಟ್ಟ, ಸೇವನೆ ಕಾಲುವೆ, ಪಂಪಿಂಗ್ ಯಂತ್ರಗಳು, ಪಂಪ್‌ಗಳ ಸಂಖ್ಯೆ, ಸಾಮರ್ಥ್ಯ, ಇಓಟಿ ಕ್ರೇನ್ ಕುರಿತು ಅಂಕಿ-ಸಂಖ್ಯೆ ಸಮೇತ ಅಧಿಕಾರಿಗಳೊಂದಿಗೆ ಚರ್ಚಿಸಿ, ಪಕ್ಕದ ಸ್ಕಾಡಾ ಸ್ವಯಂ ಚಾಲಿತ ಗೇಟ್ ನಿಯಂತ್ರಣ ಕಚೇರಿಯಲ್ಲಿ ಮಾಹಿತಿ ಪಡೆದುಕೊಂಡರು.ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಸಚಿವರು, ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದರೆ ಕಾಲುವೆಗಳಿಗೆ ಅವಶ್ಯಕತೆಯ ನೀರು ಹರಿಸಲು ಸಾಧ್ಯ, ಮುಖ್ಯವಾಗಿ ಕುಡಿಯುವ ನೀರು ಜನ-ಜಾನುವಾರುಗಳ ಹಿತ ಕಾಪಾಡಬೇಕಿದೆ. ನಮಗೆ ನಿತ್ಯ ಕೇವಲ 3 ಟಿಎಂಸಿ ನೀರು ಮಾತ್ರ ಬರುತ್ತಿದೆ, ಆಗಸ್ಟ್‌ನಲ್ಲಿ ಮಳೆಯ ನಿರೀಕ್ಷೆ ಮಾಡಲಾಗಿದೆ. ಜಲಾಶಯಗಳಿಗೆ ದಿನಕ್ಕೆ 7 ಟಿಎಂಸಿ ನೀರು ಬಂದರೆ ಯಾವುದೇ ಸಮಸ್ಯೆ ಇಲ್ಲ, ಜಲಾಶಯದ ಆಧಾರಿತ ಬಿತ್ತನೆ ಬೇಡ ಎಂದ ಸಚಿವರು, ನಾವೆಲ್ಲರೂ ಮಳೆಯ ಮೇಲೆ ನಿರೀಕ್ಷೆ ಇಡಬೇಕಿದೆ. ನಮ್ಮಲ್ಲಿ ಕೇವಲ 10 ಟಿಎಂಸಿ ಮಾತ್ರ ಹೆಚ್ಚುವರಿ ನೀರಿದೆ, ಕುಡಿಯುವ ನೀರಿಗೆ ಹೆಚ್ಚು ಆದ್ಯತೆ ನೀಡಬೇಕಿದೆ, ರೈತರು ಸಹಕರಿಸಿ ಎಂದು ಹೇಳಿದರು.
ಈ ವೇಳೆ ದಂಡಾಧಿಕಾರಿ ಕೀರ್ತಿ ಚಾಲಕ, ಸಿಪಿಐ ಮಹ್ಮದ ಫಶಿವುದ್ದೀನ್, ಸ್ಥಳಿಯ ಗಣ್ಯರಾದ ಶಿವಪ್ಪಗೌಡ ತಾತರಡ್ಡಿ, ಅಮರಪ್ಪ ಗಂಗನಗೌಡ್ರ, ರಾಯನಗೌಡ್ರ ತಾತರಡ್ಡಿ, ಟಿಎಪಿಸಿಎಂಎಸ್ ನಿರ್ದೇಶಕರಾದ ಅಶೋಕ ಇಲಕಲ್, ಮುತ್ತುಗೌಡ ಗೊರಬಾಳ, ಬಾಬು ಡೇರೆದ, ಅಮರ ದೇಶಮುಖ, ಬಸವರಾಜ ಗುರೂಜಿ, ಎಚ್.ಟಿ.ಕುರಿ, ಸಂಗಯ್ಯ ಡಂಬಳ, ದಂಡಪ್ಪ ಜಾವಳಗೇರಿ, ಜೆ.ಟಿ.ಇಲಕಲ್, ಸಂಗಣ್ಣ ಮುರಾಳ, ಗುಡದಪ್ಪ ಕಮರಿ, ಪಪಂ ಸಿಓ ಪ್ರಶಾಂತ ಸಿ, ಸಿದ್ದಣ್ಣ ಆಲಕೊಪ್ಪರ, ಹನುಮಂತ ದೋರನಹಳ್ಳಿ, ಮಹ್ಮದ ನಾಡದಾಳ, ಗುರು ತಂಗಡಗಿ ಇದ್ದರು. ಮುದ್ದೇಬಿಹಾಳ ಜಲಾಶಯ ಗೇಟುಗಳಿಗೆ ಸಂಬಂಧಿಸಿದ ಸ್ಥಳಿಯ ಪೋಲೀಸರು ಬಿಗಿ ಬಂದೋಬಸ್ಟ್ ಕೈಗೊಂಡಿದ್ದರು.