ಸೋಲುವ ಭೀತಿಯಿಂದ ಸಿದ್ದುಗೆ ನಿದ್ದೆ ಬರ್ತಿಲ್ಲ: ವಿಜಯೇಂದ್ರ

KannadaprabhaNewsNetwork |  
Published : Apr 05, 2026, 02:00 AM IST
4ಕೆಡಿವಿಜಿ13, 14, 15, 16-ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದ ನಂತರ ದೇವಸ್ಥಾನ ಅಂಗಳದಲ್ಲಿ ದಕ್ಷಿಣ ಮತದಾರರು, ಸಾರ್ವಜನಿಕರು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ. ..................4ಕೆಡಿವಿಜಿ17-ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದ ನಂತರ ದೇವಸ್ಥಾನ ಅಂಗಳದಲ್ಲಿ ದಕ್ಷಿಣ ಮತದಾರರು, ಸಾರ್ವಜನಿಕರು, ಕಾರ್ಯಕರ್ತರ ಜೊತೆಗೆ ಹೆಜ್ಜೆ ಹಾಕುತ್ತಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳು ಕಾಂಗ್ರೆಸ್‌ನಿಂದ ಕೈಜಾರಿ ಹೋಗುತ್ತಿರುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿದ್ದೆಯೇ ಬರುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ:

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳು ಕಾಂಗ್ರೆಸ್‌ನಿಂದ ಕೈಜಾರಿ ಹೋಗುತ್ತಿರುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿದ್ದೆಯೇ ಬರುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ನಗರದಲ್ಲಿ ಶನಿವಾರ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರ ಬೃಹತ್‌ ರೋಡ್ ಶೋ ನಡೆಸಿ, ಮತಯಾಚಿಸಿದರು. ಈ ವೇಳೆ ಮಾತನಾಡಿ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಸಿದ್ದರಾಮಯ್ಯ ಗೊಂದಲಕ್ಕೆ ಸಿಲುಕಿದ್ದಾರೆ. ಎರಡೂ ಕ್ಷೇತ್ರ ಕೈತಪ್ಪುವ ಭೀತಿಯಿಂದ ಸಿದ್ದುಗೆ ನಿದ್ದೆಯೇ ಬರ್ತಿಲ್ಲ. ಸಚಿವರು ಸೂಟ್ ಕೇಸ್ ಹಿಡಿದುಕೊಂಡು ಬಂದು, ಅದೇ ಹಣದಲ್ಲಿ ಗೆಲ್ಲಲು ಬಂದಿದ್ದಾರೆ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿ ಲೋಕಸಭೆ ಚುನಾವಣೆ ಮಾಡಿದ್ದರು. ಈಗ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಅದೇ ರೀತಿ ಮಾಡಲು ಬಂದಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಾಗಲಿ, ಮುಖ್ಯಮಂತ್ರಿಗಾಗಲಿ ಇಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿದವರು ಅವರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಮತದಾರರಿಗೆ ದುಡ್ಡು ಹಂಚುತ್ತಿದ್ದಾರೆ. ‘ಶಾಮನೂರುರ ನೋಟು, ಬಿಜೆಪಿಗೆ ಓಟು’ ಎಂಬುದಾಗಿ ನಮ್ಮ ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ, ಎರಡೂ ಕ್ಷೇತ್ರದಲ್ಲೂ ಕಮಲದ ಹೂವನ್ನು ಅರಳಿಸಬೇಕೆಂಬ ಸಂಕಲ್ಪವನ್ನು ಸ್ವತಃ ಮತದಾರರು ಮಾಡಿದ್ದಾರೆ ಎಂದರು. ಈ ವೇಳೆ, ನೆರೆದಿದ್ದ ಕಾರ್ಯಕರ್ತರು, ‘ಶಾಮನೂರುರ ನೋಟು, ಬಿಜೆಪಿಗೆ ಓಟು’ ಎಂದು ಘೋಷಣೆ ಕೂಗಿದರು.

ಕಾಂಗ್ರೆಸ್‌ನವರು ಹಣದಿಂದ ಮತ ಗಳಿಸಲು ಸಾಧ್ಯವಿಲ್ಲ. ಮತದಾರರು ಈಗಾಗಲೇ ಬಿಜೆಪಿಯನ್ನು ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ. ‘ಹಿಂದುಳಿದವರ ನಡೆ, ಬಿಜೆಪಿ ಕಡೆ’ ಎನ್ನುವ ಸ್ಥಿತಿ ದಾವಣಗೆರೆಯಲ್ಲಿದೆ. ಸರ್ವ ಸಮಾಜದವರೂ ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಗೆಲ್ಲಿಸಲು ಸಂಕಲ್ಪ ತೊಟ್ಟಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರೂ ಪ್ರಚಾರಕ್ಕೆ ಬಂದಿದ್ದಾರೆ. ಜೆಡಿಎಸ್‌, ಬಿಜೆಪಿ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಜೆಡಿಎಸ್ ಸಹ ನಮ್ಮ ಅಭ್ಯರ್ಥಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಬೃಹತ್‌ ರೋಡ್‌ ಶೋ:

ದಾವಣಗೆರೆ ದಕ್ಷಿಣದಲ್ಲಿ ಅಹಿಂದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಶನಿವಾರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಾರಥ್ಯದಲ್ಲಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಪರ ಬೃಹತ್‌ ರೋಡ್ ಶೋ ನಡೆಸಿತು. ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ವಿಜಯೇಂದ್ರ, ದೇವಸ್ಥಾನದ ಮುಂಭಾಗದಲ್ಲಿ ಸ್ಥಳೀಯ ನಿವಾಸಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ, ‘ಹಿಂದುಳಿದ ಸಮುದಾಯಗಳ ನಡೆ, ಬಿಜೆಪಿ ಕಡೆ’ ಘೋಷವಾಕ್ಯದಡಿ ತೆರೆದ ವಾಹನದಲ್ಲಿ ಬೃಹತ್‌ ರೋಡ್‌ ಶೋ ನಡೆಸಿದರು. ಬಳಿಕ, ಜಾಲಿ ನಗರ, ಸುರೇಶ ನಗರ ಸೇರಿ ಕ್ಷೇತ್ರದ ವಿವಿಧೆಡೆ ಶ್ರೀನಿವಾಸ ದಾಸಕರಿಯಪ್ಪ ಜೊತೆ ಪಾದಯಾತ್ರೆಯಲ್ಲಿ ಸಾಗಿ, ಮತ ಬೇಟೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋಗಳಿಗೆ ಹೆಚ್ಚುತ್ತಿರುವ ಎಲ್‌ಪಿಜಿ ಸಂಕಷ್ಟ
ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ 10ರಂದು ಬೃಹತ್ ಜನ ಸಮಾವೇಶ