ವಸಂತಕುಮಾರ ಕತಗಾಲ
ಕಾರವಾರ:ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಅವರ ತಂಡ ಆರ್.ವಿ. ದೇಶಪಾಂಡೆ ಅವರನ್ನು ಲೋಕಸಭೆಗೆ ಚುನಾವಣಾ ಕಣಕ್ಕಿಳಿಸಲು ಪ್ರಯತ್ನ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
ಕಾರವಾರದಲ್ಲಿ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ವೈದ್ಯ, ಆರ್.ವಿ. ದೇಶಪಾಂಡೆ ಲೋಕಸಭೆ ಚುನಾವಣೆಗೆ ನಿಂತಲ್ಲಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ವೈದ್ಯ ಅವರ ಈ ಹೇಳಿಕೆಯ ಹಿಂದೆ ರಾಜಕೀಯ ತಂತ್ರವೂ ಅಡಗಿದೆ. ಮಂಕಾಳ ವೈದ್ಯ ಹಾಗೂ ತಂಡ ಆರ್.ವಿ. ದೇಶಪಾಂಡೆ ಅವರನ್ನು ವಿರೋಧಿಸುತ್ತಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಈ ತಂಡದ ಹಿತಾಸಕ್ತಿಗೆ ದೇಶಪಾಂಡೆ ಅಡ್ಡಿಯಾಗಿದ್ದು, ಅವರನ್ನು ಹೇಗಾದರೂ ಮಾಡಿ ಕೇಂದ್ರಕ್ಕೆ ಸಾಗ ಹಾಕಿದಲ್ಲಿ ಜಿಲ್ಲೆಯ ಮಟ್ಟಿಗೆ ಪಕ್ಷದಲ್ಲಿ ತಾವು ಹೇಳಿದ್ದೇ ಕೊನೆ ಎಂಬ ಅಭಿಪ್ರಾಯಕ್ಕೆ ಬಂದಿರುವುದರಿಂದಲೆ ಈ ಹೇಳಿಕೆ ಹೊರಬಿದ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ 5 ತಿಂಗಳಾದರೂ ಇದುವರೆಗೂ ದೇಶಪಾಂಡೆ ಅವರ ಕ್ಷೇತ್ರವಾದ ಹಳಿಯಾಳಕ್ಕೆ ಕಾಲಿಟ್ಟಿಲ್ಲ. ಹಳಿಯಾಳ ಕ್ಷೇತ್ರದ ವ್ಯಾಪ್ತಿಗೆ ಬರುವ ಕಾರವಾರ ಉಪ ವಿಭಾಗಾಧಿಕಾರಿಯನ್ನು ಸಚಿವ ವೈದ್ಯ ವರ್ಗಾಯಿಸಿದಾಗ ಪಟ್ಟು ಬಿಡದೆ ಅದೇ ಅಧಿಕಾರಿಯನ್ನು ದೇಶಪಾಂಡೆ ಮುಂದುವರಿಸಿದ್ದರು. ಮಂಕಾಳ ವೈದ್ಯ ಉಸ್ತುವಾರಿ ಸಚಿವರಾದರೂ ಪಕ್ಷದಲ್ಲಿ ಜಿಲ್ಲೆಯ ಮಟ್ಟಿಗೆ ದೇಶಪಾಂಡೆ ತಮ್ಮದೆ ಆದ ಹಿಡಿತ ಹೊಂದಿದ್ದಾರೆ. ಹೇಗಾದರೂ ಮಾಡಿ ದೇಶಪಾಂಡೆ ಕೇಂದ್ರಕ್ಕೆ ಹೋದರೆ ರಾಜಕೀಯವಾಗಿ ಹಿಡಿತ ಸಾಧಿಸಬಹುದು ಲೆಕ್ಕಾಚಾರ ವೈದ್ಯ ಹಾಗೂ ತಂಡದ್ದಾಗಿದೆ.ಮಂಕಾಳ ವೈದ್ಯ ಹಾಗೂ ಸತೀಶ ಸೈಲ್ ಇಬ್ಬರೂ ಡಿ.ಕೆ. ಶಿವಕುಮಾರ ಅವರಿಗೆ ಆಪ್ತರು. ಆರ್.ವಿ. ದೇಶಪಾಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರು. ಮಂಕಾಳ ವೈದ್ಯ ಕೈಗೊಳ್ಳುವ ವರ್ಗಾವಣೆ ಇರಲಿ, ಯಾವುದೆ ಪ್ರಮುಖ ತೀರ್ಮಾನ ಇರಲಿ ಅದಕ್ಕೆ ದೇಶಪಾಂಡೆ ಅಡ್ಡಿಯಾಗಬಹುದು ಎನ್ನುವುದು ಉಪ ವಿಭಾಗಾಧಿಕಾರಿ ವರ್ಗಾವಣೆಯ ಸಂಗತಿಯೆ ನಿದರ್ಶನ. ಇದಕ್ಕಾಗಿ ದೇಶಪಾಂಡೆ ಅವರನ್ನು ಲೋಕಸಭೆ ಚುನಾವಣೆ ಕಣಕ್ಕಿಳಿಸುವ ಮಾತುಗಳು ಕೇಳಿಬರಲಾರಂಭಿಸಿದೆ. ಆದರೆ ಯಾವುದೆ ಕಾರಣಕ್ಕೂ ದೇಶಪಾಂಡೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಇದನ್ನು ದೇಶಪಾಂಡೆ ಅವರೇ ಕನ್ನಡಪ್ರಭಕ್ಕೆ ಸ್ಪಷ್ಟಪಡಿಸಿದ್ದಾರೆ. ದೇಶಪಾಂಡೆ ಅವರ ಬಗ್ಗೆ ಯಾವುದೆ ಅಸಮಾಧಾನ ಇಲ್ಲ. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರ ನನಗಿಲ್ಲ. ಹಳಿಯಾಳ ಕ್ಷೇತ್ರದ ಅಭಿವೃದ್ಧಿಯಲ್ಲಿ ನಾನು ತೊಡಗಿಕೊಂಡಿದ್ದೇನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.