ಕನ್ನಡಪ್ರಭ ವಾರ್ತೆ ದಾವಣಗೆರೆ
ತಮ್ಮ ಪಕ್ಷದ ಹಿರಿಯ ನಾಯಕರಾಗಿದ್ದ ದಿವಂಗತ ಟಿ.ದಾಸಕರಿಯಪ್ಪ ಅವರ ಕಿರಿಯ ಪುತ್ರ, ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪಗೆ ಎಚ್‌ಡಿಕೆ ಶಕ್ತಿ ತುಂಬಿದರು. ನಗರದ ಹಳೆ ಭಾಗದ ಅಹಿಂದ ವರ್ಗದ ಮತಗಳನ್ನು ಗುರಿ ಆಗಿಸಿಕೊಂಡು ಇಲ್ಲಿನ ಕಾಯಿಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಶ್ರೀನಿವಾಸ ಪರ ರೋಡ್ ಶೋ ನಡೆಸಿ ಮತಯಾಚಿಸಿದರು.ತೆರೆದ ವಾಹನದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಲ್ಲಿನ ವಿವಿಧ ರಸ್ತೆಗಳ ಮಾರ್ಗವಾಗಿ ರೋಡ್ ಶೋ ಮಾಡಿ, ತಮ್ಮ ಮೈತ್ರಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪಗೆ ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಮೊದಲ ಸಲ ನಾನು ಪ್ರಚಾರಕ್ಕೆ ಬಂದಿದ್ದೇನೆ. ಲೋಕಸಭೆ ಕಲಾಪ ಇರುವುದಕ್ಕೆ ಇಲ್ಲಿಗೆ ಬರಲು ಆಗಲಿಲ್ಲ ಎಂದು ತಿಳಿಸಿದರು.ಸರ್ಕಾರ ವಿರುದ್ಧ ಕಿಡಿ: ‘ಯಾರ ಅಪ್ಪನ ಮನೆಯಿಂದ ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆ? ಮೇಲಿಂದ ಮೇಲೆ ತೆರಿಗೆಗಳನ್ನು ಹಾಕಿ, ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆ’ ಎಂದು ಆರ್ಥಿಕತೆ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ‘ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಕೇಂದ್ರಕ್ಕಿಂತ ತಮ್ಮದು ಅತ್ಯುತ್ತಮ ಬಜೆಟ್ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ತಲಾ ಆದಾಯ ಚೆನ್ನಾಗಿದ್ದರೆ ರಾಜ್ಯ ಸಂಪತ್ಭರಿತವಾಗಿದೆಯೆಂದರ್ಥ. ಆರ್ಥಿಕವಾಗಿ ಚೆನ್ನಾಗಿದ್ದಾಗ ಗ್ಯಾರಂಟಿ ಯೋಜನೆಗಳನ್ನು ಯಾಕೆ ಕೊಡುತ್ತಿದ್ದಾರೆ? ಕಾಂಗ್ರೆಸ್ಸಿಗರಿಗೆ ಅಭಿವೃದ್ಧಿ ಪದದ ಅರ್ಥವೇ ಗೊತ್ತಿಲ್ಲ. ಗ್ಯಾರಂಟಿ ಕೊಡುವುದಕ್ಕೆ ತಕರಾರು ಏನೂ ಇಲ್ಲ. ಆದರೆ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ನಾನು ರೈತರ ಸಾಲ ಮನ್ನಾ ಮಾಡಿದ್ದೆ. ಆಗ ಅಭಿವೃದ್ಧಿ ಕೆಲಸ ಆಗಲ್ಲವೆಂದು ಹೇಳಲಿಲ್ಲ. ಅಭಿವೃದ್ಧಿ ಸಹ ಮಾಡಿದ್ದೇವೆ. ಆದರೆ, ಈ ಸರ್ಕಾರ ಅಭಿವೃದ್ಧಿ ಮರೆತಿದೆ’ ಎಂದು ಕುಮಾರಸ್ವಾಮಿ ಟೀಕಿಸಿದರು.