ರಮೇಶ್ ಬಿದರಕೆರೆ
ಸಚಿವ ಡಿ.ಸುಧಾಕರ್ ರವರ ಜನಪರ ಕಾಳಜಿಯ ಫಲವಾಗಿ ನಗರದ ವಾರ್ಡ್‌ಗಳಲ್ಲಿ 24.6 ಕೋಟಿ ರು. ವೆಚ್ಚದಲ್ಲಿ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ಭರದಿಂದ ಸಾಗುತ್ತಿದೆ. ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ನಗರದ ವಿವಿಧ ಪ್ರದೇಶಗಳಲ್ಲಿ 49 ಕಿಮೀ ಉದ್ದದ ನೀರು ವಿತರಣಾ ಕೊಳವೆ ಮಾರ್ಗಗಳನ್ನು ಅಳವಡಿಸಲಾಗುತ್ತಿದೆ. ವಾಣಿವಿಲಾಸ ಜಲಾಶಯ ಭದ್ರಾ ಜಲಾಶಯದ ನೀರಿನ ಮೂಲ ಆಧರಿಸಿ ನಗರ ಭಾಗದ 6,579 ಮನೆಗಳಿಗೆ ಮೀಟರ್ ಅಳವಡಿಕೆ ಸಮೇತ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಈಗಾಗಲೇ ನಗರದಲ್ಲಿರುವ ನೀರು ವಿತರಣೆಯ ಪೈಪ್‌ಲೈನ್ ಗಳ ಜತೆಗೆ ಹೊಸದಾಗಿ ಅಮೃತ್ 2.0 ಯೋಜನೆಯ ಪೈಪ್‌ಲೈನ್ ಗಳ ಅಳವಡಿಕೆಯಾಗುತ್ತಿರುವುದರಿಂದ ಕುಡಿಯುವ ನೀರಿನ ವಿತರಣೆ ಸಾಮರ್ಥ್ಯ ವೃದ್ಧಿಯಾಗಲಿದೆ. ನಗರದ ಜನಸಂಖ್ಯೆ ಹೆಚ್ಚಿದಂತೆ ದಿನಂಪ್ರತಿ ನೀರಿನ ಬೇಡಿಕೆಯೂ ಹೆಚ್ಚುವ ಮುಂದಾಲೋಚನೆ ಇಟ್ಟುಕೊಂಡು ನೀರು ಸರಬರಾಜಿನ ಯೋಜನೆ ರೂಪಿಸಲಾಗಿದೆ. ಈಗಾಗಲೇ ನಗರದ ಅವಧಾನಿ ನಗರದಲ್ಲಿ 5 ಲಕ್ಷ ಲೀ. ಸಾಮರ್ಥ್ಯದ 15 ಮೀಟರ್ ಎತ್ತರದ ಜಲ ಸಂಗ್ರಹಾಗಾರ ನಿರ್ಮಾಣವಾಗುತ್ತಿದೆ. ನಗರದ ವಿವಿಧ ಪ್ರದೇಶಗಳಲ್ಲಿ 49.10ಕಿಮೀ ಉದ್ದದ ಎಚ್‌ಡಿಪಿಇ ವಿತರಣಾ ಕೊಳವೆ ಮಾರ್ಗ ಅಳವಡಿಸುವಿಕೆಯು ಶುರುವಾಗಿ ಈಗಾಗಲೇ ಸುಮಾರು 25 ಕಿ.ಮೀನಷ್ಟು ಕೊಳವೆ ಮಾರ್ಗ ಅಳವಡಿಸುವಿಕೆ ಕಾರ್ಯ ಪೂರ್ಣಗೊಂಡಿದೆ. ಜೊತೆಗೆ ಈಗ ಇರುವ 17.57 ಎಂಎಲ್‌ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕಕ್ಕೆ ಆನ್‌ಲೈನ್ ಮೋನಿಟರಿಂಗ್ ಸಿಸ್ಟಮ್ ಅಳವಡಿಸುವಿಕೆ ಕಾರ್ಯವೂ ಸಹ ಈ ಯೋಜನೆಯಲ್ಲಿ ಸೇರಿದೆ. ನಗರದ ಅಭಿವೃದ್ಧಿ ಮತ್ತು ನಗರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಸಚಿವ ಡಿ ಸುಧಾಕರ್ ಅವರು ಕಾಳಜಿ ವಹಿಸಿದ್ದು ಬರುವ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿನ ತೊಂದರೆಗಳು ಕಡಿಮೆಯಾಗಲಿವೆ ಎನ್ನಲಾಗಿದೆ. ಜೊತೆಗೆ ಹಿರಿಯೂರು ನಗರಕ್ಕೆ ಸಮಗ್ರ ಒಳಚರಂಡಿ ಯೋಜನೆಯನ್ನು ಕಲ್ಪಿಸುವ ಬಗ್ಗೆ 206 ಕೋಟಿ ರು. ಮೊತ್ತಕ್ಕೆ ಯೋಜನಾ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಆಡಳಿತಾತ್ಮಕ ಅನುಮೋದನೆಗಾಗಿ ಈ ಹಿಂದೆ ಸಲ್ಲಿಸಲಾಗಿತ್ತು. ಆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯಲ್ಲಿ ಪರಿಶೀಲಿಸಿದ ನಂತರ ಡಿಪಿಆರ್ ಮೊತ್ತವು ಹೆಚ್ಚಾಗಿದ್ದು ಒಮ್ಮೆಲೇ ಅನುಮೋದನೆ ನೀಡುವುದು ಕಷ್ಟಕರವೆಂದು ತಿಳಿಸಿ ಎರಡು ಹಂತಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ತಾಂತ್ರಿಕವಾಗಿ ಪರಿಶೀಲಿಸಿ ಯೋಜನಾ ವರದಿಯನ್ನು ಮಾರ್ಪಡಿಸಿ ಮೊದಲ ಹಂತದಲ್ಲಿ ನಗರದ ಹೃದಯ ಭಾಗದ ಪ್ರದೇಶಕ್ಕೆ ಒಳಚರಂಡಿ ವ್ಯವಸ್ಥೆ ಯೋಜನಾ ವರದಿ ಸಲ್ಲಿಸುವಂತೆ ಮೌಖಿಕವಾಗಿ ತಿಳಿಸಲಾಗಿತ್ತು. ಅದರಂತೆ ತಾಂತ್ರಿಕವಾಗಿ ಪರಿಶೀಲಿಸಿದ ನಂತರ ನಗರದ ದಕ್ಷಿಣ ಭಾಗವಾದ ವೇದಾವತಿ ನದಿಯಿಂದ ಬಲಭಾಗದ ಪ್ರದೇಶಕ್ಕೆ ಮೊದಲನೇ ಹಂತದ ಯೋಜನಾ ವರದಿಯನ್ನು 122 ಕೋಟಿ ರು.ಗೆ ತಯಾರಿಸಿ ಸರ್ಕಾರಕ್ಕೆ ಅನುಮೋದನೆಗೆ ಮರು ಸಲ್ಲಿಸಲಾಗಿತ್ತು. ಆದರೆ ಸರ್ಕಾರದಿಂದ ಯೋಜನಾ ವರದಿಯನ್ನು 100 ಕೋಟಿ ರು.ಗೆ ಸೀಮಿತಗೊಳಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದೀಗ ನೀರು ನಿರ್ವಹಣಾ ಘಟಕ ಮತ್ತು ಸಂಬಂಧಿಸಿದ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಒಟ್ಟಿನಲ್ಲಿ ನಗರ ನಿವಾಸಿಗಳಿಗೆ ಭವಿಷ್ಯದಲ್ಲೂ ಸಮರ್ಪಕ ಕುಡಿಯುವ ನೀರು ಪೂರೈಕೆಯ ಕ್ರಮ ವಹಿಸಲಾಗಿದೆ.---
ಬಾಕ್ಸ್ 1:ಹೊಸ ಟ್ಯಾಂಕ್ ನಿರ್ಮಾಣದಿಂದ ಜನರಿಗೆ ಅನುಕೂಲ: